

ನ್ಯೂಯಾರ್ಕ್: ಅಪರಾಧಿಕ ಪ್ರಕರಣವೊಂದರಲ್ಲಿ ಸಾಕ್ಷ್ಯಗಳನ್ನು ಸಲ್ಲಿಸಬೇಕಾದ ಅಗತ್ಯ ಬಿದ್ದಲ್ಲಿ ಅಂಥ ಸಾಮಾನ್ಯ ಕರ್ತವ್ಯಕ್ಕೆ ಯಾರೂ ಮಿಗಿಲಲ್ಲ, ಅಧ್ಯಕ್ಷರೂ ಕೂಡ ಇದಕ್ಕೆ ಹೊರತಲ್ಲ ಎಂದು ಅಮೆರಿಕದ ಸುಪ್ರೀಂ ಕೋರ್ಟ್ ಅತಿ ಮಹತ್ವದ ಆದೇಶ ನೀಡಿದೆ.
ಅಂತೆಯೇ, ಡೊನಾಲ್ಡ್ ಟ್ರಂಪ್ ಆರ್ಥಿಕ ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತಡೆಯುವ ಅಧಿಕಾರ ಹೊಂದಿಲ್ಲ ಎಂದು ಆದೇಶ ನೀಡಿರುವ ಕೋರ್ಟ್, ಹೀಗಿದ್ದರೂ, ಇದಕ್ಕೆ ಆಕ್ಷೇಪ ಸಲ್ಲಿಸುವ ಅಧಿಕಾರ ಹೊಂದಿರುತ್ತಾರೆ ಎಂದು ಸ್ಪಷ್ಟನೆ ನೀಡಿದೆ.
ತನ್ನೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯರಿಗೆ ಟ್ರಂಪ್ ಭಾರಿ ಪ್ರಮಾಣದಲ್ಲಿ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಟ್ರಂಪ್ ಹಣಕಾಸು ವಹಿವಾಟಿನ ದಾಖಲೆಗಳನ್ನು ಕೋರ್ಟ್ಗೆ ಸಲ್ಲಿಸಬೇಕೆಂದು ಕೋರ್ಟ್ನಲ್ಲಿ ಒತ್ತಾಯಿಸಲಾಗಿತ್ತು.
ಈ ವಾದವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್ ದಾಖಲೆಗಳನ್ನು ಸಲ್ಲಿಸಬೇಕೆಂದು ಟ್ರಂಪ್ ಲೆಕ್ಕ ಪರಿಶೋಧಕರಿಗೆ ಆದೇಶ ನೀಡಿದೆ. 7-2 ಬಹುಮತದ ಆಧಾರದಲ್ಲಿ ಮುಖ್ಯ ನ್ಯಾಯಮೂರ್ತಿ ಜಾನ್. ಜಿ. ರಾಬರ್ಟ್ಸ್ ಈ ತೀರ್ಪು ನೀಡಿದ್ದಾರೆ. ಇದು ಟ್ರಂಪ್ಗೆ ಭಾರಿ ಮುಖಭಂಗ ಉಂಟು ಮಾಡಿದೆ. ಕೆಳ ನ್ಯಾಯಾಲಯ ಅಧಿಕಾರದ ವಿಭಜನೆಯನ್ನು ಸಮರ್ಪಕವಾಗಿ ಪರಿಗಣಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಾಲಯದ ಆದೇಶವನ್ನು ಟ್ರಂಪ್ ರಾಜಕೀಯಪ್ರೇರಿತ ವಿಚಾರಣೆ ಎಂದು ಪ್ರತಿಕ್ರಿಯಿಸಿದ್ದಾರೆ. ತನ್ನ ಲೆಕ್ಕಾಧಿಕಾರಿಗಳು ಹಾಗೂ ಬ್ಯಾಂಕರ್ಗಳಿಂದ ಮಾಹಿತಿ ಪಡೆಯಲು ನೀಡಿರುವ ಆದೇಶವನ್ನು ರದ್ದು ಪಡಿಸಬೇಕೆಂದು ಟ್ರಂಪ್ ಕೋರಿದ್ದರು. ಜತೆಗೆ, ಎಲ್ಲ ರೀತಿಯ ಕ್ರಿಮಿನಲ್ ವಿಚಾರಣೆಯಿಂದ ಅಧ್ಯಕ್ಷರು ಹೊರತಾಗಿದ್ದಾರೆ. ಅಧ್ಯಕ್ಷ ಹುದ್ದೆಯಲ್ಲಿರುವವರೆಗೆ ಅವರ ವಿರುದ್ಧ ತನಿಖೆ ನಡೆಸುವಂತಿಲ್ಲ ಎಂದು ಟ್ರಂಪ್ ಪರ ವಕೀಲರು ವಾದಿಸಿದ್ದರು.
ತನ್ನೊಂದಿಗೆ ಸಖ್ಯ ಹೊಂದಿದ್ದ ಪ್ಲೇ ಬಾಯ್ ಮಾಡೆಲ್ ಹಾಗೂ ನೀಲಿ ಚಿತ್ರತಾರೆಗಳಿಗೆ ವಕೀಲರ ಮೂಲಕ ಹಣ ಪಾವತಿಸಿದ್ದಾರೆ ಎಂಬ ಆರೋಪ ಟ್ರಂಪ್ ಮೇಲಿದೆ. ಹೀಗಾಗಿ ಹಣಕಾಸು ವಹಿವಾಟಿನ ದಾಖಲೆಗಳನ್ನು ಪರಿಶೀಲಿಸಿದಲ್ಲಿ ಈ ಸತ್ಯ ಹೊರಬರಲಿದೆ ಎಂಬುದು ಟರಂಪ್ ವಿರೋಧಿಗಳ ವಾದವಾಗಿದೆ. ಇದಕ್ಕೆ ಸುಪ್ರೀಂ ಕೋರ್ಟ್ ಕೂಡ ಅಸ್ತು ಎಂದಿದೆ.