

ವಾಷಿಂಗ್ಟನ್: ರ್ಯಾಪರ್ಗಳೆಂದರೆ ಎಲ್ಲರ ತಲೆಗೆ ಬರುವುದು ಬೋಲ್ಡ್ ವ್ಯಕ್ತಿತ್ವದ ಜೀವಿಗಳೆಂದು. ಮೈ ತುಂಬಾ ಟ್ಯಾಟೂ, ಚಿತ್ರ ವಿಚಿತ್ರವೆನಿಸುವ ಉಡುಗೆ ಇವೇ ಅವರ ಟ್ರೇಡ್ ಮಾರ್ಕ್ನಂತಾಗಿಬಿಟ್ಟಿರುತ್ತದೆ. ಆದರೆ ಈ ರ್ಯಾಪರ್ ಎಲ್ಲ ಎಲ್ಲೆಯನ್ನೂ ಮೀರಿದವರು. ಎಲ್ಲೆಂದರಲ್ಲಿ ಟ್ಯಾಟೂ ಹಾಕಿಸಿಕೊಂಡು ಮಿಂಚಿದ್ದ ಈ ರ್ಯಾಪರ್ ಇದೀಗ ಹಣೆಯ ಮೇಲೆ ಬರೋಬ್ಬರಿ 175 ಕೋಟಿ ರೂಪಾಯಿ ಮೌಲ್ಯದ ವಜ್ರವನ್ನೇ ಫಿಕ್ಸ್ ಮಾಡಿಸಿಕೊಂಡಿದ್ದಾರೆ.
ಅಮೆರಿಕದ ಪ್ರಸಿದ್ಧ ರ್ಯಾಪರ್ ಸೈಮರ್ ಬೇಸಿಲ್ ವುಡ್ಸ್ ಈ ರೀತಿ ವಿಚಿತ್ರ ಕೆಲಸಕ್ಕೆ ಕೈ ಹಾಕಿರುವ ವ್ಯಕ್ತಿ. ಇವರು ಹಣೆಯ ಮೇಲೆ ಗುಲಾಬಿ ಬಣ್ಣದ ವಜ್ರವೊಂದನ್ನು ಫಿಕ್ಸ್ ಮಾಡಿಸಿಕೊಂಡಿದ್ದಾರೆ. ಮಹಿಳೆಯರು ಸಿಂಧೂರ ಹಾಕಿರುವಂತೆ ಕಾಣುವ ಈ ವಜ್ರಕ್ಕೆ ಅವರು 175 ಕೋಟಿ ರೂಪಾಯಿ ತೆತ್ತಿದ್ದಾರಂತೆ. 11 ಕ್ಯಾರೆಟ್ ವಜ್ರ ಅದಾಗಿದೆತಯಂತೆ.
ಈ ವಜ್ರದ ಚಿಂತನೆ ಅವರಿಗೆ ಇಂದು ನಿನ್ನೆ ಬಂದಿದ್ದಲ್ಲವಂತೆ. ಹಣೆಯ ಮೇಲಿನ ವಜ್ರಕ್ಕೆಂದೇ ಮೂರು ವರ್ಷಗಳಿಂದ ಹಣ ಕೂಡಿಟ್ಟಿದ್ದರಂತೆ. ಒಂದು ವಜ್ರಕ್ಕೆ ಇಷ್ಟೊಂದು ಬೆಲೆ ಇರುತ್ತದೆ ಎನ್ನುವುದನ್ನು ನನಗೇ ನಂಬಲಾಗುತ್ತಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಅವರ ದುಬಾರಿ ಕಾರುಗಳಿಗೂ ಇಷ್ಟೊಂದು ಬೆಲೆ ತೆತ್ತಿರಲಿಲ್ಲವಂತೆ. ಇದೇ ಕೊನೆ, ಇನ್ನು ಮುಂದೆ ಇಂತಹ ಸಾಹಸಗಳಿಗೆ ಕೈ ಹಾಕುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಹಣೆ ಮೇಲೆ ಒಂದು ವಜ್ರ ಹಾಗೆ ಕೈನಲ್ಲಿ ವಜ್ರದ ಉಂಗುರವನ್ನು ತೊಟ್ಟಿರುವ ಅವರ ವಿಡಿಯೋವೊಂದು ವೈರಲ್ ಆಗಿದೆ. (ಏಜೆನ್ಸೀಸ್)