

ಪಂಜಾಬ್: ರಾಜ್ಯದಲ್ಲಿ ಕಳ್ಳಭಟ್ಟಿ ಸಾರಾಯಿಯಿಂದ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದು, ಭಾನುವಾರ 98ಕ್ಕೆ ಏರಿಕೆಯಾಗಿದೆ.
ಇನ್ನು ವಿಷಪೂರಿತ ಮದ್ಯದ ದಂಧೆಗೆ ಮಹಿಳೆಯೇ ಕಿಂಗ್ಪಿನ್ ಎನ್ನಲಾಗಿದ್ದು, ಇದರ ಹಿಂದೆ ದೊಡ್ಡ ಜಾಲವೇ ಇದೆ ಎಂದು ಹೇಳಲಾಗುತ್ತಿದೆ.
ಪ್ರತಿದಿನವೂ ವಿಷಪೂರಿತ ಮದ್ಯ ಸೇವಿಸಿ ಪಂಜಾಬ್ನಲ್ಲಿ ಜನರು ಸಾಯುತ್ತಿರುವುದನ್ನು ನೋಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಹೇಳಿದ್ದರು.
ಆದರೆ ಇದಕ್ಕೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ತೀವ್ರ ಕಿಡಿಕಾರಿದ್ದಾರೆ. ನೀವು ನಿಮ್ಮ ಕೆಲಸ ನೋಡಿಕೊಳ್ಳಿ ಸಾಕು ಎಂದು ಅರವಿಂದ್ ಕೇಜ್ರಿವಾಲ್ಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: VIDEO: ಪಾಕಿಸ್ತಾನದ ಪ್ರಮುಖ ನ್ಯೂಸ್ ಚಾನಲ್ನಲ್ಲಿ ನಳನಳಿಸಿದ ಭಾರತದ ಧ್ವಜ; ವೀಕ್ಷಕರು, ಮಾಧ್ಯಮ ಸಿಬ್ಬಂದಿ ಶಾಕ್
ಪಂಜಾಬ್ನ ಮದ್ಯ ದುರಂತವನ್ನು ಅರವಿಂದ್ ಕೇಜ್ರಿವಾಲ್ ಅವರು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇಲ್ಲಿ ನಿಷ್ಕ್ರಿಯವಾಗಿರುವ ಆಮ್ ಆದ್ಮಿ ಪಕ್ಷವನ್ನು ಮತ್ತೆ ಪುನರುಜ್ಜೀವನಗೊಳಿಸಲು ಈ ವಿಚಾರವನ್ನು ಅಸ್ತ್ರವನ್ನಾಗಿ ಪ್ರಯೋಗ ಮಾಡುತ್ತಿದ್ದಾರೆ. ಇಲ್ಲಿನ ದುರಂತವನ್ನು ರಾಜಕೀಯಗೊಳಿಸಲು ನಿಮಗೆ ನಾಚಿಕೆ ಆಗುತ್ತಿಲ್ಲವಾ ಎಂದು ಪ್ರಶ್ನಿಸಿದ್ದಾರೆ.
ಪಂಜಾಬ್ನಲ್ಲಿ ಕಳೆದ ಕೆಲವು ತಿಂಗಳುಗಳಿಂದಲೂ ಅಕ್ರಮ ಮದ್ಯಕ್ಕೆ ಸಂಬಂಧಪಟ್ಟ ದುರಂತಗಳು ನಡೆಯುತ್ತಲೇ ಇದ್ದರೂ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ. ಇದರಿಂದ ಪಂಜಾಬ್ ಸರ್ಕಾರದ ವೈಫಲ್ಯವೂ ಎದ್ದು ಕಾಣುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು.(ಏಜೆನ್ಸೀಸ್)