

ಬೆಂಗಳೂರು: ಗೂಗಲ್ ಬಳಿಕ ಇದೀಗ ಮತ್ತೊಂದು ದೈತ್ಯ ಕಂಪನಿ ಕನ್ನಡಿಗರ ಆಕ್ರೋಶಕ್ಕೆ ಮಣಿದು, ತನ್ನ ತಪ್ಪನ್ನು ಸರಿಪಡಿಸಿಕೊಂಡಿದೆ. ಅಮೆಜಾನ್ ಕಂಪನಿ ತನ್ನ ಇ-ಕಾಮರ್ಸ್ ವೆಬ್ಸೈಟ್ನಲ್ಲಿ ಕನ್ನಡ ಧ್ವಜವನ್ನು ಹೋಲುವಂಥ ಬಣ್ಣದ ಬಟ್ಟೆಯಲ್ಲಿ ಸಿದ್ಧಪಡಿಸಿದ ಒಳಉಡುಪನ್ನು ಮಾರಾಟಕ್ಕೆ ಇಟ್ಟಿತ್ತು.
ಹೀಗೆ ಕರ್ನಾಟಕದ ಧ್ವಜ ಹೋಲುವ ರೀತಿಯಲ್ಲಿ ಕೆಂಪು ಮತ್ತು ಹಳದಿ ಬಣ್ಣದಲ್ಲಿ ಮಹಿಳೆಯರ ಒಳಉಡುಪಿನ ಮೇಲೆ ಕರ್ನಾಟಕ ಲಾಂಛನವನ್ನೂ ಮುದ್ರಿಸಲಾಗಿದೆ. ಅಮೆಜಾನ್ ಕಂಪನಿಯ ಈ ನಡೆಗೆ ಕನ್ನಡಿಗರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಅದೀಗ ತನ್ನ ತಪ್ಪನ್ನು ಸರಿಪಡಿಸಿಕೊಂಡಿದೆ. ಕನ್ನಡ ಧ್ವಜವನ್ನು ಹೋಲುವಂತಿದ್ದ ಒಳಉಡುಪಿದ್ದ ಜಾಗದಲ್ಲಿ ಬಿಕಿನಿಯ ಫೋಟೋವೊಂದನ್ನು ಹಾಕಿದೆ. ಆದರೆ ಬ್ರ್ಯಾಂಡ್ ವಿವರದಲ್ಲಿ ಫ್ಲ್ಯಾಗ್ ಆಫ್ ಕರ್ನಾಟಕ ಒರಿಜಿನಲ್ ಡಿಸೈನ್ ಎಂಬುದನ್ನು ಅದು ಹಾಗೇ ಇರಿಸಿರುವುರಿಂದ ಮತ್ತದೇ ಒಳಉಡುಪು ಗುಟ್ಟಾಗಿ ಮಾರಾಟ ಮಾಡಲಾಗುತ್ತಿದೆಯೇ ಎಂಬ ಅನುಮಾನ ಮೂಡುವಂತಾಗಿದೆ.