

ಬೀರೂರು: ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ಚಿಂತನೆ ಶೋಷಣೆಗೊಳಗಾದ ಸಮುದಾಯಗಳ ಸಮಾನತೆಯ ಕನಸಾಗಿದೆ. ಜನಕಲ್ಯಾಣವೇ ಪ್ರಜಾಪ್ರಭುತ್ವದ ಗುರಿ ಎಂದು ಪುರಸಭೆ ಅಧ್ಯಕ್ಷೆ ವನಿತಾ ಮಧು ಬಾವಿಮನೆ ತಿಳಿಸಿದರು.
ಪುರಸಭೆ ಮುಂಭಾಗದಲ್ಲಿ ನಡೆದ ಮಾನವ ಸರಪಳಿ ರಚನೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಾಬಾಸಾಹೇಬರು ಪ್ರಜಾಪ್ರಭುತ್ವದ ಬಗ್ಗೆ ಆಳವಾಗಿ ಚಿಂತಿಸಿದ್ದಾರೆ. ಜಾಗತಿಕ ರಾಜಕೀಯ ವಿದ್ಯಮಾನಗಳನ್ನು ಗುರುತಿಸಿದ್ದಾರೆ. ಅವರ ಪ್ರಜಾಪ್ರಭುತ್ವದ ಅರಿವನ್ನು ಜಾಗತಿಕ ಅರಿವಿನ ನೆಲೆಯಲ್ಲಿ ವಿಸ್ತರಿಸಬೇಕಿದೆ. ದೇಶದ ಪ್ರತಿಯೊಬ್ಬರೂ ಪ್ರಜಾಪ್ರಭುತ್ವದ ಬಗ್ಗೆ ಅರಿತಿರಬೇಕು ಮತ್ತು ಗೌರವಿಸಬೇಕು ಎಂದರು.
ಮಾನವ ಸರಪಳಿಗೆ ಪುರಸಭೆ ಸದಸ್ಯರು, ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಜೆಸಿಐ, ಸ್ವಸಹಾಯ ಸಂಘಗಳು, ಸೀಶಕ್ತಿ ಸಂಘಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿ ಹಾಗೂ ಪುರಸಭೆ ಮುಂಭಾಗದಲ್ಲಿ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಸಂವಿಧಾನ ಪೀಠಿಕೆ ಪ್ರತಿಷ್ಠಾಪಿಸಲಾಗಿತ್ತು. ಶಾಲಾ ಮಕ್ಕಳಿಂದ ರಾಷ್ಟ್ರಗೀತೆ ಹಾಗೂ ನಾಡಗೀತೆಯೊಂದಿಗೆ ಮಾನವ ಸರಪಳಿ ರಚನೆಗೆ ಚಾಲನೆ ನೀಡಲಾಯಿತು.
ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ಸದಸ್ಯರಾದ ಎಂ.ಪಿ.ಸುದರ್ಶನ್, ಬಿ.ಕೆ.ಶಶಿಧರ್, ಬಿ.ಆರ್.ಮೋಹನ್‌ಕುಮಾರ್, ಜ್ಯೋತಿ, ಟಿ.ಗಂಗಾಧರ್, ಲಕ್ಷ್ಮಣ್, ಭಾಗ್ಯಲಕ್ಷ್ಮೀ, ಶಾರದಾ ರುದ್ರಪ್ಪ, ಬಿ.ಆರ್.ರವಿಕುಮಾರ್, ರಘು, ಮಾನಿಕ್ ಬಾಷಾ, ಲೋಕೇಶಪ್ಪ, ಸುಮಿತ್ರಾ, ಸಹನಾ, ಅಂಗವಿಕಲ ಪುನರ್ವಸತಿ ಕಾರ್ಯಕರ್ತ ಬಿ.ಆರ್.ಶಿವಪ್ಪ ಇತರರಿದ್ದರು.