

ಅಲ್ಲಮನು (Allama Prabhu) ಇಷ್ಟಲಿಂಗದ ರಹಸ್ಯವನ್ನು ತಿಳಿಸಿದ ನಂತರ ‘ಭಕ್ತಿತತ್ತ್ವದ ನೆಲೆ’ಯನ್ನು ಮುಂದುವರಿಸುತ್ತಾನೆ. ‘ಭಕ್ತಿ’ ಎಂಬುದು ಶಿವಯೋಗದ ದೃಷ್ಟಿಯಿಂದ ವಿಶಿಷ್ಟವಾದುದು. ಬೇರೆ ಧರ್ಮಗಳಲ್ಲಿ ಕಾಣದ, ವೀರಶೈವ ಧರ್ಮದಲ್ಲಿ ಮಾತ್ರ ಕಾಣುವ ಅಂಶವೆಂದರೆ: ಭಕ್ತನು ಗುರುವಿಗೆ, ಲಿಂಗಕ್ಕೆ ಮತ್ತು ಜಂಗಮಕ್ಕೆ ನೀಡುವ ಪ್ರೀತಿ, ವಿಶ್ವಾಸ ಮತ್ತು ಗೌರವ. ಗುರುವು ಶಿಷ್ಯನಿಗೆ ಇಷ್ಟಲಿಂಗ ದೀಕ್ಷೆಯನ್ನು ಕೊಟ್ಟು ವೀರಶೈವ ಧರ್ಮದ ಆಚಾರಗಳನ್ನು ಬೋಧಿಸಿ ಶಿಷ್ಯನು ಆಧ್ಯಾತ್ಮಿಕ ಪಥದಲ್ಲಿ ಸಾಗುವಾಗ ಅವನಿಗೆ ಮಾರ್ಗದರ್ಶನ ನೀಡುವುದರಿಂದ, ಅವನು ಗುರುವಿಗೆ ಕೃತಜ್ಞತೆಯನ್ನು ತೋರಿಸುವ ಸಲುವಾಗಿ ಭಕ್ತಿಯನ್ನು ತೋರಿಸಬೇಕಾಗುತ್ತದೆ.
ಈ ಮಾತನ್ನು ಇನ್ನಷ್ಟು ವಿವರಿಸಿಕೊಳ್ಳುವುದು ಅವಶ್ಯ. ಭಕ್ತಿ ಎಂಬುದು ಭಕ್ತನ ನುಡಿವಳಿ ಮಾತ್ರವಲ್ಲ, ಅದೊಂದು ಶಕ್ತಿ. ಪರಶಿವನು ಸೃಷ್ಟಿಯ ನಿರ್ಧಾರ ಮಾಡಿದ ಕೂಡಲೇ ಅವನಲ್ಲಿ ಅವ್ಯಕ್ತವಾಗಿದ್ದ ಚಿತ್ತು ಎನಿಸಿಕೊಳ್ಳುವ ಶಕ್ತಿಯಲ್ಲಿ ಕ್ಷೋಭೆಯು ಉಂಟಾಯಿತು. ಆಗ ಪರಶಿವನು ಅಂಗಸ್ಥಲ ಮತ್ತು ಲಿಂಗಸ್ಥಲ ಎಂದು ಎರಡು ಭಾಗ ಮಾಡಿದ. ಲಿಂಗಸ್ಥಳವೆಂದರೆ: ಸೃಷ್ಟಿಯಲ್ಲಿ ನಿರತನಾಗುವ ಪರಶಿವ ಮತ್ತು ಅವನ ಕಲಾಶಕ್ತಿ. ಅಂಗಸ್ಥಲವೆಂದರೆ ಸೃಷ್ಟಿಯಾಗಲಿರುವ ಮನುಷ್ಯ ಮತ್ತು ಅವನ ಭಕ್ತಿಶಕ್ತಿ. ನಮ್ಮ ವಿಶ್ವವು ಮನುಷ್ಯನ ಕಲಾಶಕ್ತಿಯಿಂದಲೇ ಸೃಷ್ಟಿಯಾಗಿದೆ. ಆದರೆ, ಮನುಷ್ಯನಲ್ಲಿರುವ ಕಲಾಶಕ್ತಿಗಳಾದರೋ ಪರಿವರ್ತನಶೀಲವಾದವು. ಮನುಷ್ಯನನ್ನು ಬಂಧಿಸುವುದು ಕಲಾಶಕ್ತಿಗಳ ಸ್ವಾಭಾವಿಕ ಗುಣವಾದರೆ, ಮುಕ್ತಿ ಪಡೆಯುವಂತೆ ಪ್ರಚೋದಿಸುವುದು ಭಕ್ತಿಶಕ್ತಿಗಳ ಸ್ವಾಭಾವಿಕ ಗುಣ. ಹಾಗೆ ನೋಡಿದರೆ, ಕಲಾಶಕ್ತಿಗಳು ಮತ್ತು ಭಕ್ತಿಶಕ್ತಿಗಳೆಂಬ ಎರಡು ಬಗೆಯ ಶಕ್ತಿಗಳಿಲ್ಲ. ಆಧ್ಯಾತ್ಮಿಕವಾಗಿ ಕಲಾಶಕ್ತಿ ಗಳನ್ನು ಪರಿವರ್ತಿಸಿದರೆ ಅವೇ ಭಕ್ತಿಶಕ್ತಿಗಳಾಗುತ್ತವೆ.
ಕಲಾಶಕ್ತಿಗಳಲ್ಲಿ ಆರು ಪ್ರಕಾರ. ಚಿತ್ಶಕ್ತಿ, ಪರಾಶಕ್ತಿ, ಆದಿಶಕ್ತಿ, ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿ. ಈ ಶಕ್ತಿಗಳನ್ನು ಪರಿವರ್ತಿಸಿದಾಗ, ಅವು ಸಮರಸ ಭಕ್ತಿ, ಆನಂದಭಕ್ತಿ, ಅನುಭಾವ ಭಕ್ತಿ, ಅವಧಾನ ಭಕ್ತಿ, ನಿಷ್ಠಾಭಕ್ತಿ ಮತ್ತು ಶ್ರದ್ಧಾಭಕ್ತಿಗಳೆಂದು ಕರೆಸಿಕೊಳ್ಳುತ್ತವೆ. ಪರಿವರ್ತನೆಯು ಸ್ಥೂಲಶಕ್ತಿಯಾದ ಕ್ರಿಯಾಶಕ್ತಿಯಿಂದ ಪ್ರಾರಂಭಗೊಂಡು; ಚಿತ್ಶಕ್ತಿಯಲ್ಲಿ ಕೊನೆಗೊಳ್ಳುತ್ತದೆ. ಇದು ಸ್ಥೂಲವಾಗಿ ವಚನಕಾರರಲ್ಲಿ ಕಾಣುವ ಭಕ್ತಿಯ ನೆಲೆ. ಶರಣನೊಬ್ಬನ ಆಧ್ಯಾತ್ಮಿಕ ಸಾಧನೆಯ ಪ್ರಥಮ ಹಂತದಲ್ಲಿರುವ ಸಾಧಕನೊಬ್ಬನು ಶ್ರದ್ಧಾಭಕ್ತಿಯಿಂದ ಪ್ರಾರಂಭಗೊಂಡು ಒಂದೊಂದೇ ಹಂತವನ್ನು ಏರುತ್ತ ಅವನು ನಿಷ್ಠಾಭಕ್ತಿಗೆ ಏರಿ, ಅಲ್ಲಿಂದ ಅವಧಾನ ಭಕ್ತಿಗೆ ಬಂದು, ಅನುಭಾವ ಭಕ್ತಿಯನ್ನು ಕಂಡು; ಆನಂದ ಭಕ್ತಿಯಲ್ಲಿ ಪರಿಣಮಿಸಿ, ಕೊನೆಯದಾದ ಸಮರಸ ಭಕ್ತಿಯಲ್ಲಿ ಪರಿಣಮಿಸುವ ಬಗೆಯಂತೂ ಅತ್ಯಂತ ವಿಶಿಷ್ಟವಾದುದು.
ಅಲ್ಲಮಪ್ರಭುದೇವನು ಇಂಥ ಷಡ್ ವಿಧಭಕ್ತಿಯ ನೆಲೆಯನ್ನು ಕಂಡು ಸಮರಸದ ತುದಿಗೆ ಏರಿದವನು. ಅವನು ಶರಣರಿಗೆ ‘ಭಕ್ತಿಮಾರ್ಗದ ನೆಲೆಯನ್ನು ತೋರಿಸಿದ’ ಬಗೆಯನ್ನು ಅತ್ಯಂತ ಮನೋಜ್ಞವಾಗಿ ಚಾಮರಸ ತನ್ನ ‘ಪ್ರಭುಲಿಂಗ ಲೀಲೆ’ಯಲ್ಲಿ ಆವಾಹಿಸಿ ತೋರಿಸುತ್ತಾನೆ. ಕೀಳು ನಡತೆ ಉಳ್ಳವನಲ್ಲಿ ಭಕ್ತಿ ಇರುವುದಿಲ್ಲ. ಧೀರನಲ್ಲದ ಹೇಡಿಗೆ ಭಕ್ತಿ ಬರುವುದಿಲ್ಲ. ನೀಚರಾದ ವರಿಗೆ ಭಕ್ತಿ ಎಂಬುದು ಮಾರುದೂರ. ಗರ್ವಪಡುವ ಪಾಪಿಗೆ ಭಕ್ತಿ ಎಂದಿಗೂ ಕಾಣಿಸುವುದಿಲ್ಲ. ಸತ್ಯವನ್ನು ಹೇಳದೆ ಸುಳ್ಳಿನ ಮೇಲೆ ಭಕ್ತಿಯು ಎಂದಿಗೂ ತೋರುವುದಿಲ್ಲ. ಕೇವಲ ಹೊಟ್ಟೆಪಾಡಿ ಗಾಗಿ ಬದುಕಿರುವವನಿಗೆ ಭಕ್ತಿ ಎಂಬುದಂತೂ ದೂರವೇ ಸರಿ! ಅದು ನಿಮಿತ್ತದಲಿಷ್ಟಲಿಂಗದ/ಸದಮಲದ ಸೇವಾನುಭಾವನೆ/ ಹೃದಯದಲಿ ನೆಲೆಗೊಂಡು ಬಿಡದಳವಟ್ಟು ಬಲಿದಿರಲು!/ವಿದಿತವೆನಿಪಾ ಪ್ರಾಣಲಿಂಗದ/ವಿಧಿಯನಳೆವಂಜನವು ನೇತ್ರಕೆ/ ಹುದುವಹುದೆಲೈ ತನಗೆ ತಾನೇ ಬಸವ ಕೇಳೆಂದ- (ಪ್ರಭು.ಲಿಂ.ಲೀಲೆ 16-42)
ಹುಸಿಭಕ್ತಿಯ ನೆಲೆಗಳನ್ನು ಶರಣನಾದವನು ನಿವಾರಿಸಿ ಕೊಳ್ಳಬೇಕು. ಮನಸ್ಸಿನಲ್ಲಿ ಇಷ್ಟಲಿಂಗದ ಪಾವಿತ್ರ್ಯ ನೆಲೆಗೊಳ್ಳಬೇಕು. ಅದು ಚೆನ್ನಾಗಿ ಭಕ್ತನಲ್ಲಿ ಹೊಂದಿಕೊಳ್ಳಬೇಕು ಮತ್ತು ಬಲಗೊಳ್ಳಬೇಕು. ಹೀಗೆ ಇರುವಾಗ ಪ್ರಾಣಲಿಂಗವೆಂಬ ಗುಪ್ತಧನವನ್ನು ತಿಳಿಯಲು ಶರಣನಿಗೆ ಸಾಧ್ಯವಾಗುತ್ತದೆ. ಅಲ್ಲಮನು ಈ ರೀತಿಯಲ್ಲಿ ಇಷ್ಟಲಿಂಗಕ್ಕೆ ಹೊಂದಿಕೊಳ್ಳುವ ಮಾರ್ಗವನ್ನು ಮತ್ತು ಆಚರಿಸಬೇಕಾದ ಕ್ರಿಯೆಗಳನ್ನು ಸಾವಧಾನವಾಗಿ ಶರಣರಿಗೆ ಹೇಳಿದನು.
ಬಸವಣ್ಣನು ಅಲ್ಲಮನ ಮಾತುಗಳಿಗೆ ಜೀವಾತು ಆದನು. ಅವನ ಮನಸ್ಸು ಪ್ರಪುಲ್ಲಿತವಾಯಿತು. ‘ಗುರುವೇ ನೀನೀಗ ಹೇಳಿದ ಇಷ್ಟಲಿಂಗದ ಭಕ್ತಿಮಾರ್ಗ ಕೇಳಿದರೆ ಸಾಕಾಗುವುದಿಲ್ಲ. ಅದು ಆಚರಣೆಯಲ್ಲಿ ಬಂದು ನೆಲೆ ನಿಲ್ಲಬೇಕು. ಅದು ನೆಲೆ ನಿಲ್ಲಲು ಏನು ಮಾಡಬೇಕು?’ ಎಂದು ಕೈಮುಗಿಯುತ್ತ ಕೇಳಿಕೊಂಡನು. ಆಗ ಅಲ್ಲಮನು ‘ಇದು ಒಂದು ದಿನದ ಗೆಯ್ಮೆ ಅಲ್ಲ; ನಿರಂತರವಾಗಿ ನಡೆಯಬೇಕಾದ ಸಾಧನೆ ಹಾಗೂ ಆಚರಣೆಯಲ್ಲಿ ಇದು ಸಾಧಿತವಾಗಬೇಕು. ಪ್ರತಿಯೊಬ್ಬ ಶರಣನು ಇಷ್ಟಲಿಂಗದ ನೆಲೆಯನ್ನು ಅರಿತು, ಆನಂತರ ಭಕ್ತಿಮಾರ್ಗದ ನೆಲೆಯನ್ನು ಅರಿಯಬೇಕು’ ಎಂದು ಭಕ್ತಿಮಾರ್ಗದ ರಹಸ್ಯಗಳನ್ನು ಹೇಳತೊಡಗಿದನು.