ರಾಮಗೋಪಾಲ್ ಪೇಟ್ ಪೊಲೀಸರಿಂದ ನಟ ಅಲ್ಲು ಅರ್ಜುನ್​ಗೆ ಮತ್ತೊಂದು ನೋಟಿಸ್​​​​​​; ವಿಷಯ ಹೀಗಿದೆ.. | Allu Arjun

Untitled design - 2025-01-05T151145.892
Published on

ಹೈದರಾಬಾದ್​​: ಕ್ರಿಯೇಟಿವ್ ಡೈರೆಕ್ಟರ್ ಸುಕುಮಾರ್ ಮತ್ತು ಐಕಾನ್ ಸ್ಟಾರ್ ಅಲ್ಲು ಅರ್ಜುನ್(Allu Arjun) ಕಾಂಬಿನೇಷನ್‌ನಲ್ಲಿ ಮೂಡಿಬಂದ ‘ಪುಷ್ಪ 2; ದಿ ರೂಲ್‘ ಸಿನಿಮಾ ವಿಶ್ವಾದ್ಯಂತ ಕಲೆಕ್ಷನ್​ನಲ್ಲಿ ಸಖತ್​ ಸೌಂಡ್​ ಮಾಡ್ತಿದೆ. ಆದರೆ ಈ ಖುಷಿಯನ್ನು ಸಂಭ್ರಮಿಸಲು ಅಲ್ಲು ಅರ್ಜುನ್​ ಅವರಿಗೆ ಸಾಧ್ಯವಾಗುತ್ತಿಲ್ಲ. ಸಿನಿಮಾದ ಪ್ರಥಮ ಪ್ರದರ್ಶನದ ವೇಳೆ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟ ಮಹಿಳೆಯೊಬ್ಬರ ದುರಂತ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್​ ಅವರನ್ನು ಆರೋಪಿ ಎಂದು ಹೆಸರಿಸಲಾಗಿದೆ.

ಈ ಪ್ರಕರಣದಲ್ಲಿ ನಗರ ನ್ಯಾಯಾಲಯವು ಅಲ್ಲು ಅರ್ಜುನ್​​ಗೆ ಜನವರಿ 3 ರಂದು ಸಾಮಾನ್ಯ ಜಾಮೀನು ನೀಡಿದೆ. ನ್ಯಾಯಾಲಯದ ನಿರ್ದೇಶನದ ಪ್ರಕಾರ, ನಟ ಅಲ್ಲು ಅರ್ಜುನ್‌ಗೆ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಾಲಯವು ಚಾರ್ಜ್ ಶೀಟ್ ಸಲ್ಲಿಕೆಯಾಗುವವರೆಗೆ ಪ್ರತಿ ಭಾನುವಾರ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿತ್ತು. ಜಾಮೀನು ಷರತ್ತುಗಳ ಭಾಗವಾಗಿ ಭಾನುವಾರ(ಜನವರಿ 5) ಪೊಲೀಸರ ಮುಂದೆ ಅಲ್ಲು ಅರ್ಜುನ್​​ ಹಾಜರಾದರು.

ಅದಷ್ಟೆ ಅಲ್ಲದೆ ನ್ಯಾಯಾಲಯದ ನಿರ್ದೇಶನದ ಪ್ರಕಾರ, ನಟನು ಎರಡು ತಿಂಗಳ ಅವಧಿಗೆ ಅಥವಾ ಆರೋಪಪಟ್ಟಿ ಸಲ್ಲಿಸುವವರೆಗೆ ಪ್ರತಿ ಭಾನುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರ ನಡುವೆ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ಇದಲ್ಲದೇ ನ್ಯಾಯಾಲಯಕ್ಕೆ ಮಾಹಿತಿ ನೀಡದೆ ನಿವಾಸದ ವಿಳಾಸವನ್ನು ಬದಲಾಯಿಸದಂತೆ ಸೂಚಿಸಿದ ಕೋರ್ಟ್, ಅನುಮತಿಯಿಲ್ಲದೆ ವಿದೇಶಕ್ಕೆ ತೆರಳದಂತೆ ನಿರ್ಬಂಧ ವಿಧಿಸಿದೆ. ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವವರೆಗೆ ಈ ಷರತ್ತುಗಳು ಜಾರಿಯಲ್ಲಿರುತ್ತವೆ.

ಈ ಮಧ್ಯೆ ರಾಮಗೋಪಾಲ್ ಪೇಟ್ ಪೊಲೀಸರು ಅಲ್ಲು ಅರ್ಜುನ್​​ಗೆ ನೋಟಿಸ್ ಜಾರಿ ಮಾಡಿದ್ದಾರೆ. ಸಂಧ್ಯಾ ಥಿಯೇಟರ್ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಗು ಶ್ರೀತೇಜ್‌ಗೆ ಚಿಕಿತ್ಸೆ ಪಡೆಯುತ್ತಿರುವ ಸಿಕಂದರಾಬಾದ್‌ನ ಕಿಮ್ಸ್ ಆಸ್ಪತ್ರೆಗೆ ಬರದಂತೆ ಪೊಲೀಸರು ನೋಟಿಸ್‌ನಲ್ಲಿ ಕೇಳಿದ್ದಾರೆ. ಅಲ್ಲು ಅರ್ಜುನ್ ಶ್ರೀತೇಜ್ ಅವರನ್ನು ಭೇಟಿ ಮಾಡಲು ಅನುಮತಿಗಾಗಿ ಅರ್ಜಿ ಸಲ್ಲಿಸಿದರು. ಆದರೆ ಪೊಲೀಸರು ಅದನ್ನು ನಿರಾಕರಿಸಿದರು. ನೀವು ಭೇಟಿ ನೀಡಬೇಕಾದರೆ ಅವರ ಸೂಚನೆಗಳನ್ನು ಪಾಲಿಸಿ ಎಂದು ಪೊಲೀಸರು ಅಲ್ಲು ಅರ್ಜುನ್‌ಗೆ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್​​ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದೇ ಸಸ್ಪೆನ್ಸ್.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net