

ಕೋಲ್ಕತಾ: ಕರೊನಾ ವೈರಸ್ ಹಾವಳಿ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈಗಿನ ಸ್ಥಿತಿ ಹೇಗಿದೆ ಎಂದರೆ ಯಾರನ್ನೂ ನಂಬುವಂತಿಲ್ಲ. ಅದರಲ್ಲಿಯೂ ಹೊರ ಊರುಗಳಿಂದ, ರಾಜ್ಯಗಳಿಂದ ಬಂದವರ ಬಗ್ಗೆ ಬಹು ಎಚ್ಚರಿಕೆ ವಹಿಸುವುದು ಇಂದಿನ ಅನಿವಾರ್ಯತೆ ಆಗಿದೆ.
ಇದೇ ಕಾರಣಕ್ಕೆ ಅಮ್ಮ-ಮಗ ಇಬ್ಬರೂ ಸ್ಮಶಾನದಲ್ಲಿ ಮಲಗಬೇಕಾಗಿ ಬಂದ ದಾರುಣ ಘಟನೆ, ಪಶ್ಚಿಮ ಬಂಗಾಳದ ಕೋಲ್ಕತದಲ್ಲಿ ನಡೆದಿದೆ.
ದೆಹಲಿಯಿಂದ ಹೌರಾ ಜಿಲ್ಲೆಯಲ್ಲಿರುವ ತಮ್ಮ ಮನೆಗೆ ವಾಪಸಾದ ಅಮ್ಮ-ಮಗನನ್ನು ಕರೊನಾ ಹರಡುವ ಭೀತಿಯಿಂದ ಸ್ಥಳೀಯರು ತಡೆದ ಹಿನ್ನೆಲೆಯಲ್ಲಿ ಈ ಸ್ಥಿತಿ ತಲೆದೋರಿದೆ.
ಮೊಹುವಾ ಮುಖರ್ಜಿ ಮತ್ತು ಮಗ ರೋಹಿತ್ ಶುಕ್ರವಾರ ರಾಜಧಾನಿ ಎಕ್ಸ್ಪ್ರೆಸ್ನಲ್ಲಿ ದೆಹಲಿಯಿಂದ ಹಿಂದಿರುಗಿದ್ದರು. ಹೇಳಿ ಕೇಳಿ ದೆಹಲಿ ಮೊದಲೇ ಕರೊನಾ ಹಾಟ್‌ಸ್ಪಾಟ್. ಇನ್ನು ಕೇಳಬೇಕೆ? ಇವರಿಬ್ಬರೂ ಬರುತ್ತಿದ್ದಂತೆಯೇ ಸ್ಥಳೀಯರು ಊರಿನ ಒಳಗೆ ಪ್ರವೇಶವೇ ಕೊಡಲಿಲ್ಲ!
ವಿಧವೆಯಾಗಿರುವ ಮೊಹುವಾ ದೆಹಲಿಯಲ್ಲಿ ಮಗ ರೋಹಿತ್ ಜತೆ ಚಿನ್ನಾಭರಣ ವ್ಯವಹಾರ ಮಾಡುತ್ತಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವರ ವ್ಯವಹಾರದಲ್ಲಿ ನಷ್ಟ ಆಗತೊಡಗಿತು. ಆದ್ದರಿಂದ ದೆಹಲಿ ಬಿಟ್ಟು ತವರು ಸೇರುವ ಹಿನ್ನೆಲೆಯಲ್ಲಿ, ಇಬ್ಬರೂ ಪಶ್ಚಿಮ ಬಂಗಾಳದ ರಘುದೆಬ್ಪುರ್-ದಕ್ಬಂಗಲೋಗೆ ವಾಪಸಾಗುತ್ತಿದ್ದರು.
ಊರಿಗೆ ಬರುವ ಮಧ್ಯೆಯೇ ಅವರನ್ನು ಸ್ಥಳೀಯರು ತಡೆದಿದ್ದಾರೆ. ನೀವು ಕರೊನಾ ಸೋಂಕು ಅಂಟಿಸಿಕೊಂಡು ಬಂದಿದ್ದೀರಿ, ಇಲ್ಲಿಗೆ ಬರಬೇಡಿ ಎಂದು ಹೇಳಿದ್ದಾರೆ. ನಂತರ ಮೊಹವಾ ಅವರು ಪಂಚಾಯತ್ ಸದಸ್ಯರ ಜತೆ ದೆಹಲಿಯಿಂದ ಬಂದಿರುವ ವಿಷಯವನ್ನು ತಿಳಿಸಿದ್ದಾರೆ. ಆದರೂ ಸ್ಥಳೀಯರ ಅವರ ಮಾತು ಕೇಳಲಿಲ್ಲ. ಈ ಹಿನ್ನೆಲೆಯಲ್ಲಿ ಇಡೀ ರಾತ್ರಿ ತಾಯಿ-ಮಗ ಸ್ಮಶಾನದಲ್ಲಿ ಕಾಲ ಕಳೆದಿದ್ದಾರೆ.
ಈ ಘಟನೆ ಬಗ್ಗೆ ಶನಿವಾರ ಬೆಳಗ್ಗೆ ಪೊಲೀಸರಿಗೆ ವಿಷಯ ತಿಳಿದಿದೆ. ಬಳಿಕ ತಮ್ಮ ಊರಾದ ರಘುದೆಬ್ಪುರ್-ದಕ್ಬಂಗಲೋ ಮನೆಗೆ ತೆರಳುವಂತೆ ಹೇಳಿದ್ದಾರೆ. ಬಳಿಕ ಅಲ್ಲಿ 14 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿರುವಂತೆ ಸೂಚಿಸಿದ್ದಾರೆ. (ಏಜೆನ್ಸೀಸ್)