ಜಲ ವಿವಾದ.. ಸರ್ವಪಕ್ಷಗಳ ಸಭೆಗೆ ತೀರ್ಮಾನ: ಕೈ ಕಟ್ಟಿ ಹಾಕುವ ತಂತ್ರ ಹೆಣೆದ ಬೊಮ್ಮಾಯಿ; ಮಾಸಾಂತ್ಯಕ್ಕೆ ಮತ್ತೊಂದು ಸಭೆ

CM
Published on

ಬೆಂಗಳೂರು: ರಾಜ್ಯದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಅಂತಾರಾಜ್ಯ ಜಲ ವಿವಾದಗಳ ಕುರಿತು ರ್ಚಚಿಸಲು ಫೆಬ್ರವರಿ ಮೊದಲ ವಾರ ಸರ್ವಪಕ್ಷಗಳ ಸಭೆ ಕರೆಯಲು ರಾಜ್ಯ ಸರ್ಕಾರ ತೀರ್ವನಿಸಿದೆ. ಆ ಮೂಲಕ ಪ್ರತಿಪಕ್ಷ ಕಾಂಗ್ರೆಸ್​ನ ‘ಕೈ’ ಕಟ್ಟಿಹಾಕುವ ತಂತ್ರಗಾರಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಣೆದಿದ್ದು, ಮೇಕೆದಾಟು ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುವ ಪ್ರಯತ್ನ ವಿಫಲಗೊಳಿಸಲು ಮುಂದಾಗಿದ್ದಾರೆ.

ಕರೊನಾ ಸೋಂಕು ಉಲ್ಬಣಿಸಿದ್ದರಿಂದ ‘ಮೇಕೆದಾಟು ಪಾದಯಾತ್ರೆ’ಯನ್ನು ಕಾಂಗ್ರೆಸ್ ಮುಂದೂಡಿದ್ದು, ಸೋಂಕು ಇಳಿಮುಖವಾಗುತ್ತಲೇ ಮತ್ತೆ ಚಳವಳಿಗೆ ಧುಮುಕಲು ಚಿಂತನೆ ನಡೆಸಿದೆ. ಅಂತಾರಾಜ್ಯ ಜಲ ವಿವಾದಗಳ ಸ್ಥಿತಿಗತಿ ಕುರಿತು ಚರ್ಚೆಗೆ ಸಿಎಂ ಬೊಮ್ಮಾಯಿ ಕರೆದಿದ್ದ ತ್ರಿಪಕ್ಷೀಯ ಸಮಾಲೋಚನಾ ಆನ್​ಲೈನ್ ಸಭೆಯಲ್ಲಿ ‘ಮೇಕೆದಾಟು ಯೋಜನೆ’ ಬಗ್ಗೆ ಚರ್ಚೆಯಾಗಿದೆ. ಸುಪ್ರೀಂ ಕೋರ್ಟ್​ನಲ್ಲಿ ಕಾನೂನು ಹೋರಾಟಕ್ಕೆ ತಂಡದ ಸಿದ್ಧತೆ ಒಳಗೊಂಡು ಈ ಯೋಜನೆ ಜಾರಿಗೆ ಸರ್ಕಾರ ಏನೆಲ್ಲ ಪ್ರಯತ್ನ ಮಾಡಿದೆ, ಮಾಡುತ್ತಿದೆ ಎಂದು ತಿಳಿಸಲು ಸರ್ವಪಕ್ಷಗಳ ಸಭೆ ಕರೆಯುವುದು ಸೂಕ್ತವೆಂಬ ಸಲಹೆ ಕೇಳಿಬಂದಿವೆ. ಆ ಮೂಲಕ ‘ಕೈ’ಯಲ್ಲಿರುವ ಹೋರಾಟ ಅಸ್ತ್ರ, ಕೇಂದ್ರ-ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಏನೂ ಮಾಡಿಲ್ಲವೆಂಬ ತಪು್ಪ ಸಂದೇಶ ರವಾನಿಸುವ ಹವಣಿಕೆಗೆ ‘ಸರ್ವಪಕ್ಷಗಳ ಸಭೆ’ಯನ್ನೇ ತಡೆಗೋಡೆ ರೀತಿ ಬಳಸಲು ಬೊಮ್ಮಾಯಿ ಮುಂದಾಗಿದ್ದಾರೆ.

ಜನವರಿ ಅಂತ್ಯಕ್ಕೆ ಮತ್ತೊಂದು ಸಭೆ: ಅಂತಾರಾಜ್ಯ ಜಲ ವಿವಾದಗಳಲ್ಲಿ ರಾಜ್ಯ ಸರ್ಕಾರದ ಪ್ರಯತ್ನ, ಮಾಡಿಕೊಂಡಿರುವ ಕಾನೂನು ಮತ್ತು ತಾಂತ್ರಿಕ ಸಿದ್ಧತೆಗಳು, ಪ್ರಗತಿ ಕುರಿತು ರ್ಚಚಿಸಲೆಂದು ಫೆಬ್ರವರಿ ಮೊದಲ ಸರ್ವಪಕ್ಷಗಳ ಸಭೆ ಕರೆಯಲು ತೀರ್ವನಿಸಲಾಗಿದೆ ಎಂದು ಸಿಎಂ ಹೇಳಿದರು.

ಸಭೆ ಬಳಿಕ ಬೊಮ್ಮಾಯಿ ಮಾತನಾಡಿ, ಸಚಿವರು, ತಾಂತ್ರಿಕ ತಜ್ಞರು, ಅಧಿಕಾರಿಗಳು ಮಾತ್ರವಲ್ಲದೆ, ಸುಪ್ರೀಂ ಕೋರ್ಟ್​ನಲ್ಲಿ ರಾಜ್ಯದ ಪರ ವಾದ ಮಂಡಿಸುತ್ತಿರುವ ಹಿರಿಯ ನ್ಯಾಯವಾದಿಗಳ ಜತೆಗೆ ಆನ್​ಲೈನ್ ವೇದಿಕೆ ಮೂಲಕ ಸಂವಾದ ನಡೆಸಲಾಗಿದೆ. ಆಡಳಿತ, ತಾಂತ್ರಿಕ, ಕಾನೂನಾತ್ಮಕ ತಯಾರಿ ಹಾಗೂ ಸುಪ್ರೀಂ ಕೋರ್ಟ್​ನಲ್ಲಿ ಪರಿಣಾಮಕಾರಿ ವಾದ ಮಂಡಿಸಲು ಮಾಡಿಕೊಂಡಿರುವ ಸಿದ್ಧತೆಗಳು ಪರಾಮರ್ಶೆಯಾಗಿವೆ. ಜನವರಿ ಅಂತ್ಯದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಮೇಕೆದಾಟು ಪ್ರಕರಣವು ಫೆ.16ಕ್ಕೆ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆಗೆ ಬರಲಿದ್ದು, ಅದಕ್ಕೂ ಮಾಡಿಕೊಂಡ ತಯಾರಿ ಬಗ್ಗೆ ಎರಡನೇ ಸಭೆಯಲ್ಲಿ ವಿವರಿಸಲಿದ್ದಾರೆ ಎಂದರು. ನಂತರ ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷಗಳ ನಾಯಕರನ್ನು ಒಳಗೊಂಡ ಸರ್ವ ಪಕ್ಷಗಳ ಸಭೆ ಕರೆದು ರಾಜ್ಯ ಸರ್ಕಾರ ಮುಂದಿನ ನಡೆಯ ಬಗ್ಗೆ ವಿಚಾರ ವಿನಿಯಮ ನಡೆಸುವೆ. ನೆಲ-ಜಲ-ಭಾಷೆ ವಿಷಯದಲ್ಲಿ ಪಕ್ಷ ಬೇಧವಿರದು.

ಈ ಹಿಂದೆ ನಾವು ಪ್ರತಿಪಕ್ಷ ಸ್ಥಾನದಲ್ಲಿದ್ದಾಗ ಅಂದಿನ ಸರ್ಕಾರಕ್ಕೆ ಎಲ್ಲ ಸಹಕಾರ ನೀಡಿದ್ದೇವೆ ಎಂದು ನೆನಪಿಸಿದರು. ಕೃಷ್ಣಾ, ಕಾವೇರಿ, ಮಹದಾಯಿ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳ ವಿಷಯದಲ್ಲಿ ಕರ್ನಾಟಕ ಮಧ್ಯಸ್ತರದ ರಾಜ್ಯವಾಗಿದ್ದು, ಮೇಲ್ಭಾಗ ಮತ್ತು ಕೆಳಭಾಗದ ರಾಜ್ಯಗಳ ಒತ್ತಡ ಹೇರಿವೆ. ಯೋಜನೆಗಳಿಗೆ ಸಂಬಂಧಿತ ಅಂತಾರಾಜ್ಯ ಜಲ ವ್ಯಾಜ್ಯಗಳಲ್ಲಿ ಯಾವ ರೀತಿ ಮುಂದುವರಿಯಬೇಕು ಎಂಬ ಬಗ್ಗೆ ಚರ್ಚೆಯಾಗಿದ್ದು, ನ್ಯಾಯವಾದಿಗಳು ಸಮಗ್ರ ಮಾಹಿತಿ ಒದಗಿಸಿದ್ದಾರೆ ಎಂದು ಸಿಎಂ ತಿಳಿಸಿದರು.

ರಾಜ್ಯದ ಪಾಲಿನ ನೀರಿನ ಹಕ್ಕು ಕಸಿದುಕೊಳ್ಳುವ, ಯೋಜನೆಗಳಿಗೆ ಅಡ್ಡಗಾಲು ಹಾಕುವ ತಮಿಳುನಾಡು ಪ್ರಯತ್ನ ಫಲಿಸದು. ಹೊಗೇನಕಲ್ ಎರಡನೇ ಹಂತದ ಡಿಪಿಆರ್ ತಯಾರಿಕೆ ವಿರೋಧಿಸುತ್ತೇವೆ, ಅಗತ್ಯಬಿದ್ದರೆ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸುತ್ತೇವೆ. | ಬಸವರಾಜ ಬೊಮ್ಮಾಯಿ ಸಿಎಂ

  • ಕೃಷ್ಣಾ ಐತೀರ್ಪಿನ ಅಧಿಸೂಚನೆಗೆ ಸಂಬಂಧಿಸಿದ ವ್ಯಾಜ್ಯ ವಿಚಾರಣೆಗೆ ನ್ಯಾಯಪೀಠ ರಚಿಸಲು ಕೋರಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್​ಗೆ ಸೋಮವಾರ ಮನವಿ ಸಲ್ಲಿಕೆ.
  • ಸವೋಚ್ಚ ನ್ಯಾಯಾಲಯದಲ್ಲಿ ಮಹದಾಯಿ ವಿಚಾರಣೆ ಅಂತಿಮ ಹಂತದಲ್ಲಿದ್ದು, ಅಂತಿಮ ವಾದ ಮಂಡನೆ, ತ್ವರಿತ ವಿಚಾರಣೆಯ ಉಲ್ಲೇಖ.
  • ಸುಪ್ರೀಂ ಕೋರ್ಟ್ ನಲ್ಲಿ ಬಾಕಿಯಿರುವ ಅಂತಾರಾಜ್ಯ ಜಲ ವಿವಾದಗಳು ಶೀಘ್ರ ಪರಿಹಾರಕ್ಕೆ ಎಲ್ಲ ಪ್ರಯತ್ನ.

ತಮಿಳುನಾಡಿನ ವಿರುದ್ಧ ಉಭಯಾಸ್ತ್ರ

ಮೇಕೆದಾಟು ಯೋಜನೆಗೆ ಕ್ಯಾತೆ ತೆಗೆದ ತಮಿಳುನಾಡು ಮತ್ತೊಂದು ವಿವಾದಾತ್ಮಕ 4,600 ಕೋಟಿ ರೂ. ಅಂದಾಜಿನ ಯೋಜನೆಗೆ ಕೈಹಾಕಿ ಕರ್ನಾಟಕವನ್ನು ಮತ್ತೊಮ್ಮೆ ಕೆಣಕಿದೆ. ಹೊಗೇನಕಲ್ ಯೋಜನೆ ಎರಡನೇ ಹಂತದ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಗೆ ತಮಿಳುನಾಡು ಸರ್ಕಾರ ಮುಂದಾಗಿದೆ. ಈ ಪ್ರಯತ್ನದ ವಿರುದ್ಧ ಉಭಯಾಸ್ತ್ರ ಪ್ರಯೋಗಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. ಕಾವೇರಿ ನ್ಯಾಯಾಧಿಕರಣದ ಐತೀರ್ಪಿನ ಕಲಂ 13, ಹೊಗೇನಕಲ್ ಜಂಟಿ ಗಡಿಪ್ರದೇಶವಾಗಿದ್ದು, ಜಂಟಿ ಗಡಿ ರೇಖೆ ಅಂತಿಮವಾಗಿಲ್ಲ ಎಂಬ ಅಂಶಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮತ್ತು ಕಾನೂನು ಸಮರದ ಅಸ್ತ್ರ ಪ್ರಯೋಗಿಸಲಾಗಿದೆ.

ಸಭೆಯಲ್ಲಿ ಈ ಕುರಿತು ಗಂಭೀರವಾದ ಚರ್ಚೆಯಾಗಿದೆ. ಮೊದಲ ಹಂತದಲ್ಲಿ ಕೇಂದ್ರ ಸರ್ಕಾರ, ಕೇಂದ್ರ ಜಲ ಆಯೋಗ, ಅರಣ್ಯ, ಪರಿಸರ ಸಚಿವಾಲಯ, ಇಂಧನ ಇಲಾಖೆ, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಒತ್ತಡ ಹೇರುವ ರಾಜಕೀಯ ಹೋರಾಟ ನಡೆಸಬೇಕು.

ಈ ಪ್ರಯತ್ನಗಳಿಗೂ ತಮಿಳುನಾಡು ಮಣಿಯದಿದ್ದರೆ ಹೊಗೇನಕಲ್ ಯೋಜನೆ ಎರಡನೇ ಹಂತದ ಡಿಪಿಆರ್ ಅನ್ನು ಆರಂಭಿಕ ಹಂತದಲ್ಲೇ ಚಿವುಟಿ ಹಾಕುವುದಕ್ಕೆ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸಿತು ಎಂದು ಮೂಲಗಳು ತಿಳಿಸಿವೆ. ಕಾವೇರಿ ನದಿಯ 45 ಟಿಎಂಸಿ ಅಡಿ ಹೆಚ್ಚುವರಿ ನೀರು ಬಳಕೆಗಾಗಿ ಕಾವೇರಿ-ವೈಗೈ-ಗುಂಡಾರು ಜೋಡಣಾ ಕಾಲುವೆ ನಿರ್ವಿುಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಕರ್ನಾಟಕದ ಪಾಲಿನ ಹೆಚ್ಚುವರಿ ನೀರು ಕಬಳಿಸುವ ಈ ಲಿಂಕ್ ಕೆನಾಲ್ ನಿರ್ವಣವನ್ನು ಸರ್ಕಾರ ಆಕ್ಷೇಪಿಸಿ, ಸುಪ್ರೀಂ ಕೋರ್ಟ್​ನಲ್ಲಿ ಈಗಾಗಲೆ ದಾವೆ ಹೂಡಿದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ.

ರಾಜ್ಯದ ಯೋಜನೆಗಳಿಗೆ ಸಂಬಂಧಿಸಿದ ಅಂತಾರಾಜ್ಯ ಜಲ ವಿವಾದಗಳು ತ್ವರಿತ ಇತ್ಯರ್ಥ ಕಾಣುವುದಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ಸುಪ್ರೀಂ ಕೋರ್ಟ್​ನಲ್ಲಿ ಸಮರ್ಥ ಕಾನೂನು ಸಮರ ನಡೆಸುವುದಕ್ಕೆ ತಯಾರಿಯಾಗಿದೆ. | ಗೋವಿಂದ ಕಾರಜೋಳ ಜಲ ಸಂಪನ್ಮೂಲ ಸಚಿವ

ತಮಿಳುನಾಡಿನಲ್ಲೇ ಪ್ರಾಜೆಕ್ಟ್

ಚೆನ್ನೈ: ಕಾನೂನುಬದ್ಧವಾಗಿ, ಮಾನವೀಯ ನೆಲೆಯಲ್ಲಿ ಹೊಗೇನಕಲ್ ಕುಡಿಯುವ ನೀರಿನ ಪ್ರಾಜೆಕ್ಟ್ 2ನೇ ಹಂತವನ್ನು ಜಾರಿಗೊಳಿಸಲಾಗುತ್ತಿದೆ. ಇದು ತಮಿಳುನಾಡಿನ ಭೌಗೋಳಿಕ ವ್ಯಾಪ್ತಿಯಲ್ಲೇ ಇದೆ ಎಂದು ಜಲಸಂಪನ್ಮೂಲ ಸಚಿವ ದುರೈಮುರುಗನ್ ಶನಿವಾರ ಹೇಳಿದರು. ಗೋವಿಂದ ಕಾರಜೋಳ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾವೇರಿ ಜಲ ವಿವಾದ ನ್ಯಾಯಾಧಿಕರಣದ ಅಂತಿಮ ತೀರ್ಪ, ಸುಪ್ರೀಂಕೋರ್ಟ್ 2018ರ ಫೆ.16ರಂದು ನೀಡಿದ ತೀರ್ಪಿನ ಅಂಶಗಳನ್ನು ಉಲ್ಲೇಖಿಸಿ ಸರ್ಕಾರದ ನಡೆ ಸಮರ್ಥಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net