

ನವದೆಹಲಿ: ಬುಧವಾರ (ಡಿ.13) ಸಂಸತ್ತಿನಲ್ಲಿ ನಡೆದ ಭಾರಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ಈ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಜೆಂಡಾ ಆಜ್ತಕ್ 2023 ಸಂವಾದದಲ್ಲಿ ಮಾತನಾಡಿದ ಅಮಿತ್ ಷಾ, ಇದೊಂದು ಗಂಭೀರ ಘಟನೆ. ಆದರೆ, ಪ್ರತಿಪಕ್ಷಗಳು ಇದರಲ್ಲೂ ರಾಜಕೀಯ ಮಾಡುತ್ತಿದೆ. ಸಹಜವಾಗಿಯೇ ಲೋಪ ಉಂಟಾಗಿದೆ ನಿಜ. ಆದರೆ, ಸಂಸತ್ತಿನ ಭದ್ರತೆಯು ಸ್ಪೀಕರ್ ಅಡಿಯಲ್ಲಿದೆ ಎಂದು ಎಲ್ಲರಿಗೂ ತಿಳಿದಿದೆ ಮತ್ತು ಸ್ಪೀಕರ್ ಅವರು ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ನಾವು ತನಿಖಾ ಸಮಿತಿಯನ್ನು ರಚನೆ ಮಾಡಿದ್ದು, ಆದಷ್ಟು ಬೇಗ ಸ್ಪೀಕರ್ಗೆ ವರದಿಯನ್ನು ಕಳುಹಿಸಿಕೊಡಲಾಗುತ್ತದೆ ಎಂದು ಹೇಳಿದರು.
ಭದ್ರತಾ ಉಲ್ಲಂಘನೆ ಪ್ರಕರಣದ ತನಿಖೆಯನ್ನು ಸಮಿತಿಗೆ ವಹಿಸಲಾಗಿದೆ ಮತ್ತು ಲೋಕಸಭೆಯ ಭದ್ರತೆಯನ್ನು ಹೆಚ್ಚಿಸುವ ಬಗ್ಗೆಯೂ ಪರಿಶೀಲಿಸುವುದಾಗಿ ಅಮಿತ್ ಷಾ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಲೋಪದೋಷಗಳು ಇರಬಾರದು. ಆದರೆ, ಆ ಕೊರತೆಯನ್ನು ತುಂಬುವುದು ನಮ್ಮ ಜವಾಬ್ದಾರಿಯಾಗಿದೆ. ಇದನ್ನು ರಾಜಕೀಯ ವಿಷಯವನ್ನಾಗಿ ಮಾಡಬೇಡಿ ಎಂಬುದು ನನ್ನ ಮನವಿ ಎಂದು ಅಮಿತ್ ಷಾ ಹೇಳಿದರು.
ನಡೆದಿದ್ದೇನು?
ಡಿ.13ರಂದು ಲೋಕಸಭಾ ಕಲಾಪದ ಶೂನ್ಯ ವೇಳೆಯಲ್ಲಿ ಆರೋಪಿ ಸಾಗರ್ ಶರ್ಮಾ, ಸಂದರ್ಶಕರ ಗ್ಯಾಲರಿಯಿಂದ ಚೇಂಬರ್‌ಗೆ ಜಿಗಿದ ಆಘಾತಕಾರಿ ದೃಶ್ಯಗಳಿಗೆ ಸಾಕ್ಷಿಯಾಯಿತು. ಹಳದಿ ಹೊಗೆ ಹೊರಸೂಸುವ ಡಬ್ಬಿಯನ್ನು ತೆರೆದು ಸ್ಪೀಕರ್ ಕುರ್ಚಿಯನ್ನು ತಲುಪುವ ಪ್ರಯತ್ನದಲ್ಲಿ ಸಾಗರ್ ಶರ್ಮ ಡೆಸ್ಕ್‌ನಿಂದ ಡೆಸ್ಕ್‌ಗೆ ಜಿಗಿದನು. ಆದರೆ, ಕೆಲ ಸಂಸದರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸುತ್ತಿದ್ದಂತೆ, ಅಲ್ಲಿಯೇ ಇದ್ದ ಮನೋರಂಜನ್ ಕೂಡ ಹೊಗೆ ಡಬ್ಬಿ ತೆರೆದು ಓಡಲು ಆರಂಭಿಸಿದರು. ಆದರೆ, ಆತನನ್ನು ಕೂಡ ಶೀಘ್ರದಲ್ಲೇ ವಶಕ್ಕೆ ಪಡೆಯಲಾಯಿತು. ಲೋಕಸಭೆಯ ಒಳಗೆ ನಡೆದ ಈ ಆಘಾತಕಾರಿ ಘಟನೆಗೂ ಮುನ್ನ ನೀಲಂ ದೇವಿ ಮತ್ತು ಅಮೋಲ್ ಶಿಂಧೆ ಸಂಸತ್ತಿನ ಹೊರಗೆ ಹೊಗೆ ಡಬ್ಬಿಗಳನ್ನು ಸಿಡಿಸಿದರು ಮತ್ತು “ಸರ್ವಾಧಿಕಾರ”ದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಆರೋಪಿಗಳ ಉದ್ದೇಶವೇನು?
ದೇಶದಲ್ಲಿನ ನಿರುದ್ಯೋಗ, ಹಣದುಬ್ಬರ ಮತ್ತು ಮಣಿಪುರದ ಹಿಂಸಾಚಾರದಂತಹ ಸಮಸ್ಯೆಗಳನ್ನು ಎತ್ತಿ ತೋರಿಸಲು ಮತ್ತು ಅವುಗಳನ್ನು ಸಂಸತ್ತಿನಲ್ಲಿ ಚರ್ಚಿಸುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ನಾವೆಲ್ಲರೂ ಸೇರಿ ಸಂಸತ್ತಿನ ಒಳಗೆ ನುಗ್ಗುವ ಸಂಚು ರೂಪಿಸಿದೆವು ಎಂದು ಆರೋಪಿಗಳು ತನಿಖಾಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾರೆ.
ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಹೇಳಿಕೆ ನೀಡಬೇಕೆಂದು ಒತ್ತಾಯಿಸಿ ಗದ್ದಲ ಎಬ್ಬಿಸಿದ್ದರಿಂದ ಲೋಕಸಭೆಯ 14 ಪ್ರತಿಪಕ್ಷ ಸಂಸದರನ್ನು ಅಮಾನತು ಮಾಡಲಾಗಿದೆ. ಅಮಾನತುಗೊಂಡಿರುವ 14 ಸಂಸದರ ಪೈಕಿ ಒಂಬತ್ತು ಮಂದಿ ಕಾಂಗ್ರೆಸ್, ಇಬ್ಬರು ಸಿಪಿಎಂ, ಒಬ್ಬರು ಸಿಪಿಐ ಮತ್ತು ಇಬ್ಬರು ಡಿಎಂಕೆ ಪಕ್ಷದವರಾಗಿದ್ದಾರೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್)