ಚೀನಾದಿಂದ ಅಮೆರಿಕಕ್ಕೆ ಬಂದ 4.3 ಲಕ್ಷ ಮಂದಿ: ಸ್ಕ್ರೀನಿಂಗ್ ನಿರ್ಲಕ್ಷ್ಯದಿಂದಾಗಿ ಸೋಂಕು ಪಸರಿಸುವಿಕೆ ಹೆಚ್ಚಳ

Corona 2
Published on

ವಾಷಿಂಗ್ಟನ್: ಕರೊನಾ ಮಹಾಮಾರಿ ಬಗ್ಗೆ ಚೀನಾ ಅಧಿಕೃತವಾಗಿ ಮಾಹಿತಿ ನೀಡಿದ ನಂತರದಲ್ಲೂ ಚೀನಾದಿಂದ ಅಮೆರಿಕಕ್ಕೆ ಸುಮಾರು 4.30 ಲಕ್ಷ ಜನರು ಆಗಮಿಸಿದ್ದರೆ. ಈ ಪೈಕಿ ಸಾವಿರಾರು ಜನರು ಕರೊನಾ ತವರು ಪ್ರದೇಶವಾದ ವುಹಾನ್​ನಿಂದಲೇ ನೇರವಾಗಿ ಅಮೆರಿಕಕ್ಕೆ ಬಂದಿಳಿದಿದ್ದಾರೆ. ಅಮೆರಿಕದ 17 ನಗರಗಳಿಗೆ 1,300 ನೇರ ಮಾರ್ಗದ ವಿಮಾನಗಳು ಪ್ರಯಾಣಿಸಿವೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಯು ಸಂಚಾರ ನಿರ್ಬಂಧ ವಿಧಿಸುವ ಮೊದಲೇ ಲಕ್ಷಾಂತರ ಜನರು ಅಮೆರಿಕದ ಒಳನುಸುಳಿದ್ದರು. ಹೀಗಾಗಿ ಅಮೆರಿಕದಲ್ಲಿ ಸೋಂಕು ಪೀಡಿತರ ಸಂಖ್ಯೆ ಹತೋಟಿ ಮೀರಿದೆ ಎನ್ನಲಾಗಿದೆ.

ಚೀನಾದಿಂದ ಬಂದ ಪ್ರಯಾಣಿಕರಿಗೆ ಅಮೆರಿಕದ ವಿಮಾನನಿಲ್ದಾಣಗಳಲ್ಲಿ ಪರೀಕ್ಷೆ ಮತ್ತು ಮುಂಜಾಗ್ರತಾ ಕ್ರಮಗಳನ್ನೂ ಕಡ್ಡಾಯ ಜಾರಿ ಮಾಡಲಿಲ್ಲ. ಅಲ್ಲದೇ ಜನವರಿ ಮೊದಲಾರ್ಧದಲ್ಲಿ ಚೀನಾದ ಅಧಿಕಾರಿಗಳು ಇನ್ನೂ ಕರೊನಾ ಪರಿಸ್ಥಿತಿ ನಿರ್ವಹಣೆಯ ಆರಂಭಿಕ ಹಂತದಲ್ಲಿದ್ದರಿಂದ ಚೀನಾದಿಂದ ಹೊರಹೋಗುತ್ತಿದ್ದ ಪ್ರಯಾಣಿಕರ ಸ್ಕ್ರೀನಿಂಗ್ ತಪಾಸಣೆಯನ್ನೂ ನಡೆಸಿರಲಿಲ್ಲ. ನಂತರ ಅಮೆರಿಕದಲ್ಲಿ ಸ್ಕ್ರೀನಿಂಗ್ ತಪಾಸಣೆ ಪ್ರಾರಂಭಿಸಲಾಯಿತಾದರೂ ಇದು ಲಾಸ್ ಏಂಜಲೀಸ್, ಸ್ಯಾನ್ ಫ್ರಾನ್ಸಿಸ್ಕೊ ಮತ್ತು ನ್ಯೂಯಾರ್ಕ್ ವಿಮಾನ ನಿಲ್ದಾಣಗಳಿಗೆ ಸೀಮಿತವಾಗಿತ್ತು. ವುಹಾನ್ ನಗರದಿಂದ ಬಂದ ವಿಮಾನಗಳ ಪ್ರಯಾಣಿಕರಿಗೆ ಮಾತ್ರ ಪರೀಕ್ಷೆ. ಇಷ್ಟೆಲ್ಲಾ ಅವಂತಾರವಾದರೂ ವಾರದ ಹಿಂದೆ ಚೀನಾದಿಂದ 79 ವಿಮಾನಗಳು ಅಮೆರಿಕಕ್ಕೆ ತೆರಳಿವೆ. ಅಲ್ಲದೇ ಚೀನಾದಿಂದ ನೇರ ವಿಮಾನಗಳಲ್ಲಿ ಅಮೆರಿಕಕ್ಕೆ ಪ್ರಯಾಣಿಸಿದ್ದವರಲ್ಲಿ ಶೇಕಡಾ 60ರಷ್ಟು ಜನರು ಅಮೆರಿಕದ ಪ್ರಜೆಗಳೇ ಅಲ್ಲ ಎಂದೂ ಹೇಳಲಾಗುತ್ತಿದೆ. ಕರೊನಾ ವೈರಸ್​ಗೆ ಒಳಗಾದವರಲ್ಲಿ ಶೇ.25ರಷ್ಟು ಜನರಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಈ ಕಾರಣದಿಂದಾಗಿಯೇ ವಾಷಿಂಗ್ಟನ್​ನಲ್ಲಿ ಮೊದಲ ಪ್ರಕರಣ ಪತ್ತೆಯಾದರೂ ಇತರರಿಗೆ ಅದು ಹೇಗೆ ಪಸರಿಸುತ್ತಿದೆ ಎಂಬುದನ್ನು ಪತ್ತೆ ಮಾಡಲು ತಡವಾಯಿತು ಎಂದು ಸಾಂಕ್ರಾಮಿಕ ರೋಗ ತಜ್ಞರು ಹೇಳಿದ್ದಾರೆ.

ಹೈಡ್ರಾಕ್ಸಿಕ್ಲೋರೊಕ್ವಿನ್ ರಫ್ತು ನಿಯಮ ಬಿಗಿ

ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಯಿಂದ ಕೋವಿಡ್-19 ಸೋಂಕಿನ ಪ್ರಖರತೆ ಕಡಿಮೆಯಾಗುತ್ತಿರುವ ಕಾರಣ ಈ ಔಷಧದ ಮೇಲಿನ ರಫ್ತನ್ನು ಸರ್ಕಾರ ಬಿಗಿಗೊಳಿಸಿದೆ. ವಿಶೇಷ ಆರ್ಥಿಕ ವಲಯದ ರಾಷ್ಟ್ರಗಳಿಗೂ ಈ ಮಾತ್ರೆ ರಫ್ತಿಗೆ ಕಡಿವಾಣ ಹಾಕಿದೆ. ಭಾರತದಲ್ಲಿ ಕರೊನಾ ವ್ಯಾಪಕವಾಗುತ್ತಿರು ವುದರಿಂದ ಈ ಮಾತ್ರೆಯ ಕೊರತೆ ಉಂಟಾಗಬಾರದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

ನ್ಯೂಯಾರ್ಕ್​ನಲ್ಲಿ ಒಂದೇ ದಿನ 630 ಸಾವು

ನ್ಯೂಯಾರ್ಕ್ ನಗರ ಕರೊನಾ ವೈರಸ್​ನ ಹಾಟ್​ಸ್ಪಾಟ್ ಆಗಿ ಪರಿವರ್ತನೆಗೊಂಡಿದ್ದು, ದೇಶದ ಒಟ್ಟು ಸಾವುಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ಇಲ್ಲೇ ಸಂಭವಿಸಿವೆ. ಕಳೆದ 24 ಗಂಟೆಗಳಲ್ಲಿ ಅಮೆರಿಕದಲ್ಲಿ 1331 ಸಾವುಗಳು ಸಂಭವಿಸಿದ್ದು, ಇದರಲ್ಲಿ 630 ಸಾವುಗಳು ನ್ಯೂಯಾರ್ಕ್ ನಗರದಲ್ಲಿ ಘಟಿಸಿವೆ. ಅಮೆರಿಕದ ಒಟ್ಟಾರೆ 8,454 ಸಾವುಗಳಲ್ಲಿ 3565 ಪ್ರಕರಣಗಳು ನ್ಯೂಯಾರ್ಕ್​ನಲ್ಲಾಗಿವೆ. ಕೆಲ ವರದಿಗಳ ಪ್ರಕಾರ ಅಮೆರಿಕದಲ್ಲಿ ಪ್ರತಿ ಎರಡೂವರೆ ನಿಮಿಷಕ್ಕೆ ಒಬ್ಬ ವ್ಯಕ್ತಿ ಕರೊನಾದಿಂದ ಸಾವನ್ನಪು್ಪತ್ತಿದ್ದಾರೆ. ಸೋಂಕಿತರ ಪ್ರಮಾಣದಲ್ಲೂ ನ್ಯೂಯಾರ್ಕ್ ನಗರ ಮುಂಚೂಣಿಯಲ್ಲಿದೆ. ಅಮೆರಿಕದ 3,12,146 ಒಟ್ಟು ಸೋಂಕಿತ ಪ್ರಕರಣಗಳಲ್ಲಿ 1,13,704 ಪ್ರಕರಣಗಳು ನ್ಯೂಯಾರ್ಕ್​ನಲ್ಲೇ ವರದಿಯಾಗಿವೆ.

ಮಲೇರಿಯಾ ತಡೆ ಮಾತ್ರೆ ಪೂರೈಸಿ

ಕೊವಿಡ್-19 ರೋಗಿಗಳ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನು ಸರಬರಾಜು ಮಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ. ಹೈಡ್ರಾಕ್ಸಿಕ್ಲೋರೊಕ್ವಿನ್ ಮಲೇರಿಯಾ ಚಿಕಿತ್ಸೆಗೆ ಬಳಸುವ ಔಷಧವಾಗಿದೆ. ಅಮೆರಿಕಕ್ಕೆ ಮಾತ್ರೆ ಸರಬರಾಜು ಮಾಡುವ ಬಗ್ಗೆ ಭಾರತ ಗಂಭೀರವಾಗಿ ಪರಿಶೀಲನೆ ನಡೆಸುತ್ತಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ತಾವು ಕೂಡ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆ ಸೇವಿಸುವುದಾಗಿ ಟ್ರಂಪ್ ಸಭೆಯಲ್ಲಿ ಹೇಳಿದ್ದಾರೆ. ಭಾರತ ದೊಡ್ಡ ಪ್ರಮಾಣದಲ್ಲಿ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನು ತಯಾರಿಸುತ್ತಿದೆ. ಅಮೆರಿಕಕ್ಕೆ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆ ಹಾಗೂ ಅದರ ಸೂತ್ರಗಳನ್ನು ರಫ್ತು ಮಾಡುವುದನ್ನು ಭಾರತ ತಡೆಹಿಡಿದಿದೆ. ಅದನ್ನೀಗ ಸಡಿಲಿಸುವ ವಿಶ್ವಾಸವಿದೆ ಎಂದಿದ್ದಾರೆ.

‘ಅಧ್ಯಕ್ಷ ಟ್ರಂಪ್​ರೊಂದಿಗೆ ದೂರವಾಣಿಯಲ್ಲಿ ವ್ಯಾಪಕ ಚರ್ಚೆ ನಡೆಸಿದ್ದೇನೆ. ಭಾರತ-ಅಮೆರಿಕ ನಡುವಿನ ಬಾಂಧವ್ಯವನ್ನು ಕೊವಿಡ್-19 ವಿರುದ್ಧದ ಹೋರಾಟಕ್ಕೆ ಬಳಸಲು ಒಪ್ಪಿದ್ದೇವೆ’ | ನರೇಂದ್ರ ಮೋದಿ ಪ್ರಧಾನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net