

ಶಿವು ಹುಣಸೂರು
ಈಕೆ ನರ್ಸರಿ ಮೂಲಕ ಕೃಷಿಯಲ್ಲಿ ಖುಷಿ ಕಂಡ ಕೃಷಿ ಸಾಧಕಿ, ಸಂಪನ್ಮೂಲ ವ್ಯಕ್ತಿಯಾಗಿ ಸರ್ಕಾರಿ ಸೌಲಭ್ಯಗಳ ಕುರಿತು ಗ್ರಾಮೀಣ ಮಹಿಳೆಯರಿಗೆ ಮಾಹಿತಿ ನೀಡುವ ಮಾರ್ಗದರ್ಶಿ, ಅನ್ಯಾಯ ಅಕ್ರಮಗಳನ್ನು ಧೈರ್ಯವಾಗಿ ಪ್ರಶ್ನಿಸುವ ಧೀರವನಿತೆ…
ತಾಲೂಕಿನ ಹನಗೋಡು ಹೋಬಳಿ ಕಿರಂಗೂರು ಗ್ರಾಮದ ಆನಂದ್ ಅವರ ಪತ್ನಿ ಸೌಮ್ಯಾ ಆನಂದ್ ಅವರೇ ಬೇಸಾಯ ಎಂದು ಮೂಗು ಮುರಿಯುವವರಿಗೆ ಸ್ಫೂರ್ತಿಯಾಗಿರುವ ಮಹಿಳೆಯಾಗಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಮಾದರಿಯಾಗಿದ್ದಾರೆ. ಮೂರು ಎಕರೆ ಭೂಮಿಯಲ್ಲಿ ಹೊಗೆಸೊಪ್ಪು ಸೇರಿದಂತೆ ವಿವಿಧ ತರಕಾರಿ ಗಿಡಗಳ ನರ್ಸರಿ ಮಾಡಿ ಮಾರಾಟ ಮಾಡುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ.
ಅತ್ತೆ-ಮಾವನೇ ಸ್ಫೂರ್ತಿ: ಆನಂದ್‌ರನ್ನು ಮದುವೆಯಾಗಿ ಬಂದ ನಂತರ ಅತ್ತೆ ಮನೆಯಲ್ಲಿ ಅತ್ತೆಮಾವನ ಬುದ್ಧಿಮಾತುಗಳು, ಕೆಲವೊಮ್ಮೆ ಬೈಗುಳವೇ ತಮಗೆ ಜೀವನ ನಡೆಸುವ, ಸಾಧಿಸಲು ಸ್ಫೂರ್ತಿ ಎನ್ನುತ್ತಾರೆ ಸೌಮ್ಯಾ. ಈಗಲೂ ಜಮೀನಿನಲ್ಲಿ ತಾವೇ ದುಡಿದು ಸಂಪಾದಿಸಿ ಉಣ್ಣುತ್ತಿರುವ ತಮ್ಮ ಅತ್ತೆ-ಮಾವನ ಸ್ವಾಭಿಮಾನಿ ಬದುಕೇ ನನ್ನನ್ನು ಸ್ವಾವಲಂಬಿಯಾಗಿ ನಿಲ್ಲುವಂತೆ ಮಾಡಿತು ಎಂದು ಹೆಮ್ಮೆಯಿಂದ ಹೇಳುತ್ತಾರೆ.
ನರ್ಸರಿಯಲ್ಲಿ ಎತ್ತಿದ ಕೈ: ವಾಣಿಜ್ಯ ಬೆಳೆಗಳಾದ ಶುಂಠಿ ಮತ್ತು ತಂಬಾಕು ಬೆಳೆಯುತ್ತಿದ್ದ ಸೌಮ್ಯಾ, ನರ್ಸರಿ ಕೃಷಿಯ ಬಗ್ಗೆ ಆಸಕ್ತಿ ವಹಿಸಿದರು. ಅದರಂತೆ ಜನರು ಕೇಳಿಕೊಂಡು ಬರುವ ವಿವಿಧ ತರಕಾರಿ ಗಿಡಗಳ ಸಸಿಗಳನ್ನು ನರ್ಸರಿಯಲ್ಲಿ ಸಲಹಿ ಮಾರಾಟ ಮಾಡಲು ಆರಂಭಿಸಿದರು. ನಂತರ ನರ್ಸರಿಯೇ ಅವರ ಕೈಹಿಡಿಯಿತು. ಮೆಣಸು, ಬದನೆ, ಟೊಮ್ಯಾಟೋ, ನುಗ್ಗೆ, ಪಪ್ಪಾಯಿ, ಬಾಳೆ, ಅಷ್ಟೇಕೆ ತಂಬಾಕು ಸಸಿಗಳನ್ನು ಟ್ರೇನಲ್ಲಿಟ್ಟು 25 ದಿನಗಳ ಕಾಲ ಪೋಷಿಸಿ ಮಾರಾಟ ಮಾಡುತ್ತಾರೆ. ನರ್ಸರಿ ಕೃಷಿಗೆ ಇವರು ಕೀಟನಾಶಕವೊಂದನ್ನು ಹೊರತುಪಡಿಸಿ ಇನ್ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಕೇವಲ ಕೋಕಾಪಿಟ್ ಗೊಬ್ಬರವನ್ನೇ ಬಳಸುತ್ತಾರೆ. ಮನೆಯಲ್ಲಿ ಹಸು, ಕುರಿ, ಮೀನು ಸಾಕಣೆ ಕೂಡ ಮಾಡುತ್ತಾರೆ.
ಪೌಷ್ಟಿಕ ಕೈ ತೋಟ: ಮನೆ ಮನೆಗಳಲ್ಲಿ ರೈತರು ತಾವೇ ತರಕಾರಿಗಳನ್ನು ಬೆಳೆಯುವಂತಾಗಲು ಅನುಕೂಲವಾಗುವಂತೆ ರಾಜ್ಯ ಸರ್ಕಾರದ ಯೋಜನೆಗಳಲ್ಲಿ ಒಂದಾದ ಪೌಷ್ಟಿಕ ಕೈತೋಟ ಯೋಜನೆ ಜಾರಿಗೆ ತಂದಿದೆ. ಅದರಂತೆ ಸಂಜೀವಿನಿ ಒಕ್ಕೂಟ, ಎನ್‌ಆರ್‌ಎಲ್‌ಎಂ, ನರೇಗಾ ಮತ್ತು ಗ್ರಾ.ಪಂ. ಸಹಯೋಗದಲ್ಲಿ ಸ್ಥಳೀಯವಾಗಿ ಸಂಜೀವಿನಿ ಒಕ್ಕೂಟದ ಸದಸ್ಯರನ್ನು ಗುರುತಿಸಿ ಆಸಕ್ತ ಮಹಿಳೆಯರಿಗೆ ಸಸಿಗಳನ್ನು ಪೂರೈಸಲು ನರ್ಸರಿ ಸ್ಥಾಪಿಸಿ ಸಸಿಗಳನ್ನು ವಿತರಿಸುವ ಯೋಜನೆ ಇದಾಗಿದೆ. ಅದರಂತೆ ಕಿರಂಗೂರು ತಾಲೂಕು ಮಟ್ಟದ ಸಂಜೀವಿನಿ ಒಕ್ಕೂಟದ ಭಾಗವಾಗಿರುವ ಭುವನೇಶ್ವರಿ ಸ್ತ್ರೀಶಕ್ತಿ ಸಂಘದ ಸದಸ್ಯೆಯಾಗಿದ್ದ ಸೌಮ್ಯಾರನ್ನು ಕಿರಂಗೂರು ಗ್ರಾ.ಪಂ. ವ್ಯಾಪ್ತಿಯ 7 ಹಳ್ಳಿಗಳಿಗೆ ಸಸಿಗಳನ್ನು ಪೂರೈಸುವ ಯೋಜನೆಗೆ ಸೇರಿಸಿಕೊಳ್ಳಲಾಯಿತು. ಒಟ್ಟು 101 ಫಲಾನುಭವಿಗಳಿಗೆ ಪ್ರತಿ ಫಲಾನುಭವಿಗೆ ತಲಾ 14 ಬಗೆಯ ಸಸಿಗಳನ್ನು ನೀಡುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದರು. ತಮ್ಮ ನರ್ಸರಿಯಲ್ಲಿ 15 ಮಂದಿಗೆ ಉದ್ಯೋಗ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಅರಿವು ಕಾರ್ಯಕ್ರಮ: ಎನ್‌ಆರ್‌ಎಲ್‌ಎಂನ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಯಾಗಿ ನೇಮಕಗೊಂಡಿರುವ ಸೌಮ್ಯಾ ತಮ್ಮ ಭಾಗದ ಮಹಿಳೆಯರಿಗೆ ಸ್ಫೂರ್ತಿಯ ಚಿಲುಮೆಯಾಗಿ ನಿಂತಿದ್ದಾರೆ. ಸ್ತ್ರೀಶಕ್ತಿ ಸಂಘದ ಶಕ್ತಿ, ಲಾಭ, ನಿರ್ವಹಣೆಯ ಕುರಿತು ಅರಿವು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಪುಸ್ತಕಗಳ ನಿರ್ವಹಣೆ ಹೇಗೆ? ಸರ್ಕಾರದಿಂದ ಮಹಿಳೆಯರಿಗೆ ಮತ್ತು ರೈತರಿಗೆ ಸಿಗುವ ಸೌಲಭ್ಯಗಳೇನು? ಅವುಗಳನ್ನು ಪಡೆದುಕೊಳ್ಳುವುದು ಹೇಗೆ ಎಂದು ವಿವರವಾಗಿ ತಿಳಿಸುತ್ತಾರೆ.
ಗ್ರಾಮಸಭೆಗಳಲ್ಲಿ ಪಾಲ್ಗೊಳ್ಳುವುದು, ಅನ್ಯಾಯ, ಅಕ್ರಮಗಳಾಗಿದ್ದರೆ ಅಥವಾ ಯೋಜನಗಳ ಕುರಿತು ಅನುಮಾನವಿದ್ದರೆ ಧೈರ್ಯವಾಗಿ ಕೇಳಿ ತಿಳಿದುಕೊಳ್ಳುವ ಮತ್ತು ತಪ್ಪಿತಸ್ಥರಿಗೆ ತಿಳಿಹೇಳುವ ಕಾರ್ಯವನ್ನೂ ಮಾಡುತ್ತಾರೆ. ಸಾಮಾಜಿಕ ಕಳಕಳಿಯೊಂದಿಗೆ ರೈತಮಹಿಳೆಯರಿಗೆ ನೆರವಾಗುವ ಅವರ ಮನೋಭಾವ ಎಲ್ಲರ ಮೆಚ್ಚುಗೆ ಗಳಿಸಿದೆ. ಸೌಮ್ಯಾರ ಸಾಧನೆಯ ಹಾದಿಗೆ ಪುತ್ರ ಶಶಾಂಕ್, ಪತಿ ಆನಂದ್ ಬೆನ್ನೆಲುಬಾಗಿ ನಿಂತಿದ್ದಾರೆ. ಜತೆಯಲ್ಲಿ ತೋಟಗಾರಿಕೆ ಸಹಾಯಕ ನಿರ್ದೇಶಕಿ ನೇತ್ರಾವತಿ ಮತ್ತು ಎನ್‌ಆರ್‌ಎಲ್‌ಎಂ ಸಹಾಯಕ ನಿರ್ದೇಶಕಿ ಮಂಜುಳಾರ ಸಹಕಾರ ಅನನ್ಯವಾದುದು.
ಮನೆಯಲ್ಲಿ ಅತ್ತೆ-ಮಾವನಿಂದ ಜೀವನಾನುಭವದ ಪಾಠ ತಿಳಿದ ನಂತರ ಸ್ತ್ರೀಶಕ್ತಿ ಸಂಘವೇ ನನ್ನ ಜೀವನದ ದಿಕ್ಕನ್ನು ಬದಲಿಸಿತು. ಸಂಜೀವಿನಿ ಒಕ್ಕೂಟ ನನ್ನ ಜೀವನಕ್ಕೆ ಭದ್ರ ಬುನಾದಿಯನ್ನು ನೀಡಿತು. ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ನಮಗೆ ಸಂಜೀವಿನಿ ಒಕ್ಕೂಟ ನಿಜಕ್ಕೂ ಸಂಜೀವಿನಿಯೇ ಆಯಿತು. ಬದುಕಬೇಕೆನ್ನುವ ಛಲ, ಹಠ ನಮ್ಮಲ್ಲಿದ್ದರೆ ಗುರಿ ತಲುಪಲು ಹಾದಿಗಳಿವೆ. ಮಹಿಳೆಯರು ಮನೆಯಲ್ಲಿ ಕುಳಿತುಕೊಳ್ಳದೆ ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಮಾಜಕ್ಕೂ, ಕುಟುಂಬಕ್ಕೂ ಆಧಾರವಾಗಿ ನಿಲ್ಲಬೇಕು.
ಸೌಮ್ಯಾ ಆನಂದ್