ಕಾಂಗ್ರೆಸ್​-ಬಿಜೆಪಿ ಆಡಳಿತದಲ್ಲಿ ಕಿಲೋಮೀಟರ್​ಗಟ್ಟಲೆ ವ್ಯತ್ಯಾಸ: ಅಮಿತ್ ಷಾ

Amit Shah
Published on

ಮಧ್ಯಪ್ರದೇಶ: ಕೇಂದ್ರದಲ್ಲಿ ಕಾಂಗ್ರೆಸ್​ ನೇತೃತ್ವದ ಸರ್ಕಾರ ಹಾಗೂ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಯಾರು ಹೆಚ್ಚು ಎನ್ನುವ ವಿಚಾರ ಆಗಾಗ ಆಯಾ ಪಕ್ಷಗಳಿಂದ ಮುನ್ನೆಲೆಗೆ ಬರುತ್ತಿರುತ್ತದೆ. ಈಗಲೂ ಅಂಥದ್ದೇ ಒಂದು ವಿಚಾರ ಹೊರಹೊಮ್ಮಿದ್ದು, ಎರಡೂ ಪಕ್ಷಗಳ ಆಡಳಿತದಲ್ಲಿನ ವ್ಯತ್ಯಾಸವನ್ನು ಕಿಲೋಮೀಟರ್​ಗಳಲ್ಲಿ ವ್ಯಾಖ್ಯಾನಿಸಲಾಗಿದೆ.

ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ರಾಜಮಾತಾ ವಿಜಯರಾಜೇ ಸಿಂಧ್ಯಾ ಏರ್​ಪೋರ್ಟ್​ನ ನೂತನ ಟರ್ಮಿನಲ್​ಗೆ ಶಿಲಾನ್ಯಾಸ ನಡೆಸಿದ ಕೇಂದ್ರ ಗೃಹಸಚಿವರ ಅಮಿತ್ ಷಾ ತಮ್ಮ ಸರ್ಕಾರದ ಸಾಧನೆಗಳನ್ನು ಬಣ್ಣಿಸಿದರು. ಜೊತೆಗೆ ಆ ವಿಚಾರದಲ್ಲಿ ಕಾಂಗ್ರೆಸ್​ ಸರ್ಕಾರದೊಂದಿಗೆ ಇರುವ ವ್ಯತ್ಯಾಸವನ್ನೂ ತಿಳಿಸಿದರು.

ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿ ಆಗುತ್ತಿದೆ ಎಂದು ಹೇಳಿದ ಷಾ, ಸೋನಿಯಾ-ಮನಮೋಹನ್ ಸರ್ಕಾರದಲ್ಲಿ ದಿನವೊಂದರಲ್ಲಿ 7 ಕಿ.ಮೀ.ನಷ್ಟು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿತ್ತು. ಆದರೆ ನಮ್ಮ ಸರ್ಕಾರದಲ್ಲಿ ದಿನಕ್ಕೆ 37 ಕಿ.ಮೀ.ನಷ್ಟು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ ಎಂದರು. ಅವರ ಕಾಲದಲ್ಲಿ ವರ್ಷಕ್ಕೆ 375 ಕಿ.ಮೀ.ನಷ್ಟು ರೈಲು ಹಳಿ ಹಾಕಲಾಗಿತ್ತು. ಆದರೆ ನಮ್ಮ ಅವಧಿಯಲ್ಲಿ 1,458 ಕಿ.ಮೀ.ನಷ್ಟು ರೈಲ್ವೆ ಹಳಿ ಹಾಕಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್ ಚೌಹಾಣ್ ಮತ್ತು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net