More

  ದುಶ್ಯಾಸನರಿಂದ ರಕ್ಷಿಸುವವರಿಲ್ಲ!; ಮೃಗೀಯ ದೌರ್ಜನ್ಯಕ್ಕೆ ಹೈಕೋರ್ಟ್ ಆಕ್ರೋಶ

  ಬೆಂಗಳೂರು: ದ್ರೌಪದಿಯನ್ನು ವಿವಸ್ತ್ರಗೊಳಿಸಿದಾಗ ಆಕೆಯನ್ನು ಪಾರು ಮಾಡಲು ಕೃಷ್ಣನಿದ್ದ. ಈಗಿನದು ದುಶ್ಯಾಸನರ ಕಾಲ. ಹಾಗಾಗಿ ಸಹಾಯಕ್ಕೆ ಬರಲು ಯಾರೂ ಇಲ್ಲ. ಸಂತ್ರಸ್ತೆಯನ್ನು ಪ್ರಾಣಿಗಿಂತ ಕೀಳಾಗಿ ನಡೆಸಿಕೊಳ್ಳಲಾಗಿದೆ. ಇವರು ಮನುಷ್ಯರೆಂದು ಕರೆಸಿಕೊಳ್ಳಲು ಯೋಗ್ಯರಲ್ಲ ಎಂದು ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಗುರವಾರ ವಿಚಾರಣೆ ನಡೆಸಿತು. ಸ್ವಾತಂತ್ರ್ಯ ಬಂದ ನಂತರವೂ ಇಂತಹ ಘಟನೆ ನಡೆದಿರುವುದು ತಲೆತಗ್ಗಿಸುವಂತಹದು ಎಂದು ಅಸಮಾಧಾನ ಹೊರಹಾಕಿದೆ. ಸತತವಾಗಿ ಎರಡು ಗಂಟೆಗಳ ಕಾಲ ಸಂತ್ರಸ್ತ ಮಹಿಳೆಯನ್ನು ಹಿಂಸಿಸಲಾಗಿದೆ. ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಲಾಗಿದೆ. ಬಡವರ ಮೇಲೆಯೇ ಇಂತಹ ದೌರ್ಜನ್ಯ ಎಸಗಲಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಸಂತ್ರಸ್ತೆಗೆ ಅತ್ಯುತ್ತಮ ಚಿಕಿತ್ಸೆ, ಕೌನ್ಸೆಲಿಂಗ್ ಒದಗಿಸುವ ಅಗತ್ಯವಿದೆ. ಯಾವ ಆಸ್ಪತ್ರೆಯಲ್ಲಿ ಯಾವ ವೈದ್ಯರು ಚಿಕಿತ್ಸೆ ನೀಡಿದ್ದಾರೆ? ಪೊಲೀಸರು ಕೈಗೊಂಡ ಕ್ರಮವೇನು? ಎಂಬುದರ ಕುರಿತು ವರದಿ ನೀಡಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಕೋರ್ಟ್ ಸೂಚಿಸಿದೆ.

  ‘ಯತ್ರ ನಾರ್ಯಸ್ತು ಪೂಜ್ಯಂತೆ, ರಮಂತೇ ತತ್ರ ದೇವತಾ’ ಎಂಬ ಉಕ್ತಿ ಚಾಲ್ತಿಯಲ್ಲಿದ್ದೂ ಪ್ರಯೋಜನವೇನು? ಮಹಾಭಾರತದಲ್ಲಿ ದ್ರೌಪದಿಯನ್ನು ವಸ್ತ್ರಾಪರಣದಿಂದ ರಕ್ಷಣೆ ಮಾಡಲು ಕೃಷ್ಣನಿದ್ದ. ಆದರೆ, ಇದು ದುಶ್ಯಾಸನರ ಕಾಲ. ಸಹಾಯಕ್ಕೆ ಬರಲು ಯಾರೂ ಇಲ್ಲ. ಇಂತಹ ಘಟನೆಗಳ ಮೂಲಕ ನಮ್ಮಲ್ಲಿ ಕಾನೂನಿನ ಭಯವಿಲ್ಲವೆಂಬ ಸಂದೇಶ ರವಾನೆಯಾಗುತ್ತಿದೆ. 21ನೇ ಶತಮಾನದಲ್ಲಿ ಇಂತಹ ಘಟನೆ ನಡೆದಿದ್ದು, ನಮಗೆ ಮಾತೇ ಹೊರಡದಂತಾಗಿದೆ. ನಮ್ಮ ತಾಂತ್ರಿಕ ಸಾಧನೆ ಹಾಗೂ ಆರ್ಥಿಕ ಶಕ್ತಿಯ ವೃದ್ಧಿಗೆ ಅರ್ಥವೇ ಇಲ್ಲದಂತಾಗಿದೆ. ಇದೊಂದು ನಾಚಿಕೆಗೇಡಿನ ವಿಚಾರ…

  ಬೆಳಗಾವಿ ತಾಲೂಕಿನ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ಥಳಿತಕ್ಕೊಳಗಾದ ಮಹಿಳೆಯು ಅನುಭವಿಸಿದ ಯಾತನೆ ಬಗ್ಗೆ ನ್ಯಾಯಪೀಠ ಮರುಕ ವ್ಯಕ್ತಪಡಿಸಿದೆ.

  ಸಂತ್ರಸ್ತೆಯನ್ನು ಪ್ರಾಣಿಗಿಂತ ಕೀಳಾಗಿ ನಡೆಸಿಕೊಳ್ಳಲಾಗಿದೆ. ಇವರು ಮನುಷ್ಯರೆಂದು ಕರೆಸಿಕೊಳ್ಳಲೂ ಯೋಗ್ಯರಲ್ಲ. ಸತತ ಎರಡು ಗಂಟೆ ಆಕೆಯನ್ನು ಹಿಂಸಿಸಲಾಗಿದೆ. ಮಧ್ಯರಾತ್ರಿ ಮನೆಯಿಂದ ಹೊರತಂದು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಲಾಗಿದೆ. ಆಕೆ ಎದುರಿಸಿದ ನೋವು ಊಹಿಸಲಾಗದು. ಬಡವರ ಮೇಲೆಯೇ ಇಂತಹ ದೌರ್ಜನ್ಯ ಎಸಗಲಾಗುತ್ತದೆ ಎಂದು ನ್ಯಾಯಪೀಠ ತೀವ್ರ ಅಸಮಾಧಾನ ಹೊರಹಾಕಿತು.

  ಸ್ವಾತಂತ್ರ್ಯ ಬಂದ 75 ವರ್ಷದ ನಂತರವೂ ಇಂತಹ ಘಟನೆ ನಡೆದಿದೆ. ಇಂತಹ ಸಮಾಜದಲ್ಲಿ ಬದುಕುವುದಕ್ಕಿಂತ ಸಾಯುವುದೇ ಮೇಲು ಎಂಬ ಮನಸ್ಥಿತಿ ಯಾರಲ್ಲೂ ಬರಬಾರದು. ಇದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ. ಸಂತ್ರಸ್ತೆಗೆ ಅತ್ಯುತ್ತಮ ಚಿಕಿತ್ಸೆ ಹಾಗೂ ಕೌನ್ಸೆಲಿಂಗ್ ಒದಗಿಸುವ ಅಗತ್ಯವಿದೆ. ಯಾವ ಆಸ್ಪತ್ರೆಯಲ್ಲಿ ಯಾವ ವೈದ್ಯರು ಚಿಕಿತ್ಸೆ ನೀಡಿದ್ದಾರೆ? ಪೊಲೀಸರು ಕೈಗೊಂಡ ಕ್ರಮವೇನು? ಎಂಬುದರ ಕುರಿತು ವರದಿ ಕೊಡಬೇಕು. ಮುಂದಿನ ವಿಚಾರಣೆ ವೇಳೆ ಬೆಳಗಾವಿ ಪೊಲೀಸ್ ಆಯುಕ್ತರು ಹಾಗೂ ಗ್ರಾಮಾಂತರ ಎಸಿಪಿ ತನಿಖಾ ವರದಿಯೊಂದಿಗೆ ಖುದ್ದು ಹಾಜರಿರಬೇಕು ಎಂದು ನ್ಯಾಯಪೀಠ ಸೂಚನೆ ನೀಡಿ ವಿಚಾರಣೆಯನ್ನು ಡಿ.18ಕ್ಕೆ ಮುಂದೂಡಲಾಗಿದೆ.

  ಪೊಲೀಸರು ಏನು ಮಾಡುತ್ತಿದ್ದರು?: ಸಂತ್ರಸ್ತೆಯ ಪುತ್ರ ತನ್ನದೇ ಸಮುದಾಯದ ಯುವತಿಯೊಂದಿಗೆ ಪರಾರಿಯಾದ ಹಿನ್ನೆಲೆಯಲ್ಲಿ ಯುವತಿಯ ಕುಟುಂಬಸ್ಥರು ಹುಡುಗನ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತಕ್ಷಣ ಪೊಲೀಸರು ಸಂತ್ರಸ್ತೆಯ ನೆರವಿಗೆ ಏಕೆ ಧಾವಿಸಲಿಲ್ಲ. ಮೊದಲಿಗೆ ಇಂತಹ ಘಟನೆ ನಡೆಯುವುದಕ್ಕೆ ಅವಕಾಶ ನೀಡಿದ್ದಾದರೂ ಹೇಗೆ? ಅಲ್ಲಿ ಪೊಲೀಸ್ ಗಸ್ತು ಇರಲಿಲ್ಲವೇ ಎಂದು ಪ್ರಶ್ನಿಸಿದೆ. ಬೆಳಗಿನ ಜಾವ 3.30ಕ್ಕೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಆಕೆಯನ್ನು ಮಧ್ಯರಾತ್ರಿ 1 ಗಂಟೆಯಲ್ಲಿ ಥಳಿಸಲಾಗಿದೆ. ಆರೋಪಿಗಳು ಮನುಷ್ಯರೇ? ಮನುಷ್ಯರು ನಡೆದುಕೊಳ್ಳುವ ರೀತಿ ಇದೆಯೇ? ಎರಡು ಗಂಟೆ ಸಂತ್ರಸ್ತೆ ಮೇಲೆ ಮೃಗೀಯವಾಗಿ ದಾಳಿ ನಡೆಸಿದ್ದಾರೆ. ಅವರನ್ನು ಮನುಷ್ಯರು ಎನ್ನಲು ನಾಚಿಕೆಯಾಗುತ್ತದೆ. ಮನುಷ್ಯ ಇಷ್ಟು ಕ್ರೂರಿಯಾಗಲು ಹೇಗೆ ಸಾಧ್ಯ? ಎಂದು ನ್ಯಾಯಪೀಠ ತೀವ್ರ ಅತೃಪ್ತಿ ವ್ಯಕ್ತಪಡಿಸಿತು.

  ಹೀಗೆ ನಡೆದುಕೊಳ್ಳಬಹುದೇ…!: ಘಟನೆಯಿಂದ ಗ್ರಾಮದಲ್ಲಿರುವ ಬೇರೆ ಮಹಿಳೆಯರಿಗೆ ಏನನ್ನಿಸಬಹುದು? ಅವರಿಗೆ ಸಹಜವಾಗಿಯೇ ಸಮಾಜದ ಬಗ್ಗೆ ಭಯ ಸೃಷ್ಟಿಯಾಗುವುದಿಲ್ಲವೇ. ಅವರು ಈ ದೇಶವನ್ನು ದ್ವೇಷಿಸಲು ಆರಂಭಿಸಬಹುದು. ಮಹಾಭಾರತದಲ್ಲಿ ದ್ರೌಪದಿಯ ಸೀರೆ ಅಪಹರಣವಾದಾಗಲೂ ಇದು ನಡೆದಿರಲಿಲ್ಲ. ಇದು ಅದಕ್ಕಿಂತಲೂ ಕ್ರೂರ ಪ್ರಕರಣ. ಈ ಘಟನೆಯು ಪುರುಷ ಪ್ರಧಾನ ವ್ಯವಸ್ಥೆ ಎಷ್ಟೊಂದು ಆಳವಾಗಿದೆ ಎಂಬುದನ್ನು ತೋರಿಸುತ್ತದೆ. ಆರೋಪಿಗಳು ಪುರುಷರು ಎಂದ ಮಾತ್ರಕ್ಕೆ ಈ ರೀತಿ ನಡೆದುಕೊಳ್ಳಬಹುದೇ? ಇದು ಮಾನಸಿಕತೆಯ ಸಮಸ್ಯೆ ಇರಬಹುದೇ? ಎಂದು ಮುಖ್ಯ ನ್ಯಾಯಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

  ಹೆಚ್ಚುವರಿ ಮಾಹಿತಿ ಸಲ್ಲಿಸುತ್ತೇವೆ: ರಾಜ್ಯ ಸರ್ಕಾರ ಸಲ್ಲಿಸಿರುವ ಸ್ಥಿತಿಗತಿ ವರದಿ ತೃಪ್ತಿಕರವಾಗಿಲ್ಲ. ವರದಿಯಲ್ಲಿ ಸಂತ್ರಸ್ತ ಮಹಿಳೆಗೆ ಮನೋವೈಜ್ಞಾನಿಕ ಕೌನ್ಸೆಲಿಂಗ್, ಆಕೆಗೆ ಚಿಕಿತ್ಸೆ ನೀಡಿರುವುದು, ಗಾಯದ ಮಾಹಿತಿ ನೀಡಲಾಗಿಲ್ಲ ಎಂದು ನ್ಯಾಯಪೀಠ ಅಸಮಾಧಾನ ಹೊರಹಾಕಿತು. ಆಗ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಪ್ರಮಾಣ ಪತ್ರದಲ್ಲಿ ಹೆಚ್ಚುವರಿ ಮಾಹಿತಿ ಸಲ್ಲಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.

  ಪೊಲೀಸರು ಎಚ್ಚರಿಸಬೇಕಿತ್ತು: ಇಂತಹ ಘಟನೆಗಳನ್ನು ತಪ್ಪಿಸುವುದು ಪೊಲೀಸರ ಜವಾಬ್ದಾರಿ. ಯುವಕ-ಯುವತಿ ಪರಾರಿಯಾಗುವ ವಿಚಾರ ಸಣ್ಣ ಹಳ್ಳಿಯಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತದೆ. ಬೆಳಗಾವಿ ಜಿಲ್ಲೆಯ ಪೊಲೀಸರು ಪರಿಸ್ಥಿತಿ ಕೈಮೀರದಂತೆ ಜನರಿಗೆ ಎಚ್ಚರಿಸಬೇಕಿತ್ತು ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು. ಮಹಿಳಾ ಆಯೋಗಗಳು, ಮಾನವ ಹಕ್ಕುಗಳ ರಕ್ಷಣಾ ಆಯೋಗಗಳು ಏನು ಮಾಡುತ್ತಿವೆ ಎಂದು ಪೀಠ ಪ್ರಶ್ನಿಸಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts