

ಅಲ್ಲಮನ ಮಾತುಗಳನ್ನು ಕೇಳುತ್ತ ಬಸವಣ್ಣ ಸಂಕೋಚಗೊಂಡನು. ನಾನೊಬ್ಬ ಸೇವಕರಲ್ಲಿ ಸೇವಕ-ಎಂದು ಹೇಳಿ ನೆಲಕ್ಕೆ ಬಿತ್ತಿದ ಕಾಳು ಬೆಳೆಯುವುದಕ್ಕೆ ಮೊದಲೆ ಮೊಳಕೆಯಲ್ಲೇ ಯಾರಾದರೂ ಪರೀಕ್ಷಿಸುತ್ತಾರೆಯೆ? ನಾನೆಲ್ಲಿ, ಈ ಹೊಗಳಿಕೆಯ ಮಾತುಗಳೆಲ್ಲಿ? ಎನ್ನುತ್ತ ಬಸವಣ್ಣ ಕಂಬನಿದುಂಬಿದನು. ಅವನು ಅಡಿಗಡಿಗೆ ‘ಶಿವಾ ಶಿವಾ’ ಎಂದು ಉದ್ಗರಿಸಿ ನನ್ನ ಮಾತನ್ನು ಮನವಿಟ್ಟು ಕೇಳು ಎಂದು ಬಿನ್ನೈಸಿಕೊಂಡನು. ಆಗ ಅಲ್ಲಮನು ನಸುನಗುತ್ತ ‘ನಿನಗಲ್ಲದೆ ಇನ್ನಾರಿಗೆ ಲಿಂಗಾನುಭವದ ಸುಖವನ್ನು ಹೇಳಬೇಕು’ ಎಂದು ಇಷ್ಟಲಿಂಗದ ಅನುಭವವನ್ನು ತಿಳಿಸಿಕೊಟ್ಟನು. ಶರೀರಗಳು ಇಲ್ಲದ ಭ್ರಾಂತಿಯನ್ನು ಹುಟ್ಟಿಸುತ್ತವೆ. ಇವು ಅಪ್ರಯೋಜಕ. ಮನುಷ್ಯದೇಹವು ಅವುಗಳೊಳಗೆ ಸಲ್ಲುವಂಥ ಕರ್ಮಗಳಿಗೆ ಅನುಗುಣವಾಗಿ ಜೀವನಿಗೆ ಪುಣ್ಯ-ಪಾಪಗಳನ್ನು ಗಳಿಸಿ ಕೊಡುತ್ತದೆ. ಮನುಷ್ಯ ದೇಹಿಗಳು ಆ ಇಂದ್ರಿಯದ ವಿಷಯಗಳಿಗೆ ಸಿಕ್ಕದಿರುವುದು ಅಸಾಧ್ಯ. ಆದರೆ, ಅಷ್ಟರೊಳಗೆ ಎಚ್ಚೆತ್ತುಕೊಳ್ಳಬೇಕು. ಇದು ಕ್ಷುದ್ರಜನ್ಮವೆಂದು ಅವನು ಅರಿಯಬೇಕು. ಆಗ ಅಂಥವನು ಕೃತಾರ್ಥನಾಗಲು ಸಾಧ್ಯವಾಗುತ್ತದೆ. ಮನೆಯಲ್ಲಿ ಹಾಲು-ಬೆಣ್ಣೆಗಳು ಇರುವಾಗ ಹಬ್ಬವನ್ನು ಆಚರಿಸಬೇಕು. ಗಾಳಿ ಬೀಸುವಾಗಲೇ ಕಾಳಿನೊಳಗಿರುವ ಹೊಟ್ಟನ್ನು ತೂರಿಕೊಳ್ಳಬೇಕು. ಕಾಲು- ಕೈ- ಕಣ್ಣುಗಳು ಚೆನ್ನಾಗಿರುವ ಕಾಲದಲ್ಲೇ ಉತ್ತಮಗತಿಯನ್ನು ಹುಡುಕಿಕೊಳ್ಳಬೇಕು. ಇದು ಬುದ್ಧಿವಂತರ ಲಕ್ಷಣ. ಶಿವಾಗಮಗಳ ತಿರುಳನ್ನು ಅಂತರಂಗದಲ್ಲಿ ತಿಳಿದುಕೊಂಡು ಆ ಮಾರ್ಗದಲ್ಲಿ ಬುದ್ಧಿಯನ್ನು ತೊಡಗಿಸಬೇಕು. ಗುರುಕರುಣೆಯನ್ನು ಪಡೆದು ಮೊದಲಿಗೆ ತನು- ಮನ- ಧನಗಳ ಮೇಲಿನ ಮೋಹಗಳನ್ನು ಕಳಚಿಕೊಳ್ಳಬೇಕು. ಅಂಥವನು ಜಾಣನೆನಿಸಿಕೊಳ್ಳುತ್ತಾನೆ-ಎಂದು ಅಲ್ಲಮನು ಹತ್ತಾರು ಲೋಕದ ದೃಷ್ಟಾಂತಗಳನ್ನು ಕೊಟ್ಟು ಇಷ್ಟಲಿಂಗದ ಅನುಭವವನ್ನು ಮನವರಿಕೆ ಮಾಡಿಕೊಟ್ಟನು. ಇಷ್ಟಲಿಂಗದ ಪರಮರಹಸ್ಯವನ್ನು ತಿಳಿಸಿಕೊಡುತ್ತಾ ಹೋದನು.
ಅಲ್ಲಮನು ಶರೀರ- ಪ್ರಾಣ- ಪ್ರಾಣಲಿಂಗ- ಇಷ್ಟಲಿಂಗಗಳ ನೆಲೆಗಳನ್ನು ಬಸವಣ್ಣನಿಗೆ ಸೂಕ್ಷ್ಮವಾಗಿ ತಿಳಿಸಿಕೊಟ್ಟನು. ಈ ಸಂಗತಿಯನ್ನು ಚಾಮರಸಕವಿಯು ನಿರೂಪಿಸಿರುವ ಬಗೆಯನ್ನು ಇದೀಗ ಅವನ ಮಾತಿನಲ್ಲಿಯೇ ನಾವು ಅರಿಯೋಣ:
ಕೆಯ್ಯೊಳಗೆ ಶಿವಲಿಂಗವಿರ್ಪೆಡೆ/ಮೆಯ್ಯ ಸೋಂಕಿರಬೇಕು. ವಸ್ತ್ರದ/ಹುಯ್ಯಿಲಿಗೆ ಹೂಪತ್ರೆಗಳ ಜಂಜಡಕೆ ಜೊಂಪಿಸದೆ/ ಒಯ್ಯನೀಕ್ಷಿಸಿ ತನ್ನಲಿಹ ಮೂ/ಮೆಯ್ಯ ವಸ್ತ್ರವಮಾಡುವೆನೆ ಜಗ/ ದಯ್ಯನೆನಿಸುವ ಭಕ್ತನಹನೈ ಬಸವ ಕೇಳೆಂದ. (ಪ್ರಭುಲಿಂಗಲೀಲೆ 16-15) ‘ಅಂಗೈಯಲ್ಲಿ ಶಿವಲಿಂಗವನ್ನು ಇಟ್ಟುಕೊಳ್ಳಬೇಕು. ಅದು ದೇಹವನ್ನೆಲ್ಲಾ ವ್ಯಾಪಿಸಿಕೊಂಡು ಸೋಂಕಿದ ಭಾವನೆಯನ್ನು ತುಂಬಿ ಕೊಳ್ಳಬೇಕು. ವಸ್ತ್ರ-ಹೂ-ಪತ್ರೆಗಳನ್ನು ನೋಡುತ್ತ ಮೈಮರೆಯದೆ ಇರಬೇಕು. ತನ್ನ ಒಳಗಿರುವ ಸ್ಥೂಲ-ಸೂಕ್ಷ್ಮ ಕಾರಣ ಶರೀರಗಳನ್ನು ವಸ್ತ್ರವನ್ನಾಗಿ ಮಾಡಿಕೊಳ್ಳಬೇಕು. ಅಂಥವನು ಜಗದ ಗುರುವೆನಿಸುವ ಭಕ್ತನಾಗುತ್ತಾನೆ’ ಹೀಗೆಂದು ಅಲ್ಲಮನು ಹೇಳಿ ಇಷ್ಟಲಿಂಗದ ಅನುಭವದ ಸುಖವನ್ನು ಬಸವಣ್ಣನಿಗೆ ತಿಳಿಸತೊಡಗಿದನು.
ಪ್ರತಿಯೊಬ್ಬ ಭಕ್ತನಲ್ಲೂ ಮೂರು ಶರೀರಗಳಿರುತ್ತವೆ. ಅವುಗಳನ್ನು ಲಿಂಗದೇವನೊಳಗೆ ವಸ್ತ್ರವನ್ನಾಗಿಸಿಕೊಳ್ಳಬೇಕು. ಆಗ ಭಕ್ತನಿಗೆ ಲಿಂಗಸ್ಮರಣೆ ಬರುತ್ತದೆ. ಎಲ್ಲಾ ಕಾರ್ಯಗಳನ್ನು ಬಿಟ್ಟು ಇಷ್ಟಲಿಂಗಪೂಜೆಯನ್ನು ಮಾಡುತ್ತಿರಬೇಕು. ಮನಸ್ಸಿನಲ್ಲಿ ಸಮಸ್ತ ಚರಾಚರ ಸಮೂಹಗಳ ಮೇಲೆ ಕರುಣೆಯನ್ನು ತೋರಿಸುತ್ತ ಲಿಂಗಕ್ಕೆ ಮಜ್ಜನವನ್ನು ಮಾಡುತ್ತಿರಬೇಕು. ಕರ್ಮಗಳನ್ನು ತಿರಸ್ಕರಿಸಬೇಕು. ಶಿವಧರ್ಮದಲ್ಲಿ ನೆಲೆಯಾಗಿ ನಿಂತು ಮನಸ್ಸನ್ನು ನಿರ್ಮಲಗೊಳಿಸಿಕೊಳ್ಳಬೇಕು. ಲಿಂಗಸ್ಮರಣೆಯನ್ನು ಅಡಿಗಡಿಗೆ ಮಾಡುತ್ತಿರಬೇಕು. ಭಕ್ತನು ಗುಣತ್ರಯಗಳಿಂದ ಮುಕ್ತನಾಗಬೇಕು. ಆಗ ಲಿಂಗದ ಸ್ಮರಣೆ ಬಲವಾದರೆ, ಪ್ರಾಣಲಿಂಗದ ದಾರಿಯನ್ನು ಭೇದಿಸಲು ಭಕ್ತನಿಗೆ ಸಾಧ್ಯವಾಗುತ್ತದೆ. ಪ್ರಾಣವು ಸ್ಥೂಲ-ಸೂಕ್ಷ್ಮ-ಕಾರಣಗಳೆಂಬ ಮೂರು ಶರೀರದೊಳಗೆ ಇರುತ್ತದೆ. ಅದಕ್ಕೆ ಮೂರು ವಸ್ತ್ರಗಳನ್ನು ಸೇರಿಸಿ ಅಲ್ಲಿ ಇಷ್ಟಲಿಂಗವನ್ನು ನೆಲೆಗೊಳಿಸಿಕೊಳ್ಳಬೇಕು. ಅಂಥವನು ಶಿವಭಕ್ತನೆಂದು ಕರೆಸಿಕೊಳ್ಳುತ್ತಾನೆ. ಇಂಥವನು ಇಷ್ಟಲಿಂಗವನ್ನು ಸದಾ ತನ್ನ ದೇಹದ ಮೇಲೆ ಧರಿಸಿಕೊಂಡಿದ್ದರೆ ಶಿವಭಕ್ತಿಯ ನೆಲೆಯನ್ನು ತಿಳಿಯಲು ಸಾಧ್ಯವಾಗುತ್ತದೆ. ಅಲ್ಲಮನು ಲಿಂಗಾನುಭವದ ಸೂಕ್ಷ್ಮಸಂಗತಿಗಳನ್ನು ಬಸವಣ್ಣನಿಗೆ ತಿಳಿಸುತ್ತ ಶರೀರತ್ರಯ- ಷಟ್ಸ್ಥಲೋಪಾಸನೆಗಳ ರಹಸ್ಯವನ್ನು ಬಸವಣ್ಣನಿಗೂ ಅಲ್ಲಿ ನೆರೆದಿದ್ದ ಶರಣರಿಗೂ ಶಿವಭಕ್ತರಿಗೂ ತಿಳಿಸಿಕೊಟ್ಟನು.
(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)
(ಪ್ರತಿಕ್ರಿಯಿಸಿ:vvsudina@gmail.com, mallepuram@gmail.com)