ಶಸ್ತ್ರಾಸ್ತ್ರ ತ್ಯಜಿಸಿ..ಹಿಂಸಾಚಾರ ಮುಂದುವರೆದರೆ ಬೇರೆ ರೀತಿಯ ಕ್ರಮ ಎದುರಿಸಬೇಕಾಗುತ್ತದೆ; ನಕ್ಸಲರಿಗೆ Amit Shah ಎಚ್ಚರಿಕೆ!

Amit Shah
Published on

Amit Shah: ಮಾವೋವಾದಿಗಳೊಂದಿಗಿನ ಮಾತುಕತೆಯನ್ನು ತಳ್ಳಿಹಾಕಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ಸರ್ಕಾರದ ಲಾಭದಾಯಕ ಶರಣಾಗತಿ ಮತ್ತು ಪುನರ್ವಸತಿ ನೀತಿಯನ್ನು ಒಪ್ಪಿಕೊಳ್ಳುವ ಮೂಲಕ ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕಾಗುತ್ತದೆ ಎಂದು ಹೇಳಿದರು.

ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯ ಪ್ರಧಾನ ಕಚೇರಿಯಾದ ಜಗದಲ್‌ಪುರದಲ್ಲಿ ನಡೆದ 'ಬಸ್ತರ್ ದಸರಾ ಲೋಕೋತ್ಸವ' ಮತ್ತು ' ಸ್ವದೇಶಿ ಮೇಳ'ವನ್ನುದ್ದೇಶಿಸಿ ಮಾತನಾಡಿದ ಷಾ, ಭಾರತವನ್ನು ನಕ್ಸಲ್ ಮುಕ್ತಗೊಳಿಸಲು ಮಾರ್ಚ್ 31, 2026 ರ ಗಡುವು ನಿಗದಿಪಡಿಸಲಾಗಿದೆ ಎಂದರು.

ನನ್ನ ಎಲ್ಲಾ ಬುಡಕಟ್ಟು ಸಹೋದರ ಸಹೋದರಿಯರಿಗೆ ನಾನು ಹೇಳಲು ಬಯಸುತ್ತೇನೆ, ಅವರ ಹಳ್ಳಿಗಳ ಯುವಕರು ಶಸ್ತ್ರಾಸ್ತ್ರ ತ್ಯಜಿಸುವಂತೆ ಮನವೊಲಿಸಬೇಕು. ಅವರೆಲ್ಲಾ ಹಿಂಸಾಚಾರವನ್ನು ತ್ಯಜಿಸಬೇಕು, ಮುಖ್ಯವಾಹಿನಿಗೆ ಬರಬೇಕು ಮತ್ತು ಕೇಂದ್ರ ಸರ್ಕಾರ ಬಸ್ತಾರ್ ಸೇರಿದಂತೆ ಎಲ್ಲಾ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಬದ್ಧವಾಗಿದ್ದು, ಎಲ್ಲರೂ ಇದರ ಭಾಗವಾಗಬೇಕು ಎಂದು ಹೇಳಿದರು. ನಕ್ಸಲರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡು ಬಸ್ತಾರ್‌ನ ಶಾಂತಿಯನ್ನು ಭಂಗಗೊಳಿಸಲು ಪ್ರಯತ್ನಿಸಿದರೆ, ನಮ್ಮ ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಛತ್ತೀಸ್‌ಗಢ ಪೊಲೀಸರು ಅದಕ್ಕೆ ಸೂಕ್ತ ತಿರುಗೇಟು ನೀಡುತ್ತಾರೆ. 2026 ಮಾರ್ಚ್ 31 ಈ ದೇಶದಿಂದ ನಕ್ಸಲಿಸಂಗೆ ವಿದಾಯ ಹೇಳುವ ದಿನಾಂಕವಾಗಿದೆ ಎಂದರು. ನಿಷೇಧಿತ ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿ ಸದಸ್ಯ ವೇಣುಗೋಪಾಲ್ ಅಲಿಯಾಸ್ ಸೋನು ಶಸ್ತ್ರಾಸ್ತ್ರ ತ್ಯಜಿಸುವಂತೆ ಕರೆ ನೀಡಿದ್ದು ಮತ್ತು ತೆಲಂಗಾಣ ಮೂಲದ ನಾಗರಿಕ ಸಮಾಜ ಸಂಸ್ಥೆಗಳು ಸರ್ಕಾರವು ನಕ್ಸಲರೊಂದಿಗೆ ಮಾತುಕತೆ ಆರಂಭಿಸುವಂತೆ ಕರೆ ನೀಡಿರುವ ಮಧ್ಯೆ ಈ ಹೇಳಿಕೆಗಳು ಬಂದಿವೆ.

ನಕ್ಸಲಿಸಂನಿಂದಾಗಿ ಬಸ್ತರ್ ಅಭಿವೃದ್ದಿಯಿಂದ ವಂಚಿತವಾಗಿದೆ..

ಅನೇಕ ಜನರು, ಅಭಿವೃದ್ಧಿಯ ಹೋರಾಟಕ್ಕಾಗಿ ನಕ್ಸಲಿಸಂ ಹುಟ್ಟಿಕೊಂಡಿತು ಎಂದು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ, ಮೂಲಭೂತ ಸೌಕರ್ಯಗಳು ದೇಶದ ಮೂಲೆ ಮೂಲೆಯನ್ನು ತಲುಪಿವೆ ಆದರೆ ಉಗ್ರವಾದದಿಂದಾಗಿ ಬಸ್ತಾರ್ ಇದರಿಂದ ವಂಚಿತವಾಗಿದೆ. ಇಂದು, ವಿದ್ಯುತ್, ಕುಡಿಯುವ ನೀರು, ರಸ್ತೆಗಳು, ಪ್ರತಿ ಮನೆಯಲ್ಲಿ ಶೌಚಾಲಯಗಳು, 5 ಲಕ್ಷ ರೂಪಾಯಿವರೆಗಿನ ಆರೋಗ್ಯ ವಿಮೆ ಮತ್ತು 5 ಕೆಜಿ ಉಚಿತ ಅಕ್ಕಿ ಭಾರತದ ಪ್ರತಿಯೊಂದು ಹಳ್ಳಿಯನ್ನು ತಲುಪಿದೆ ಆದರೆ ಬಸ್ತಾರ್ ಅಂತಹ ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದು ಅವರು ಹೇಳಿದರು. ಛತ್ತೀಸ್‌ಗಢ ಸರ್ಕಾರ ದೇಶದಲ್ಲೇ ಅತ್ಯುತ್ತಮ ಶರಣಾಗತಿ ನೀತಿಯನ್ನು ರೂಪಿಸಿದ್ದು, ಒಂದೇ ತಿಂಗಳಲ್ಲಿ 500 ಕ್ಕೂ ಹೆಚ್ಚು ಜನರು ಶರಣಾಗಿದ್ದಾರೆ. ಉಳಿದ ಎಲ್ಲರೂ ಶರಣಾಗಬೇಕು. ಒಂದು ಗ್ರಾಮ ನಕ್ಸಲೀಸಂನಿಂದ ಮುಕ್ತವಾದ ತಕ್ಷಣ, ಛತ್ತೀಸ್‌ಗಢ ಸರ್ಕಾರವು ಅಭಿವೃದ್ಧಿಗಾಗಿ 1 ಕೋಟಿ ರೂ ನೀಡುತ್ತದೆ. ಸಮಾಜ ವಿರೋಧಿ ಚಟುವಟಿಕೆಗಳಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದರು.

ಬಸ್ತಾರ್​ ದಸರಾ ಸೂಪರ್​​..

ಬಸ್ತಾರ್‌ನ ಸಾಂಸ್ಕೃತಿಕ ಪರಂಪರೆಯನ್ನು ಶ್ಲಾಘಿಸಿದ ಅಮಿತ್​ ಷಾ, 75 ದಿನಗಳ ದಸರಾ ಉತ್ಸವವನ್ನು ವಿಶ್ವದ ಅತ್ಯಂತ ದೀರ್ಘ ಮತ್ತು ಮಹತ್ವದ ಹಬ್ಬ ಎಂದು ಬಣ್ಣಿಸಿದರು. ಇದು ಈ ಪ್ರದೇಶದ ಬುಡಕಟ್ಟು ಸಂಪ್ರದಾಯಗಳನ್ನು ಗೌರವಿಸುತ್ತದೆ ಎಂದರು. ನಾನು ಇಂದು ಮುರಿಯಾ ದರ್ಬಾರ್‌ನಲ್ಲಿ ಭಾಗವಹಿಸಿದ್ದೆ, ಬಸ್ತಾರ್ ವಿಭಾಗದಾದ್ಯಂತದ ಎಲ್ಲಾ (ಬುಡಕಟ್ಟು) ಸಮುದಾಯದ ಮುಖಂಡರು ಅಲ್ಲಿ ಹಾಜರಿದ್ದರು ಮತ್ತು ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು. ನಾನು ದೆಹಲಿಗೆ ಹೋಗಿ ಎಲ್ಲರಿಗೂ ಒಮ್ಮೆಯಾದರೂ ಮುರಿಯಾ ದರ್ಬಾರ್ ವೀಕ್ಷಿಸಲು ಹೇಳುತ್ತೇನೆ. 1874 ರಿಂದ ಸಕ್ರಿಯ ಭಾಗವಹಿಸುವಿಕೆ, ನ್ಯಾಯಾಂಗ ವ್ಯವಸ್ಥೆ, ಬುಡಕಟ್ಟು ಸಂಸ್ಕೃತಿ, ಚಿಂತನಶೀಲ ಸಂವಾದ ಮತ್ತು ಜನರ ತೊಡಗಿಸಿಕೊಳ್ಳುವಿಕೆಯನ್ನು ಇದು ಪ್ರತಿಬಿಂಬಿಸುತ್ತದೆ. ನಿಜವಾದ ಅರ್ಥದಲ್ಲಿ, ಇದು ಐತಿಹಾಸಿಕ ಮತ್ತು ಜಾಗತಿಕ ಪರಂಪರೆಯಾಗಿದೆ.  ದರ್ಬಾರ್, ಅದರ ಮೂಲ ಪ್ರಜಾಪ್ರಭುತ್ವ ಮೌಲ್ಯಗಳೊಂದಿಗೆ, ಇಡೀ ರಾಷ್ಟ್ರಕ್ಕೆ ಉತ್ತಮ ಕಲಿಕೆಯ ವಿಷಯವಾಗಿದೆ ಎಂದು ಹೇಳಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net