ಟೇಕಾಫ್ ಆದ​ ಕೆಲವೇ ಕ್ಷಣಗಳಲ್ಲಿ ವಿಮಾನದಲ್ಲಿ ಬೆಂಕಿ: ಪೈಲಟ್​ನ ಜಾಣ್ಮೆಯಿಂದ ಉಳಿಯಿತು 159 ಮಂದಿಯ ಪ್ರಾಣ! Flight

Flight
Published on

Flight : ಆಕಾಶದಲ್ಲಿ ಹಾರಾಟ ನಡೆಸುವಾಗಲೇ 159 ಜನರಿದ್ದ ವಿಮಾನವೊಂದಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ಅಮೆರಿಕದಲ್ಲಿ ನಡೆದಿದೆ. ಪೈಲಟ್‌ನ ಚಾತುರ್ಯದಿಂದ ದೊಡ್ಡ ಅಪಘಾತವೊಂದು ತಪ್ಪಿದ್ದು, ವಿಮಾನ ಸುರಕ್ಷಿತವಾಗಿ ಲ್ಯಾಂಡ್​ ಆಗುತ್ತಿದ್ದಂತೆ ಪ್ರಯಾಣಿಕರೆಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಬುಧವಾರ (ಜೂನ್​ 25) ಅಮೆರಿಕನ್ ಏರ್​ಲೈನ್ಸ್​ ವಿಮಾನವೊಂದು ದೊಡ್ಡ ಅಪಘಾತವನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದೆ. ಟೇಕಾಫ್​ ಆದ ಸ್ವಲ್ಪ ಸಮಯದ ನಂತರ, ಇಂಜಿನ್​ನಿಂದ ಬೆಂಕಿಯ ಜ್ವಾಲೆಗಳು ಹೊರಹೊಮ್ಮಿದವು. ಇದನ್ನು ಗಮನಿಸಿ ಪೈಲಟ್​, ತಕ್ಷಣ ವಿಮಾನವನ್ನು ಹಿಂದಕ್ಕೆ ತಂದು ಸುರಕ್ಷಿತವಾಗಿ ಲ್ಯಾಂಡ್​ ಮಾಡಿದರು. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಈ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ. ಅಮೆರಿಕನ್ ಏರ್​ಲೈನ್ಸ್​ ವಿಮಾನ 1665 (ಏರ್​ ಬಸ್​ A321) ಲಾಸ್ ವೇಗಾಸ್​ನ ಹ್ಯಾರಿ ರೀಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತು. ಇದು 153 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ಇದು ಉತ್ತರ ಕೆರೊಲಿನಾದ ಷಾರ್ಲೆಟ್‌ನಲ್ಲಿರುವ ಡೌಗ್ಲಾಸ್ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿತ್ತು. ಆದಾಗ್ಯೂ, ಟೇಕಾಫ್​ ಆದ ಸ್ವಲ್ಪ ಸಮಯದ ನಂತರ (ಬೆಳಗ್ಗೆ 8.20ಕ್ಕೆ) ಗಾಳಿಯಲ್ಲಿದ್ದಾಗ, ಇಂಜಿನ್‌ನ ಕೆಳಗಿನ ಭಾಗದಿಂದ ಜ್ವಾಲೆ ಮತ್ತು ಹೊಗೆ ಬರುತ್ತಿರುವುದು ಕಂಡುಬಂದಿತು. ಇದನ್ನು ತಕ್ಷಣ ಗಮನಿಸಿದ ಪೈಲಟ್, ವಿಮಾನವನ್ನು ಲಾಸ್ ವೇಗಾಸ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದರು.

ವಿಮಾನವನ್ನು ಪರಿಶೀಲಿಸಿದ ಸಿಬ್ಬಂದಿಗೆ ಯಾವುದೇ ತಾಂತ್ರಿಕ ದೋಷ ಅಥವಾ ಬೆಂಕಿಯ ಸೂಚನೆ ಕಂಡುಬಂದಿಲ್ಲ. ಆದಾಗ್ಯೂ, ಹಾರಾಟವನ್ನು ರದ್ದುಗೊಳಿಸಲಾಯಿತು ಮತ್ತು ಪ್ರಯಾಣಿಕರನ್ನು ಮತ್ತೊಂದು ವಿಮಾನದಲ್ಲಿ ಅವರ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಆಕಾಶದಲ್ಲಿ ವಿಮಾನಕ್ಕೆ ಬೆಂಕಿ ಹೊತ್ತಿಕೊಳ್ಳುವ ದೃಶ್ಯವನ್ನು ಕೆಲವರು ತಮ್ಮ ಫೋನ್‌ಗಳಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ.

ಇತ್ತೀಚೆಗೆ, ಭಾರತದ ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವು ಭೀಕರ ಅಪಘಾತಕ್ಕೀಡಾಯಿತು. ವಿಮಾನವು ವಸತಿ ಪ್ರದೇಶಕ್ಕೆ ಅಪ್ಪಳಿಸಿ ವಿಮಾನದಲ್ಲಿದ್ದ 241 ಜನರು (12 ಸಿಬ್ಬಂದಿ ಸೇರಿದಂತೆ) ಮತ್ತು ಇತರ 34 ಸ್ಥಳೀಯರು ಸಾವಿಗೀಡಾದರು. ಈ ಘಟನೆ ಇನ್ನೂ ಕೂಡ ಮಾಸಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net