ಸಿಧು ಎಸೆತಕ್ಕೆ ಪಂಜಾಬ್ ಕ್ಯಾಪ್ಟನ್ ಔಟ್; ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಮರಿಂದರ್ ಸಿಂಗ್, ಹೊಸ ಸಿಎಂ ಬಗ್ಗೆ ಕುತೂಹಲ

Nation
Published on

| ರಾಘವ ಶರ್ಮ ನಿಡ್ಲೆ ನವದೆಹಲಿ

ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡು 2 ತಿಂಗಳು ಪೂರ್ಣಗೊಳ್ಳುವ ಮುನ್ನವೇ ನವಜೋತ್ ಸಿಂಗ್ ಸಿಧು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಕೀಯದ ಮೈದಾನದಲ್ಲಿ ಸಿಧು ಎಸೆದ ಚೆಂಡಿಗೆ ಕ್ಯಾಪ್ಟನ್ ಬೌಲ್ಡ್ ಆಗಿದ್ದಾರೆ. ಇಂದು ಚಂಡೀಗಢದಲ್ಲಿ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೊಸ ಸಿಎಂ ನೇಮಕವಾಗಲಿದೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರಿಗೆ ಅತ್ಯಾಪ್ತರಾಗಿದ್ದ ಅಮರಿಂದರ್ ಸಿಂಗ್, ಸಿಧುವಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿದ ಬಳಿಕ ಇಂಥದ್ದೊಂದು ಸನ್ನಿವೇಶ ನಿರ್ವಣವಾಗಬಹುದು ಎಂದು ನಿರೀಕ್ಷಿಸಿದ್ದರೂ, ಸೋನಿಯಾ ತಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಭಾವಿಸಿದ್ದರು. ಆದರೆ, ಶನಿವಾರ ಬೆಳಗ್ಗೆ ಸೋನಿಯಾರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದ ಕ್ಯಾಪ್ಟನ್, ಅತೀವ ಬೇಸರ ಹೊರಹಾಕಿದ್ದಲ್ಲದೆ ಇಷ್ಟೊಂದು ಮುಖಭಂಗಕ್ಕೀಡಾದ ಮೇಲೆ ನಾನು ಸಿಎಂ ಹುದ್ದೆಯಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ. ನನ್ನ ದಾರಿ ನೋಡಿಕೊಳ್ಳುತ್ತೇನೆ ಎಂದು ಸಂಜೆ ರಾಜೀನಾಮೆ ಸಲ್ಲಿಸಿದ್ದಾರೆ. ವಾಸ್ತವದಲ್ಲಿ, ನವಜೋತ್ ಸಿಂಗ್ ನಾಯಕತ್ವ ಬೆಂಬಲಿಸಿದ್ದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕೂಡ ಕ್ಯಾಪ್ಟನ್ ರಾಜೀನಾಮೆ ನೀಡುವುದನ್ನೇ ಬಯಸಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೆ, ಮುಂದಿನ ಚುನಾವಣೆಗೆ ಪಕ್ಷದಲ್ಲಿ ಹೊಸ ನಾಯಕತ್ವ ಬಯಸಿದ್ದ ಹೈಕಮಾಂಡ್, ನವಜೋತ್ ಸಿಧುವೇ ಸೂಕ್ತ ಅಭ್ಯರ್ಥಿ ಎಂದು ಭಾವಿಸಿದೆ. ಪಕ್ಷದಲ್ಲಿ ಉನ್ನತ ಹುದ್ದೆಗಾಗಿ ಲಾಬಿ ಮಾಡುತ್ತಿದ್ದ ಮಧ್ಯೆಯೇ ಸಿಧು, ಆಮ್ ಆದ್ಮಿ ಪಕ್ಷದ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದು ಕಾಂಗ್ರೆಸ್​ನಲ್ಲಿ ಸಂಚಲನ ಸೃಷ್ಟಿಸಿತ್ತು. ರಾಜ್ಯಾಧ್ಯಕ್ಷರನ್ನಾಗಿ ಮಾಡದಿದ್ದರೆ, ಸಿಧು ಆಪ್ ಸೇರಬಹುದು ಮತ್ತು ಚುನಾವಣೆ ಗೆಲ್ಲುವುದೂ ಅಸಾಧ್ಯ ಎನ್ನುವುದು ವರಿಷ್ಠರ ಆತಂಕವಾಗಿತ್ತು.

ಏತನ್ಮಧ್ಯೆ, 79 ವರ್ಷವಾಗಿದ್ದರೂ, ದೈಹಿಕ-ಮಾನಸಿಕವಾಗಿ ಫಿಟ್ ಆಗಿರುವ ತಮ್ಮನ್ನು ಸಿಧು ಕಾರಣಕ್ಕಾಗಿ ಮೂಲೆಗುಂಪು ಮಾಡಿದ್ದು ಕ್ಯಾಪ್ಟನ್​ರನ್ನು ಕೆರಳಿಸಿತ್ತು. ಜತೆಗೆ, ತಮ್ಮ ಆಡಳಿತ ನೀತಿಗಳ ಬಗ್ಗೆ ಸಿಧು ಬಹಿರಂಗ ಅಸಮಾಧಾನ ವ್ಯಕ್ತಪಡಿಸುತ್ತಾ ವರ್ಚಸ್ಸಿಗೆ ಹಾನಿ ಮಾಡುತ್ತಿರುವುದೂ ಕ್ಯಾಪ್ಟನ್​ಗೆ ಸಹಿಸಲಾಗಲಿಲ್ಲ. ತಮ್ಮ ನಾಯಕತ್ವದ ಬಗ್ಗೆ ರ್ಚಚಿಸಲು ದೆಹಲಿ ನಾಯಕರು ಮೂರು ಬಾರಿ ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆಗಳನ್ನು ನಡೆಸಿದ್ದು ಕೂಡ ಕ್ಯಾಪ್ಟನ್​ರ ಸಿಟ್ಟಿಗೆ ಕಾರಣವಾಗಿತ್ತು. ಸಾಮಾನ್ಯವಾಗಿ ಮುಖ್ಯಮಂತ್ರಿಗಳೇ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು. ಆದರೆ, ಶನಿವಾರ ಸಂಜೆ 5 ಗಂಟೆಗೆ ಶಾಸಕಾಂಗ ಪಕ್ಷ ಏರ್ಪಡಿಸಲಾಗಿದೆ ಎಂದು ಪಕ್ಷದ ರಾಜ್ಯ ಉಸ್ತುವಾರಿ ಹರೀಶ್ ರಾವತ್ ಶುಕ್ರವಾರ ಮಾಹಿತಿ ಹಂಚಿಕೊಂಡಿದ್ದಾಗಲೇ ಕ್ಯಾಪ್ಟನ್ ರಾಜೀನಾಮೆ ಬಗ್ಗೆ ಚರ್ಚೆಗಳು ಶುರುವಾಗಿದ್ದವು. ಇದರಿಂದಾಗಿ, ತಮ್ಮ ಒಪ್ಪಿಗೆಯಿಲ್ಲದೆ ನಡೆಯಲಿರುವ ಶಾಸಕಾಂಗ ಸಭೆಗೆ ಮುನ್ನವೇ ರಾಜೀನಾಮೆ ನೀಡಿ ಹೊರನಡೆಯಬೇಕು ಎಂದು ಕ್ಯಾಪ್ಟನ್ ಸಿಂಗ್ ತೀರ್ವನಿಸಿದ್ದರು. ಕಾಂಗ್ರೆಸ್​ನ ಅನೇಕ ಮುಖಂಡರು ಈಗಲೂ ಸಿಧುರನ್ನು ‘ಗಂಭೀರ ರಾಜಕಾರಣಿ’ ಎನ್ನುವುದನ್ನು ಒಪ್ಪಿಕೊಳ್ಳುವುದಿಲ್ಲ. ಸಿಧು ಬೆಂಬಲಿಗರು ಮಾತ್ರ, ‘ಪಂಜಾಬ್​ನಲ್ಲಿ ಅವರಿಗೆ ಅವರದ್ದೇ ಅಭಿಮಾನಿ ವರ್ಗವಿದ್ದು, ಚುನಾವಣೆಯಲ್ಲಿ ಲಾಭವಾಗಲಿದೆ’ ಎಂದು ಪ್ರತಿಪಾದಿಸುತ್ತಾರೆ. ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಕ್ಯಾಪ್ಟನ್, ಸಿಧು ನಾಯಕತ್ವವನ್ನು ಎಂದಿಗೂ ಒಪ್ಪಲಾರೆ. ಸರ್ಕಾರದಲ್ಲಿ ನೀಡಿದ್ದ ಮಂತ್ರಿ ಸ್ಥಾನವನ್ನೂ ಸರಿಯಾಗಿ ನಿಭಾಯಿಸಲಾಗದ ವ್ಯಕ್ತಿಗೆ ಇಡೀ ರಾಜ್ಯ ನಿಭಾಯಿಸಲು ಸಾಧ್ಯವೇ?’ ಎಂದು ಪ್ರಶ್ನಿಸಿದ್ದಾರೆ.

ಸಿಧುಗೆ ಪಾಕ್ ಸಂಪರ್ಕ, ಭದ್ರತೆಗೆ ಮಾರಕ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕ್ಯಾಪ್ಟನ್ ಅಮರಿಂದರ್ ಸಿಂಗ್, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ವಿರುದ್ಧ ಹರಿಹಾಯ್ದಿದ್ದಾರೆ. ಸಿಧುಗೆ ಪಾಕ್​ನ ಬೆಂಬಲ ಇದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್, ಅಲ್ಲಿನ ಸೇನೆಯ ಮುಖ್ಯಸ್ಥ ಬಜ್ವಾ ಸಿಧುಗೆ ಆಪ್ತ ಗೆಳೆಯರು. ಪಾಕ್ ಬಗ್ಗೆ ಅವರು ಸಹಾನುಭೂತಿ ಹೊಂದಿದ್ದಾರೆ. ಇದು ರಾಷ್ಟ್ರೀಯ ಭದ್ರತೆಗೆ ಮಾರಕ ಎಂದಿದ್ದಾರೆ. ಸಿಧು ಸಾಮರ್ಥ್ಯವನ್ನು ಶಂಕಿಸಿರುವ ಅಮರಿಂದರ್, ವಹಿಸಿಕೊಟ್ಟ ಇಲಾಖೆಯನ್ನೆ ಸರಿಯಾಗಿ ನಿಭಾಯಿಸಲು ಸಾಧ್ಯವಾಗದ ಅವರು ಇನ್ನು ರಾಜ್ಯವನ್ನು ನಿರ್ವಹಿಸುವ ಬಗೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿಧು ಹೆಸರು ಪ್ರಸ್ತಾಪವಾದರೆ ಖಂಡಿತ ಅದನ್ನು ವಿರೋಧಿಸುವೆ. ಅವರು ರಾಜ್ಯವನ್ನು ನಾಶ ಮಾಡಿಬಿಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಜತೆಗೆ ತಮಗೆ ಯಾವುದೇ ಸಂಬಂಧವಿಲ್ಲ ಅಥವಾ ಆ ಪಕ್ಷ ಮುಖಂಡರೊಂದಿಗೆ ಮಾತನ್ನೂ ಆಡಿಲ್ಲ. ರಾಜೀನಾಮೆ ವಿಷಯವನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ತಿಳಿಸಿದೆ. ಅವರು ‘ಈ ವಿಷಯದಲ್ಲಿ ಕ್ಷಮಿಸಿ’ ಎಂದಷ್ಟೆ ಹೇಳಿದರು ಎಂದು ಅಮರಿಂದರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಕ್ಯಾಪ್ಟನ್ ರಾಜೀನಾಮೆ ನೀಡಿದ್ದೇಕೆ?

  • ವಿರೋಧ ನಡುವೆಯೂ ನವಜೋತ್ ಸಿಂಗ್ ಸಿಧುರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು
  • ಸರ್ಕಾರದಲ್ಲಿ ಕ್ಯಾಪ್ಟನ್ ಮಾತಿಗೆ ಸಿಧು ಬೆಲೆ ಕೊಡಲಿಲ್ಲ
  • ರಾಜ್ಯಾಧ್ಯಕ್ಷರಾದ ಬಳಿಕವಂತೂ ಸಿಧು ತಮ್ಮ ಪ್ರಭಾವ ಹೆಚ್ಚಿಸಿಕೊಂಡು ಕ್ಯಾಪ್ಟನ್ ಮೂಲೆಗುಂಪು ಮಾಡಿದರು
  • ಸಿಧುವಿಗೆ ರಾಹುಲ್, ಪ್ರಿಯಾಂಕಾ ಪೂರ್ಣ ಬೆಂಬಲ
  • ಕ್ಯಾಪನ್ ಸರ್ಕಾರದ ನೀತಿಗಳ ಬಗ್ಗೆ ಸಿಧು ಬಹಿರಂಗ ಟೀಕೆ. ಆಡಳಿತ ವೈಫಲ್ಯ ಎಂದು ವಾಗ್ದಾಳಿ
  • ಕ್ಯಾಪ್ಟನ್ ರಾಜೀನಾಮೆ ನೀಡಬೇಕು ಎಂದು 40 ಶಾಸಕರಿಂದ ಪತ್ರ ಬರೆಯಿಸಿ ಹೈಕಮಾಂಡ್​ಗೆ ಒತ್ತಡ
  • ಸಿಎಂ ಕ್ಯಾಪ್ಟನ್ ಸಿಂಗ್ ಸಮ್ಮತಿ ಪಡೆಯದೆಯೇ ಶನಿವಾರ ಸಂಜೆ 5 ಗಂಟೆಗೆ ಶಾಸಕಾಂಗ ಪಕ್ಷೆ ಕರೆದಿದ್ದು
  • ಇದರಿಂದ ಕ್ಯಾಪ್ಟನ್​ಗೆ ರಾಜೀನಾಮೆ ನೀಡುವಂತೆ ಪರೋಕ್ಷ ಸಂದೇಶ
  • ಮುಂದಿನ ಚುನಾವಣೆಗೆ ಕಾಂಗ್ರೆಸ್​ನಲ್ಲಿ ನನ್ನ ನೇತೃತ್ವ ಇರುವುದಿಲ್ಲ ಎಂಬುದು ಕ್ಯಾಪ್ಟನ್​ಗೆ ಸ್ಪಷ್ಟವಾಗಿತ್ತು
  • ತೀವ್ರ ಮುಜುಗರಕ್ಕೊಳಗಾದರೂ ಹೈಕಮಾಂಡ್ ಸುಮ್ಮನಿರುವುದನ್ನು ನೋಡಿ ರಾಜೀನಾಮೆಗೆ ನಿರ್ಧಾರ

ರಾಹುಲ್, ಪ್ರಿಯಾಂಕಾ ಜತೆ ಸಿಧು ದೋಸ್ತಿ

ಕಳೆದ 5 ವರ್ಷದಿಂದಲೂ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಜತೆಗೆ ಕ್ಯಾಪ್ಟನ್ ಸಂಬಂಧ ಅಷ್ಟಕ್ಕಷ್ಟೇ ಎಂಬಂತಿತ್ತು. 2017ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಏಕಾಂಗಿ ಸಾಮರ್ಥ್ಯದಿಂದ ಗೆದ್ದುಕೊಂಡಿದ್ದರಿಂದ ಕ್ಯಾಪ್ಟನ್ ವಿರುದ್ಧ ಧ್ವನಿಯೆತ್ತುವ ಸಾಹಸವನ್ನು ಈ ಇಬ್ಬರು ಮಾಡಿರಲಿಲ್ಲ. ಆದರೆ, ಸಿಧು ಆಗಾಗ್ಗೆ ಪ್ರಿಯಾಂಕಾ ಮತ್ತು ರಾಹುಲ್​ರನ್ನು ಭೇಟಿ ಮಾಡಿ ಕ್ಯಾಪ್ಟನ್ ವಿರುದ್ಧ ದೂರು ನೀಡುತ್ತಲೇ ಇದ್ದರು. ಪಕ್ಷದ ರಾಜ್ಯಾಧ್ಯಕ್ಷ ರಾಗುವ ಮುನ್ನ ಪ್ರಿಯಾಂಕಾ-ಸಿಧು ನಡುವೆ ಸುಧೀರ್ಘ ಸಭೆ ನಡೆದಿತ್ತು ಮತ್ತು ರಾಹುಲ್ ಮನವೊಲಿಸುವಲ್ಲಿಯೂ ಇಬ್ಬರು ಯಶಸ್ವಿಯಾಗಿದ್ದರು. ಸಿಧುವಿಗೆ ಉನ್ನತ ಸ್ಥಾನ ನೀಡಬೇಡಿ ಎಂದು ಅಮರಿಂದರ್ ವಿರೋಧಿಸಿದರೂ ಅದಕ್ಕೆ ಮಾನ್ಯತೆ ಸಿಗಲಿಲ್ಲ.

ಕ್ಯಾಪ್ಟನ್ ನಡೆ ಕುತೂಹಲ

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಕ್ಯಾಪ್ಟನ್ ಸಿಂಗ್ ಮುಂದಿನ ನಡೆ ಏನೆಂಬುದು ಕುತೂಹಲ ಕೆರಳಿಸಿದೆ. ಚುನಾವಣೆಗೆ ನಾಲ್ಕು ತಿಂಗಳಷ್ಟೇ ಬಾಕಿ ಇರುವುದರಿಂದ ಒಂದೋ ಅವರು ಪ್ರತ್ಯೇಕ ಪಕ್ಷ ರಚನೆ ಮಾಡಬಹುದು. ಅಥವಾ ಅಕಾಲಿದಳ, ಆಮ್ ಆದ್ಮಿ ಪಕ್ಷ, ಬಿಜೆಪಿಯಲ್ಲಿ ಒಂದು ಪಕ್ಷ ಆಯ್ಕೆ ಮಾಡಿಕೊಳ್ಳಬಹುದು ಎಂಬ ಮಾತುಗಳು ಕೇಳಿಬರುತ್ತಿದೆ. ‘ಅಮರಿಂದರ್ ಸಿಂಗ್ ರಾಜಮನೆತನದ ವ್ಯಕ್ತಿ. ಜನಪ್ರಿಯ ನಾಯಕ ಎಂಬುದರಲ್ಲಿ ಅನುಮಾನವಿಲ್ಲ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅರುಣ್ ಜೇಟ್ಲಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್​ರಂತಹ ಜಗಜಟ್ಟಿಗಳನ್ನು ಸೋಲಿಸಿದ್ದರು. ಈಗ ಆ ಮೇರು ವ್ಯಕ್ತಿತ್ವಕ್ಕೆ ಅವಮಾನವಾಗಿದೆ. ಅವರ ಬೆಂಬಲಿಗ ಮತವರ್ಗಕ್ಕೆ ಬೇಸರವಾಗಿದೆ. ಖಂಡಿತವಾಗಿಯೂ ಇದು ಚುನಾವಣೆ ಮೇಲೆ ಪರಿಣಾಮ ಬೀರಲಿದೆ’ ಎಂದು ಪಂಜಾಬ್ ಕಾಂಗ್ರೆಸ್ ಯುವ ಮುಖಂಡರೊಬ್ಬರು ವಿಜಯವಾಣಿ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮೊದಲಿನಿಂದಲೂ ಪ್ರಧಾನಿ ನರೇಂದ್ರ ಮೋದಿ ಜತೆಗೆ ಉತ್ತಮ ಬಾಂಧವ್ಯ ಕಾಪಾಡಿಕೊಂಡಿರುವ ಕ್ಯಾಪ್ಟನ್ ಸಿಂಗ್, ರಾಷ್ಟ್ರೀಯತೆ ಮತ್ತು ದೇಶಭಕ್ತಿ ವಿಚಾರದಲ್ಲಿ ಬಿಜೆಪಿ ವಿಚಾರಧಾರೆಗಳನ್ನು ಹಲವು ಸಂದರ್ಭಗಳಲ್ಲಿ ಅನುಮೋದಿಸಿದ್ದಾರೆ. ಆದರೆ, ಮೂರು ಹೊಸ ಕೃಷಿ ಕಾನೂನು ವಿಚಾರದಲ್ಲಿ ಬಿಜೆಪಿ ವಿರೋಧಿ ನಿಲುವು ಪ್ರದರ್ಶಿಸಿರುವುದರಿಂದ ಕ್ಯಾಪ್ಟನ್ ಪ್ರತ್ಯೇಕ್ಷ ಪಕ್ಷ ರಚನೆ ಮಾಡಿದರೂ ಅಚ್ಚರಿ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net