ನಾಪತ್ತೆಯಾಗಿದ್ದ ವಕೀಲ ಶವವಾಗಿ ಪತ್ತೆ; ಸ್ನೇಹಿತನ ಮೇಲೆ ಅನುಮಾನವಿದ್ದರೂ ಬಂಧಿಸಲಾಗುತ್ತಿಲ್ಲ !

Chodhary
Published on

ಮೇರಠ್​: ನಾಪತ್ತೆಯಾಗಿದ್ದ ವಕೀಲನೊಬ್ಬ ಶವವಾಗಿ ಪತ್ತೆಯಾಗಿದ್ದಾರೆ. ಅದೂ ಅಮೃತಶಿಲೆಯ ಗೋದಾಮಿನಲ್ಲಿ.

ಉತ್ತರ ಪ್ರದೇಶದ ಮೇರಠ್​ನಲ್ಲಿ ಘಟನೆ ನಡೆದಿದ್ದು. ಮೃತ ವಕೀಲನನ್ನು ಧರ್ಮೇಂದ್ರ ಚೌಧರಿ ಎಂದು ಗುರುತಿಸಲಾಗಿದೆ. ಕಳೆದ 8 ದಿನಗಳಿಂದಲೂ ನಾಪತ್ತೆಯಾಗಿದ್ದರು.

ವಕೀಲನನ್ನು ಹತ್ಯೆ ಮಾಡಲಾಗಿದೆ. ಹಣಕಾಸಿಗೆ ಸಂಬಂಧಪಟ್ಟ ಜಗಳವೇ ಕೊಲೆಗೆ ಕಾರಣ. ವಕೀಲನ ಶವ ಸಿಕ್ಕಿರುವ ಗೋದಾಮು ಆತನ ಆಪ್ತ ಸಹಾಯಕ ವಿಕ್ಕಿ ಎಂಬಾತನಿಗೆ ಸೇರಿದ್ದು ಎಂದು ಪೊಲೀಸರು ಹೇಳಿದ್ದಾರೆ. ವಕೀಲ ಧರ್ಮೇಂದ್ರ ಚೌಧರಿ ಅವರ ಮನೆ ಇದ್ದಿದ್ದು ಖರ್ಜಾ ಏರಿಯಾದಲ್ಲಿ. ಜು.25ರಂದು ವಿಕ್ಕಿ ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಳ್ಳಲು ಹೋಗಿದ್ದರು. ಆ ದಿನದಂದೇ ನಾಪತ್ತೆಯಾಗಿದ್ದರು.

ಜು.25ರಂದು ಹೋದ ವಕೀಲ ಮರುದಿನವಾದರೂ ಮನೆಗೆ ವಾಪಸ್​ ಆಗದಿದ್ದಾಗ ಭಯಗೊಂಡ ಅವರ ಕುಟುಂಬದವರು ಹುಡುಕಲು ಪ್ರಾರಂಭಿಸಿದ್ದರು. ಅಲ್ಲದೆ ಪೊಲೀಸರಿಗೂ ದೂರು ನೀಡಿದ್ದರು.

ಪೊಲೀಸರೂ ಕೂಡ ಹುಡುಕಾಟ, ತನಿಖೆ ಪ್ರಾರಂಭಿಸಿದ್ದರು. ವಕೀಲ ಚೌಧರಿಯ ಕೊನೇ ಕಾಲ್​ ಲೊಕೇಶನ್​ ವಿಕ್ಕಿಯ ಗೋಡೌನ್​ ಬಳಿ ತೋರಿಸುತ್ತಿತ್ತು. ಅದೇ ಅನುಮಾನದಲ್ಲಿ ಅಲ್ಲಿ ಹುಡುಕಿದಾಗ ಶವ ಪತ್ತೆಯಾಗಿದೆ.

ವಿಕ್ಕಿ ಹಾಗು ಚೌಧರಿ ಮಧ್ಯೆ ಸುಮಾರು 50 ಲಕ್ಷ ರೂಪಾಯಿ ವ್ಯವಹಾರವಾಗಿದೆ ಎಂದು ಚೌಧರಿ ಬಳಿ ಇದ್ದ ದಾಖಲೆಗಳಿಂದ ಗೊತ್ತಾಗಿದೆ. ಆದರೆ ವಿಕ್ಕಿಯನ್ನು ಬಂಧಿಸಲು ಯಾವುದೇ ಸೂಕ್ತ ಸಾಕ್ಷಿಗಳೂ ಸಿಗುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಹಾಗೇ ತನಿಖೆಯನ್ನು ಮುಂದುವರಿಸಿದ್ದೇವೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net