

ಕೋಲ್ಕತ: ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳ ಹಾಗೂ ಒಡಿಶಾ ಕರಾವಳಿಯತ್ತ ಮುನ್ನುಗುತ್ತಿದ್ದು, ಬುಧವಾರ ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಈಗಾಗಲೇ ಎರಡೂ ರಾಜ್ಯಗಳಲ್ಲಿ ಭಾರಿ ಮಳೆ ಪ್ರಾರಂಭವಾಗಿದೆ.
ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈಗಾಗಲೇ ಕಡಲ ಬಳಿ ವಾಸಿಸುವ ಸುಮಾರು 3 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಅಂಫಾನ್ ಚಂಡಮಾರುತ ಭೀತಿ ಹಿನ್ನೆಲೆ ಬುಧವಾರದಿಂದ ಗುರುವಾರ ಬೆಳಗ್ಗೆವರೆಗೂ ಪಶ್ಚಿಮ ಬಂಗಾಳದಲ್ಲಿ ಯಾವುದೇ ಶ್ರಮಿಕ ವಿಶೇಷ ರೈಲುಗಳ ಓಡಾಟ ನಡೆಸುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಪಶ್ಚಿಮ ಬಂಗಾಳ ಮತ್ತು ಒಡಿಶಾದ ವಿವಿಧೆಡೆ ಎನ್ಡಿಆರ್ಎಫ್ನ 41 ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದ್ದು, ಇನ್ನೂ ಕೆಲ ತಂಡಗಳನ್ನು ಸಿದ್ಧವಾಗಿರಿಸಲಾಗಿದೆ. ಸ್ಥಳಾಂತರಿಸಲಾಗುತ್ತಿರುವ ಜನರ ವಸತಿಗಾಗಿ ಹಲವೆಡೆ ಶಿಬಿರಗಳನ್ನು ಪ್ರಾರಂಭಿಸಲಾಗಿದೆ. 2013ರಲ್ಲಿ ಭಾರಿ ಹಾನಿಯುಂಟು ಮಾಡಿದ್ದ ಪೈಲಿನ್ ಚಂಡಮಾರುತದ ಬಳಿಕ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕಡಲ ತೀರಕ್ಕೆ ಅಪ್ಪಳಿಸುತ್ತಿರುವ ಅತಿ ಪ್ರಬಲ ಚಂಡಮಾರುತ ಅಂಫಾನ್ ಎಂದು ತಜ್ಞರು ಹೇಳಿದ್ದಾರೆ.
ಒಡಿಶಾದ 6 ಜಿಲ್ಲೆಗಳಿಗೆ ಹಾನಿಯ ಭೀತಿ: ಅಂಫಾನ್ ಚಂಡಮಾರುತ ರಾಜ್ಯದ 6 ಜಿಲ್ಲೆಗಳಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಲಿವೆ ಎಂದು ಒಡಿಶಾದ ಹವಾಮಾನ ಇಲಾಖೆಯ ಉಪ ನಿರ್ದೇಶಕ ಉಮಾಶಂಕರ್ ದಾಸ್ ಹೇಳಿದ್ದಾರೆ. ಕೇಂದ್ರಪರಾ ಭದ್ರಕ್, ಬಲಾಸೋರ್, ಮಯೂರ್ಭಂಜ್, ಜಾಜ್ಪುರ್ ಮತ್ತು ಜಗತ್ಸಿಂಗಪುರ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎನ್ನಲಾಗಿದೆ.
ಅಮಿತ್ ಷಾರಿಂದ ನೆರವಿನ ಭರವಸೆ: ಗೃಹ ಸಚಿವ ಅಮಿತ್ ಷಾ ಪಶ್ಚಿಮ ಬಂಗಾಳ ಹಾಗೂ ಒಡಿಶಾ ಮುಖ್ಯಮಂತ್ರಿಗಳಿಗೆ ಮಂಗಳವಾರ ಮುಂಜಾನೆ ಕರೆ ಮಾಡಿ ಮಾತನಾಡಿ, ಪರಿಸ್ಥಿತಿ ನಿರ್ವಹಣೆಗೆ ಎಲ್ಲ ರೀತಿಯ ಸಹಾಯ ನೀಡುವ ಭರವಸೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ (ಎನ್ಡಿಆರ್ಎಫ್) ಜತೆಗೆ ಮುಂಜಾಗ್ರತ ಕ್ರಮಗಳ ಬಗ್ಗೆ ಸೋಮವಾರವೇ ಪರಿಶೀಲನೆ ನಡೆಸಿದ್ದಾರೆ.