

Benjamin Netanyahu: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಂತಿ ಯೋಜನೆಯಡಿಯಲ್ಲಿ ಈಜಿಪ್ಟ್ ಮಾತುಕತೆ ನಡೆಸಲು ಸಿದ್ಧತೆ ನಡೆಸುತ್ತಿರುವ ವೇಳೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಗಾಜಾದಲ್ಲಿ ಬಂಧಿತರಾಗಿರುವ ಇಸ್ರೇಲಿ ಒತ್ತೆಯಾಳುಗಳು ಅತಿ ಶೀಘ್ರದಲ್ಲಿ ಬಿಡುಗಡೆಯಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ನೆತನ್ಯಾಹು, ಇಸ್ರೇಲ್ ಗಾಜಾದಿಂದ ಸಂಪೂರ್ಣವಾಗಿ ಹಿಂದೆ ಸರಿಯುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಇಸ್ರೇಲಿ ಪಡೆಗಳು ತಮ್ಮ ನಿಯಂತ್ರಣದಲ್ಲಿರುವ ಪ್ರದೇಶಗಳನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳಲಿದ್ದು, ಹಮಾಸ್ನ್ನು ರಾಜತಾಂತ್ರಿಕವಾಗಿ ಮತ್ತು ಮಿಲಿಟರಿ ಮಾರ್ಗದ ಮೂಲಕ ನಿಶ್ಯಸ್ತ್ರಗೊಳಿಸುವ ನಿರೀಕ್ಷೆಯಿದೆ ಎಂದರು.
ಇಸ್ರೇಲ್ ನಾಗರಿಕರೇ, ನಾವು ಒಂದು ದೊಡ್ಡ ಸಾಧನೆಯ ಅಂಚಿನಲ್ಲಿದ್ದೇವೆ. ಇದು ಇನ್ನೂ ಅಂತಿಮವಲ್ಲ. ಮುಂಬರುವ ದಿನಗಳಲ್ಲಿ ಸುಕ್ಕೋಟ್ ಹಬ್ಬದ ಸಮಯದಲ್ಲಿ, ನಮ್ಮ ಎಲ್ಲಾ ಒತ್ತೆಯಾಳುಗಳು ಹಿಂತಿರುಗುತ್ತಾರೆ ಎಂದು ತಿಳಿಸಲು ಸಂತೋಷವಾಗುತ್ತಿದೆ ಎಂದು ಹೇಳಿದರು.
ಟ್ರಂಪ್ ತಮ್ಮ ಯೋಜನೆಯಲ್ಲಿ ವಿವರಿಸಿರುವಂತೆ, ಆರಂಭಿಕ ವಾಪಸಾತಿ ಮಾರ್ಗಗಳಿಗೆ ಇಸ್ರೇಲ್ ಒಪ್ಪಿಕೊಂಡಿದೆ ಎಂದು ತಿಳಿಸಿದ್ದು, ಒತ್ತೆಯಾಳುಗಳ ಸುರಕ್ಷತೆ ಮತ್ತು ಹೋರಾಟದ ಅಂತ್ಯವು ನಮ್ಮ ಮೊದಲ ಆದ್ಯತೆಗಳಾಗಿವೆ ಎಂದು ಹೇಳಿದರು. ನಿಶ್ಯಸ್ತ್ರೀಕರಣದಂತಹ ಪ್ರಮುಖ ಸಮಸ್ಯೆಗಳು ಬಗೆಹರಿಯದೆ ಉಳಿದಿದ್ದರೂ, ಯೋಜನೆಯ ಕೆಲವು ಅಂಶಗಳನ್ನು ಸ್ವೀಕರಿಸಲು ಹಮಾಸ್ ತನ್ನ ಇಚ್ಛೆ ವ್ಯಕ್ತಪಡಿಸಿದ ಬಳಿಕ ನೆತನ್ಯಾಹು ಹೇಳಿಕೆ ಹೊರಬಿದ್ದಿದೆ .
ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಒಪ್ಪಿಕೊಂಡಿದೆ, ಆದರೆ ಇಸ್ರೇಲ್‌ನ ಕೇಂದ್ರ ಬೇಡಿಕೆಯಾದ ನಿಶ್ಯಸ್ತ್ರೀಕರಣವನ್ನು ಅದು ಬಗೆಹರಿಸಿಲ್ಲ. ಈ ವಿಷಯದಲ್ಲಿ ಸಮಯ ವಿಳಂಬವು ಒಪ್ಪಂದವನ್ನು ಕೊನೆಗೊಳಿಸಬಹುದು ಎಂದು ಎಚ್ಚರಿಸಿದ ಟ್ರಂಪ್ ಶನಿವಾರ ಹಮಾಸ್ ತ್ವರಿತವಾಗಿ ತನ್ನ ನಿರ್ಧಾರ ತಿಳಿಸುವಂತೆ ಒತ್ತಾಯಿಸಿದರು.
20 ಅಂಶಗಳ ಅಮೆರಿಕದ ಯೋಜನೆಯು ಸಂಘರ್ಷಕ್ಕೆ ತ್ವರಿತ ಪರಿಹಾರವನ್ನು ಗುರಿಯಾಗಿರಿಸಿಕೊಂಡಿದೆ. ಈ ಪ್ರಸ್ತಾವನೆಯಡಿಯಲ್ಲಿ, ಹಮಾಸ್ ಉಳಿದಿರುವ ಎಲ್ಲಾ ಇಸ್ರೇಲಿ ಒತ್ತೆಯಾಳುಗಳನ್ನು, ಜೀವಂತವಾಗಿರುವ ಸುಮಾರು 20 ಜನರನ್ನು ಒಳಗೊಂಡಂತೆ ಮೂರು ದಿನಗಳಲ್ಲಿ ಬಿಡುಗಡೆ ಮಾಡುತ್ತದೆ. ಪ್ರತಿಯಾಗಿ, ಇಸ್ರೇಲ್ ತನ್ನ ಆಕ್ರಮಣವನ್ನು ನಿಲ್ಲಿಸುತ್ತದೆ, ಗಾಜಾದ ಕೆಲವು ಭಾಗಗಳಿಂದ ಹಿಂದೆ ಸರಿಯುತ್ತದೆ, ನೂರಾರು ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಮಾನವೀಯ ನೆರವು ಮತ್ತು ಪುನರ್ನಿರ್ಮಾಣಕ್ಕೆ ಅವಕಾಶ ನೀಡುತ್ತದೆ.
ಮಾತುಕತೆಗಳ ಹೊರತಾಗಿಯೂ , ಗಾಜಾದ ಮೇಲೆ ಇಸ್ರೇಲಿ ವೈಮಾನಿಕ ದಾಳಿಗಳು ಶನಿವಾರವೂ ಮುಂದುವರೆದವು, ಇದರ ಪರಿಣಾಮವಾಗಿ ಮಕ್ಕಳು ಸೇರಿದಂತೆ ಕನಿಷ್ಠ 36 ಜನರು ಸಾವನ್ನಪ್ಪಿದರು, ಶುಕ್ರವಾರ ಟ್ರಂಪ್ ಇಸ್ರೇಲ್ ಮೇಲೆ ದಾಳಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ಎರಡು ವರ್ಷಗಳ ಸಂಘರ್ಷವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ 20 ಅಂಶಗಳ ಶಾಂತಿ ಯೋಜನೆಯನ್ನು ಹಮಾಸ್ ಭಾಗಶಃ ಒಪ್ಪಿಕೊಂಡ ನಂತರ ಈ ಉಲ್ಬಣವು ಸಂಭವಿಸಿತು.(ಏಜೆನ್ಸೀಸ್)