

ಈ ವಚನವು, ಚನ್ನಬಸವರಾಜ ದೇವರು ಕಲ್ಯಾಣದ ದ್ವಾರದಲ್ಲಿ ಹಾಕಿಸಿದ ಶಾಸನದ ಸಂಕ್ಷಿಪ್ತೀಕರಣವಾಗಿದೆ. ‘ಕಲ್ಯಾಣವೆಂಬ ಶಿವಪುರ ಕೈಲಾಸವ ಮಾಡಿ’ ಎಂದು ಅಲ್ಲಮಪ್ರಭುಗಳು ಹೇಳುತ್ತಿದ್ದಾರೆ. ಇಲ್ಲಿ ಬಂದಿರುವ ಕಲ್ಯಾಣ, ಶಿವಪುರ ಕೈಲಾಸ ಒಂದಕ್ಕೊಂದು ಏರಿಕೆಯ ಕ್ರಮದಲ್ಲೂ ಇವೆ. ಅವುಗಳನ್ನು ಸಮಾನಾಂತರ ನೆಲೆಯಲ್ಲೂ ಕಾಣಲಾಗುತ್ತಿದೆ. ಕಲ್ಯಾಣವನ್ನು ಶಿವಪುರವಾಗಿಸಿರುವವನು ಬಸವಣ್ಣನೆಂಬುದು ಇಲ್ಲಿ ಗಮ್ಯಗೋಚರ. ನಾವು ಮರಳಿ ಕಲ್ಯಾಣದ ನೆಲೆಯನ್ನು ಶಿವಗಣಪ್ರಸಾದಿಯ ಮಾತಿನಲ್ಲಿ ಕೇಳೋಣ.
ಆ ಪಟ್ಟಣದಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶಿವಾಲಯವುಂಟು. ಆ ಶಿವಾಲಯಗಳಲ್ಲಿ ತ್ರಿಪುರಾಂತಕ ದೇವಾಲಯ ಮುಖ್ಯವಾದುದು. ಅಲ್ಲಿ ಮುನ್ನೂರ ಅರುವತ್ತು ಪದ್ಮಪತ್ರದ ಸರೋವರಗಳು ಮನೋಹರವಾಗಿವೆ. ಎರಡು ಲಕ್ಷ ಎಂಬತ್ತೈದು ಸಾವಿರದ ಏಳುನೂರೆಪ್ಪತ್ತು ದಾಸೋಹ ನೀಡುವ ಮಠಗಳುಂಟು. ಆ ಮಠಗಳಲ್ಲಿ ಬಸವರಾಜದೇವರ ಮಠ ವಿಶಿಷ್ಟವಾದುದು. ಕಲ್ಲುಗೆಲಸದಿಂದ ಮಾಡಿದ ಗೋಡೆ, ಅತಿಸೂಕ್ಷ್ಮವಾಗಿ ಕುಸುರಿಗೆಲಸ ಮಾಡಿರುವ ಐದು ದ್ವಾರಗಳು. ಅವಕ್ಕೆ ಪಂಚಾಕ್ಷರಿಯ ಶಾಸನ. ರುದ್ರಾಕ್ಷಿಯ ಸೂಸಕ ಕಣ್ಣಿಗೆ ಒತ್ತುತ್ತಿವೆ. ಅಲ್ಲಿಯೇ ನಂದಿಯ ಕಂಭಧ್ವಜ, ಎತ್ತರವಾದ ಪತಾಕೆ, ವ್ಯಾಸಧ್ವಜ ಉಂಟು. ಗುರುಲಿಂಗ ಜಂಗಮರಿಗೆ ಪಾದಾರ್ಚನೆ ಮಾಡಲು ನಾಲ್ಕು ಪುರುಷ ಪ್ರಮಾಣದ ಪುಷ್ಕರಣಿ, ಪಾದೋದಕದ ತುಂಬ ನುಚ್ಚಿ ಬೆಳೆವ ರಾಜಶಾಲಿಯ ಗದ್ದೆ ಹನ್ನೆರಡು ಕಂಡುಗ. ಆ ಅರಮನೆಯ ವಿಸ್ತೀರ್ಣದೊಳಗೆ ಲಿಂಗಾರ್ಚನೆ ಮಾಡುವ ಲಕ್ಷದ ಮೇಲೆ ತೊಂಬತ್ತಾರು ಸಾವಿರ ವಿಸ್ತೀರ್ಣದ ಮಠಗಳ ನೆಲಸು ಉಂಟು.
ಈ ಸಂಗತಿಗಳನ್ನು ಗಮನಿಸಿದಾಗ ‘ಅಸಂಖ್ಯತ್ವ’ ಎಂಬ ತಾತ್ತಿ್ವಕ ನೆಲೆ ಕಾಣುತ್ತದೆ. ಇಡಿ ಕಲ್ಯಾಣವೇ ಒಂದು ಆಧ್ಯಾತ್ಮಿಕ ಸಾಧನಾರಂಗ. ಅಲ್ಲಿಗೆ ಸಹಸ್ರಾರು ಶರಣರು ಬಂದು ನೆಲೆ ನಿಂತಿದ್ದಾರೆ! ಭಿನ್ನ ಭಿನ್ನ ಪರಿಸರದಿಂದ ಬಂದವರು ಲಿಂಗಾಂಗ ಸಯೋಗದಿಂದ ಏಕತ್ರವಾದ ‘ಶಿವಯೋಗ’ದ ದಾರಿಯಲ್ಲಿ ನಿಂತಿದ್ದಾರೆ! ಶಿವಯೋಗಕ್ಕೆ ಸಂಖ್ಯಾಶಾಸ್ತ್ರದ ಇನ್ನೊಂದು ನೆಲೆಯೂ ಉಂಟು! ‘ಕಲ್ಯಾಣಪುರ’ವನ್ನು ಭೌತಿಕವಾಗಿಯೇ ನಾವು ನೋಡಬೇಕಾಗಿಲ್ಲ. ಅದೊಂದು ‘ಅವಿಮುಕ್ತಕ್ಷೇತ್ರ’ವೆಂದೂ ‘ಸಾಂಖ್ಯಯೋಗ’ದ ಅಸಂಖ್ಯತ್ವವೆಂದೂ ನೋಡಬೇಕಾಗುತ್ತದೆ. ಆಗ ಕಲ್ಯಾಣಪುರಕ್ಕೆ ಶಿವಾದ್ವೈತದ ನೆಲೆಯೊಂದು ಪ್ರಾಪ್ತವಾಗುತ್ತದೆ. ಶಿವಾದ್ವೈತ ತತ್ತ್ವವನ್ನು ಸಂಖ್ಯೆಗಳ ಮೂಲಕ ನೋಡುವ ಪರಿಕ್ರಮವನ್ನು ನಾವು ತಿಳಿದಂತಾಗುತ್ತದೆ.
ಆ ಕಲ್ಯಾಣದಲ್ಲಿರುವ ಮಠಗಳಿಗಂತೂ ಕೊನೆಯಿಲ್ಲ. ಹನ್ನೆರಡು ಸಾವಿರ ಕಟ್ಟಳೆಯ ನೇಮದ ಮಠಗಳುಂಟು. ಇನ್ನು ಎಪ್ಪತ್ತೆರಡು ಸಾವಿರದ ಮಹಾಮನೆಗಳು, ಹತ್ತು ಸಾವಿರ ನಿತ್ಯನೇಮಿಗಳ ಮಠಗಳು, ಹದಿನೈದು ಸಾವಿರ ಚೆಲುಮೆಯಗ್ಛವಣಿಯ ವ್ರತಸ್ಥರ ಮಠಗಳು, ವೀರವ್ರತನೇಮಿಗಳ ಕಟ್ಟಳೆಯ ಹನ್ನೆರಡು ಸಾವಿರ ಮಠಗಳು, ಅಚ್ಚಪ್ರಸಾದಿಗಳ ಒಂದು ಸಾವಿರ ಮಠ. ಪ್ರತಿನಿತ್ಯ ಒಂದು ಸಾವಿರ ಜಂಗಮರಿಗೆ ಆರೋಗಣೆ ಮಾಡಿಸುವ ಮೂವತ್ತೆರಡು ಸಾವಿರ ದಾಸೋಹದ ಮಠಗಳು, ಸತ್ಯಸದಾಚಾರಿಗಳ ಐವತ್ತೆಂಟು ಸಾವಿರ ಮಠಗಳು, ನಿತ್ಯ ಸಾವಿರದ ನೂರು ಜಂಗಮರುಗಳಿಗೆ ದಾಸೋಹ
ಗಳ ಮಠ ಹನ್ನೊಂದು ಸಾವಿರ, ಸಮಯಾಚಾರದಿಂದ ಲಿಂಗಾರ್ಚನೆ ಮಾಡುವ ಜಂಗಮಭಕ್ತರ ಎರಡುಸಾವಿರದ ಏಳುನೂರೆಪ್ಪತ್ತು ಮಠಗಳುಂಟು. ಇಲ್ಲಿ ವಿವಿಧ ಬಗೆಯ ಮಠಗಳನ್ನು ಹೇಳಲಾಗಿದೆ. ಆ ಮಠಗಳ ಸಂಖ್ಯೆಗಳನ್ನು ಹೇಳಲಾಗಿದೆ. ಎಪ್ಪತ್ತೆರಡು ಸಾವಿರ ಮಠ
ಗಳೆಂದಾಗ ಕೂಡಿಸಿದರೆ ಒಂಬತ್ತು ಬರುತ್ತದೆ. ಇನ್ನು ಹತ್ತು- ಹನ್ನೆರಡು- ಹದಿನೈದು ಸಂಖ್ಯೆಗಳು ಬಂದಿವೆ. ಅವು ಕ್ರಮವಾಗಿ ಶೂನ್ಯ, ಒಂದು, ಮೂರು, ಆರು- ಸಮ- ಬೆಸ ಸಂಖ್ಯೆಗಳಾಗುತ್ತವೆ. ಸಮಸಂಖ್ಯೆಗಳು ಭೇದ ಪ್ರಮಾಣಗಳನ್ನು ಸಂಕೇತಿಸುತ್ತಿದ್ದರೆ; ಬೆಸಸಂಖ್ಯೆಗಳು ಅಭೇದಪ್ರಮಾಣಗಳನ್ನು ಸೂಚಕವಾಗಿ ಸಂಕೇತಿಸುತ್ತವೆ. ಒಟ್ಟು ಶಿವಯೋಗದ ಸ್ಥಲಗಳನ್ನೂ ಯೋಗಿ-ಶರಣರಲ್ಲಿರುವ ಎಪ್ಪತ್ತೆರಡು ಸಾವಿರದ ನಾಡಿಗಳನ್ನು ಪರೋಕ್ಷವಾಗಿ ಸಂಕೇತಿಸುತ್ತವೆ.