

ನವದೆಹಲಿ: ದೇಶಾದ್ಯಂತ ರೈತ ಹೋರಾಟದ ಕಿಚ್ಚು ಹೆಚ್ಚಾಗುತ್ತಿದ್ದಂತೆಯೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರೈತರೊಂದಿಗೆ ಸಭೆ ನಡೆಸಲು ಮುಂದಾಗಿದ್ದಾರೆ. ಕೇಂದ್ರದಿಂದ ನಿಗದಿಯಾಗಿರುವ ಸಭೆಗೂ ಮೊದಲೇ ಅಮಿತ್ ಷಾ ಅವರು ರೈತರೊಂದಿಗೆ ಸಭೆ ನಡೆಸಲಿದ್ದಾರೆ.
ಅಮಿತ್ ಷಾ ಅವರಿಂದ ಕರೆ ಬಂದಿದ್ದು, ಡಿಸೆಂಬರ್ 8ರ ಸಂಜೆ 7ಕ್ಕೆ ಸಭೆ ಸೇರಲು ಕೋರಲಾಗಿದೆ ಎಂದು ರೈತ ಮುಖಂಡ ರಾಕೇಶ್ ಟಿಕೈಟ್ ಅವರು ತಿಳಿಸಿದ್ದಾರೆ. ವಿವಿಧ ರೈತ ಸಂಘಟನೆಗಳ ಮುಖಂಡರು ಈ ಸಭೆಯಲ್ಲಿ ಭಾಗವಹಿಸುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರಾದ್ಯಂತ ರೈತರು ಹೋರಾಟ ಆರಂಭಿಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ. ಶುಕ್ರವಾರಂದು ಕೇಂದ್ರ ಸರ್ಕಾರ ರೈತರೊಂದಿಗೆ ಐದನೇ ಸುತ್ತಿನ ಮಾತುಕತೆ ನಡೆಸಿತ್ತು. ಸತತ 7 ಗಂಟೆಗಳ ಕಾಲ ಸಭೆ ನಡೆಯಿತಾದರೂ ಯಾವುದೇ ನಿರ್ಣಕ್ಕೆ ಬರಲಾಗಲಿಲ್ಲ. ಆ ಕಾರಣ ಡಿಸೆಂಬರ್ 9ರಂದು ಆರನೇ ಸುತ್ತಿನ ಸಭೆಯನ್ನು ಆಯೋಜಿಸಲಾಗಿದೆ. ಕಾಯ್ದೆಗಳನ್ನು ಹಿಂಪಡೆಯುವವರೆಗೂ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ರೈತ ಮುಖಂಡರು ತಿಳಿಸಿದ್ದಾರೆ. (ಏಜೆನ್ಸೀಸ್)