ರಸ್ತೆಬದಿ ಬೇಡ, ಇಲ್ಲಿಗೆ ಬನ್ನಿ...! ಮೂತ್ರ ವಿಸರ್ಜಿಸೋಕೆ ಇಟ್ಟಿದ್ದಾರೆ ಹೂಕುಂಡ; ಇದರ ಹಿಂದಿದೆ ಭಾರಿ ಐಡ್ಯಾ..!

Green Pee
Published on

ಮಹಾನಗರಗಳಲ್ಲಿ ಅಲ್ಲಲ್ಲಿ ಸಾರ್ವಜನಿಕ ಶೌಚಗೃಹಗಳು ಇರುತ್ತವೆಯಾದರೂ, ಅವು ಎಲ್ಲಿವೆ ಎಂಬ ಮಾಹಿತಿ ಇರುವುದಿಲ್ಲ. ಕೆಲವೊಮ್ಮೆ ಸ್ಥಳೀಯರಿಗೂ ತಿಳಿದಿರುವುದಿಲ್ಲ. ಹೀಗಿರುವಾಗ ಪ್ರವಾಸಿಗರ ಪಾಡು ಹೇಳತೀರದು. ಇದಕ್ಕೆಂದೇ ನೆದರ್ಲೆಂಡ್​ನ ಆಮ್​ಸ್ಟರ್​ಡ್ಯಾಮ್​ನಲ್ಲಿ ವಿನೂತನ ಯೋಜನೆ ರೂಪಿಸಲಾಗಿದೆ. ಇಲ್ಲಿ ಸಾರ್ವಜನಿಕ ಶೌಚಗೃಹಗಳಿಗಿಂತ ತೆರೆದ ಮುತ್ರಾಲಯಗಳನ್ನು ಸ್ಥಾಪಿಸಲಾಗುತ್ತಿದೆ.

ಗ್ರೀನ್​ ಪೀ ಎಂಬ ಸಂಸ್ಥೆ ಈ ಯೋಜನೆ ರೂಪಿಸಿದೆ. ನಗರದ ಪ್ರಮುಖ ಸ್ಥಳಗಳಲ್ಲಿ ಅಲ್ಲಲ್ಲಿ ಹೂಕುಂಡಗಳು, ಸಸ್ಯಕುಂಡಗಳನ್ನು ಇಡಲಾಗಿದೆ. ನಗರದ ಸೌಂದರ್ಯ ಹೆಚ್ಚಿಸುವುದು ಮಾತ್ರವಲ್ಲ, ರಸ್ತೆಬದಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜಿಸುವುದನ್ನು ತಡೆಯುವುದು ಕೂಡ ಇದರ ಉದ್ದೇಶವಾಗಿದೆ. ರಸ್ತೆಬದಿ ಮೂತ್ರ ವಿಸರ್ಜಿಸುವ ಹಾವಳಿ ಹೆಚ್ಚಿರುವ ಸ್ಥಳಗಳಲ್ಲಿಯೇ ಇವುಗಳನ್ನು ಇಡಲಾಗಿದೆ.

ಈ ಯೋಜನೆಯ ಇನ್ನೊಂದು ವಿಶೇಷವೆಂದರೆ, ಈ ತೊಟ್ಟಿಗಳಲ್ಲಿ ಸಂಗ್ರಹವಾಗುವ ಮೂತ್ರವನ್ನು ನಿಯಮಿತವಾಗಿ ಸಂಗ್ರಹಿಸಲಾಗುತ್ತದೆ. ಅದರಿಂದ ಗೊಬ್ಬರಕ್ಕೆ ಬೇಕಾಗುವ ಫಾಸ್ಪೇಟ್​ ಪಡೆಯಲಾಗುತ್ತದೆ. ಜತೆಗೆ ಮೂತ್ರ ಬಳಸಿ ವಿದ್ಯುತ್​ ಉತ್ಪಾದನೆ ಕೂಡ ಇದರಲ್ಲಿ ಸೇರಿದೆ. ಮೂತ್ರದಿಂದ ಒಂದು ದೀಪ ಬೆಳಗಬಹುದು ಎನ್ನುವುದಾದರೆ ಅದಕ್ಕಿಂತ ಉತ್ತಮವಾದುದು ಇನ್ನೇನಿದೆ ಎನ್ನುತ್ತಾರೆ ಗ್ರೀನ್​ ಪೀ ಸಂಸ್ಥೆ ಪದಾಧಿಕಾರಿಗಳು.

ಪ್ರಾಯೋಗಿಕ ನೆಲೆಯಲ್ಲಿ ಈ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರ ನಗರದ ಇನ್ನಷ್ಟು ಕಡೆಗಳಲ್ಲಿ ಇಂಥ ತೆರೆದ ಮೂತ್ರಾಲಯಗಳನ್ನು ಸ್ಥಾಪಿಸಿದೆ. ಇಷ್ಟೇ ಫ್ರಾನ್ಸ್​ನಲ್ಲೂ ಕೂಡ ಕೋವಿಡ್​ ಹಿನ್ನೆಲೆಯಲ್ಲಿ ಸಾರ್ವಜನಿಕ ಶೌಚಗೃಹಗಳನ್ನು ಮುಚ್ಚಿದ್ದ ಹಿನ್ನೆಲೆಯಲ್ಲಿ ಇದೇ ಯೋಜನೆ ಅಳವಡಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net