

ನವದೆಹಲಿ: ಕೃಷಿ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೆರವಾಗುವ ದೃಷ್ಟಿಯಿಂದ ಮೇಲಾಧಾರರಹಿತ (ಕೊಲ್ಯಾಟರಲ್-ಫ್ರೀ) ಸಾಲದ ಮೊತ್ತವನ್ನು ಭಾರತೀಯ ರಿಸರ್ವ್ ಬ್ಯಾಂಕ್ 1.6 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗೆ ಹೆಚ್ಚಿಸಿದ್ದು, ಇದು ಹೊಸ ವರ್ಷದ ಮೊದಲ ದಿನದಿಂದ ಜಾರಿಗೆ ಬರಲಿದೆ. ಪ್ರತಿ ಸಾಲಗಾರನಿಗೆ 2 ಲಕ್ಷ ರೂ.ವರೆಗಿನ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳ ಸಾಲಗಳಿಗೆ ಮೇಲಾಧಾರ ಮತ್ತು ಮಾರ್ಜಿನ್ ಅವಶ್ಯಕತೆಗಳನ್ನು ಮನ್ನಾ ಮಾಡಲು ದೇಶದ ಎಲ್ಲ ಬ್ಯಾಂಕ್ಗಳಿಗೆ ಆರ್ಬಿಐ ಹೊರಡಿಸಿರುವ ಹೊಸ ನಿರ್ದೇಶನದಲ್ಲಿ ಸೂಚಿಸಲಾಗಿದೆ.
ಬೇಸಾಯದ ವೆಚ್ಚ ಹೆಚ್ಚುತ್ತಿದ್ದು, ರೈತರಿಗೆ ಸುಲಭವಾಗಿ ಸಾಲ ಸಿಗಲಿ ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ರೈತ ಸಮುದಾಯದಲ್ಲಿ ಶೇ. 86ರಷ್ಟಿರುವ ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ ಇದರಿಂದ ಲಾಭವಾಗಲಿದೆ ಎಂದು ಕೃಷಿ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಈ ಕುರಿತ ಮಾರ್ಗಸೂಚಿಗಳನ್ನು ತ್ವರಿತವಾಗಿ ಜಾರಿಗೊಳಿಸಿ, ಈ ಹೊಸ ಸಾಲ ಸೌಲಭ್ಯದ ಕುರಿತು ವ್ಯಾಪಕವಾಗಿ ಅರಿವು ಮೂಡಿಸುವಂತೆ ಬ್ಯಾಂಕ್ಗಳಿಗೆ ಸೂಚನೆ ನೀಡಲಾಗಿದೆ.
ಭಾರತದಲ್ಲಿರುವ ಆರ್ಥಿಕ ಅಸಮಾನತೆಯನ್ನು ತೊಡೆದುಹಾಕುವ ಸಲುವಾಗಿ ಸರ್ಕಾರ ಅತಿ ಶ್ರೀಮಂತರಿಗೆ ಹೆಚ್ಚಿನ ತೆರಿಗೆ ವಿಧಿಸಬೇಕು ಎಂದು ಫ್ರೆಂಚ್ ಅರ್ಥಶಾಸ್ತ್ರಜ್ಞ ಹಾಗೂ ಲೇಖಕ ಥಾಮಸ್ ಪಿಕೆಟಿ ಸಲಹೆ ನೀಡಿದ್ದಾರೆ. ದೆಹಲಿ ಮೂಲದ ಸಂಸ್ಥೆ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಜಗತ್ತಿನ ಅತಿ ಶ್ರೀಮಂತರಿಗೆ ಹೆಚ್ಚುವರಿ ತೆರಿಗೆ ವಿಧಿಸಲು ಜಿ20 ಶೃಂಗಸಭೆಯಲ್ಲಿ ಪ್ರಮುಖ ರಾಷ್ಟ್ರಗಳು ಅಂಗೀಕರಿಸಿರುವ ‘ಜುಲೈ ಪ್ಲೆಡ್ಜ್’ಗೆ ಅನುಗುಣವಾಗಿ ಭಾರತವೂ ನಡೆದುಕೊಳ್ಳಬೇಕಿದೆ ಎಂದು ಅಭಿಪ್ರಾಯ ಪಟ್ಟರು.
2022-23ರ ಅಂಕಿಅಂಶಗಳ ಪ್ರಕಾರ, ಇಡೀ ದೇಶದ ಒಟ್ಟು ಸಂಪತ್ತಿನ ಪೈಕಿ ಶೇ. 40ರಷ್ಟು ಸಂಪತ್ತು ಶೇ.1ರಷ್ಟು ಶ್ರೀಮಂತ ಭಾರತೀಯರ ನಿಯಂತ್ರಣದಲ್ಲಿದೆ. 10 ಕೋಟಿ ರೂ.ಗಿಂತ ಹೆಚ್ಚು ಆಸ್ತಿ ಹೊಂದಿರುವವರಿಗೆ ಶೇ. 2ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವುದರಿಂದ ಮತ್ತು ಶೇ. 33ರಷ್ಟು ಪಿತ್ರಾರ್ಜಿತ ಆಸ್ತಿ ತೆರಿಗೆ ವಿಧಿಸುವುದರಿಂದ ಭಾರತ ತನ್ನ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ. 2.73ರಷ್ಟು ಆದಾಯವನ್ನು ಪ್ರತಿ ವರ್ಷ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.