

Congress: ಮತಗಳ್ಳತನದ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಕೇಳಿದ ಭಾರತೀಯ ಚುನಾವಣಾ ಆಯೋಗದ ಸಿಇಸಿ ಜ್ಞಾನೇಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಮೊದಲು ಆಯೋಗ ತನ್ನ ಮತದಾರರ ಪಟ್ಟಿ ಸ್ವಚ್ಛವಾಗಿದೆ ಎಂದು ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಲಿ. ನಂತರ ನಾವು ಅದನ್ನು ಅನುಸರಿಸುತ್ತೇವೆ ಎಂದು ಸೋಮವಾರ (ಆಗಸ್ಟ್ 18) ತಿರುಗೇಟು ನೀಡಿದೆ.
ಭಾನುವಾರ(ಆಗಸ್ಟ್ 17) ಸುದ್ದಿಗೋಷ್ಠಿ ನಡೆಸಿದ್ದ ಸಿಇಸಿ ಜ್ಞಾನೇಶ್ ಕುಮಾರ್, ವಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ಆರೋಪಗಳ ಕುರಿತು ದಾಖಲೆಗಳ ಜೊತೆ ಸಹಿ ಮಾಡಿದ ಅಫಿಡವಿಟ್ ಅನ್ನು 7 ದಿನದೊಳಗೆ ಸಲ್ಲಿಸಬೇಕು. ಇಲ್ಲದಿದ್ದರೆ ದೇಶದ ಕ್ಷಮೆಯಾಚನೆ ಮಾಡಬೇಕು ಎಂದು ಹೇಳಿದ ಬಳಿಕ, ಇಂದು ಸುದ್ದಿಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದೆ.
ಬಿಹಾರದಲ್ಲಿ ಮತದಾರ ಯಾತ್ರೆಯ ಸಂದರ್ಭದಲ್ಲಿ ಕನ್ಹಯ್ಯ ಕುಮಾರ್ ಜೊತೆ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕ ಪವನ್ ಖೇರಾ, "ಈ ಯಾತ್ರೆ ಆರಂಭವಾಗುತ್ತಿದ್ದಂತೆ ಜ್ಞಾನೇಶ್ ಕುಮಾರ್ ಪತ್ರಿಕಾಗೋಷ್ಠಿ ನಡೆಸಬೇಕಾಯಿತು. ಮುಖ್ಯ ಚುನಾವಣಾ ಆಯುಕ್ತರು ಇದ್ದಾರೆ ಎಂದು ನಮಗೆ ಈಗ ತಿಳಿಯಿತು. ಈ ಹಿಂದೆ ಅನುರಾಗ್ ಠಾಕೂರ್, ಸಂಬಿತ್ ಪಾತ್ರಾ ಅಥವಾ ಬಿಜೆಪಿ ಮೂಲದವರು ಉತ್ತರಿಸುತ್ತಾರೆ ಎಂದುಕೊಂಡಿದ್ದೆವು. ಆದರೆ ಅಂತಿಮವಾಗಿ ಸಿಇಸಿಯವರನ್ನು ನೋಡಿದೆವು" ಎಂದು ವ್ಯಂಗ್ಯವಾಡಿದ್ದಾರೆ. ಹೇಳಿದರು.
"ಅವರು ಅಫಿಡವಿಟ್ ನೀಡುವುದಾಗಿ ಬೆದರಿಕೆ ಹಾಕಿದರು. ಅಂತಹ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ಅವರು ತಮ್ಮದೇ ಆದ ಡೇಟಾವನ್ನು ನಂಬುವುದಿಲ್ಲ." ಎಂದು ವಾಗ್ದಾಳಿ ನಡೆಸಿದರು.
ಬಳಿಕ ಮಾತನಾಡಿದ ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್, ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಅಬ್ ಕಿ ಬಾರ್ 400 ಪಾರ್ ಎಂದು ಘೋಷಣೆಯನ್ನು ಕೂಗಿತ್ತು. ಮತಗಳ್ಳತನದ ಬಳಿಕವೂ ಬಿಜೆಪಿ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಕೆಲವು ನಾಯಕರು 400 ಸ್ಥಾನ ಪಡೆದರೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಿದರು. ಈಗ ಮತಗಳ್ಳತನದ ಮೂಲಕ ಸಂವಿಧಾನವನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತದೆ ಎಂಬ ಅಭಿಪ್ರಾಯವಿತ್ತು. ಆದರೆ ಇದಕ್ಕೆ ವಿರುದ್ಧವಾಗಿ ಫಲಿತಾಂಶ ಬಂದಿತು. ನಾವು ಯಂತ್ರ ಓದಬಲ್ಲ ಡಿಜಿಟಲ್ ಸ್ವರೂಪದ ಮತಪಟ್ಟಿ ಕೊಡುವಂತೆ ಕೇಳಿದ್ವಿ, ಆದರೆ ಅವರು ಕೊಡಲು ನಿರಾಕರಿಸಿದ್ದಾರೆ. ಮತಪಟ್ಟಿಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿತ್ತು. ಈಗ ಮತದಾರ ಪಟ್ಟಿಯಲ್ಲಿ ಸಮಸ್ಯೆ ಇದ್ದು ಅದಕ್ಕಾಗಿ SIR ಪ್ರಕ್ರಿಯೆ ಮಾಡುತ್ತಿದ್ದೇವೆ ಎಂದು ಹೇಳ್ತಿದೆ ಎಂದು ವಾಗ್ದಾಳಿ ನಡೆಸಿದರು.
ಲೋಕಸಭೆ ವಿಪಕ್ಷ ನಾಯಕರು ಮತದಾರರ ಪಟ್ಟಿಯಲ್ಲಿನ ಅಕ್ರಮದ ಬಗ್ಗೆ ಪುರಾವೆ ನೀಡಿದಾಗ, ಆಯೋಗವು ಅವರಿಗೆ ದಾಖಲೆ ಸಮೇತ ಸಹಿ ಮಾಡಿದ ಅಫಿಡವಿಟ್ ನೀಡುವಂತೆ ಕೇಳಿತು. ಸಿಇಸಿಯವರು ಬಿಜೆಪಿ ವಕ್ತಾರರಂತೆ ಮಾತನಾಡಿದರು. ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಉತ್ತರ ನೀಡಲಿಲ್ಲ. ನೀವು ಮತದಾರರ ಪಟ್ಟಿ ಸ್ವಚ್ಛವಾಗಿದೆ ಎಂದು ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದರೆ, ನಾವು ಅಕ್ರಮದ ಮತಪಟ್ಟಿ ದಾಖಲೆ ಬಗ್ಗೆ ಅಫಿಡವಿಟ್ ಸಲ್ಲಿಸುತ್ತೇವೆ ಎಂದು ಕನ್ಹಯ್ಯ ಕುಮಾರ್ ಸವಾಲು ಹಾಕಿದರು.(ಏಜೆನ್ಸೀಸ್)