

Alien : ಏಲಿಯನ್ಸ್ ಇರುವಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಆದರೆ, ಅವುಗಳ ಅಸ್ತಿತ್ವದ ಬಗ್ಗೆ ಇದುವರೆಗೂ ಯಾವುದೇ ಸ್ಪಷ್ಟತೆ ದೊರೆತಿಲ್ಲ. ಏಲಿಯನ್ಗಳು ಕಾಣಿಸಿಕೊಳ್ಳುವ ಬಗ್ಗೆ ಆಗಾಗ ಸುದ್ದಿಯಾದರೂ ಕೂಡ ಜನರಲ್ಲಿ ಅವುಗಳ ಅಸ್ತಿತ್ವದ ಪ್ರಶ್ನೆ ಆಗೇ ಉಳಿದಿದೆ. ಸಾಕಷ್ಟು ಸಂಶೋಧನೆಗಳು, ಸಿದ್ಧಾಂತಗಳು ಹೊರಬಂದರೂ ಕೂಡ ಏಲಿಯನ್ಗಳ ಸಂಗತಿ ನಿಗೂಢವಾಗಿಯೇ ನಮ್ಮ ನಡುವೆ ಉಳಿದಿದೆ.
ಆದರೂ ಏಲಿಯನ್ ಮತ್ತು ಹಾರುವ ತಟ್ಟೆಗಳನ್ನು ಕಂಡಿರುವುದಾಗಿ ಕೆಲವರು ವಾದಿಸುತ್ತಾರೆ. ಇನ್ನು ಕೆಲವರು ಇವುಗಳ ಇರುವಿಕೆ ಸುಳ್ಳು ಎನ್ನುತ್ತಾರೆ. ಆಗಾಗ ಭೂಮಿ ಹಾಗೂ ಆಕಾಶದ ಮೇಲೆ ಕೆಲವು ವಿಚಿತ್ರ ವಸ್ತುಗಳು ಕಾಣಿಸಿಕೊಂಡಿವೆ. ಇವುಗಳನ್ನು ಯುಎಫ್ಒ (ಯೂನಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್) ಎಂದು ಕರೆಯಲಾಗುತ್ತದೆ. ಈ ಯುಎಫ್ಒಗಳು ಅನ್ಯಗ್ರಹ ಜೀವಿಗಳ ವಾಹನ ಎಂದೂ ಹೇಳಲಾಗುತ್ತದೆ. ಇವುಗಳನ್ನು ಕಂಡಿದ್ದಾಗಿ ಆಗಾಗ ಕೆಲವರು ಹೇಳುತ್ತಿರುತ್ತಾರೆ. ಆದರೆ, ಅದಕ್ಕೆ ನಿರ್ಣಾಯಕ ಪುರಾವೆಗಳನ್ನು ಒದಗಿಸಲು ಯಾರಿಗೂ ಸಾಧ್ಯವಾಗುತ್ತಿಲ್ಲ.
ಇದೀಗ ಮಂಗಳ ಗ್ರಹದಲ್ಲಿ ಅನ್ಯಗ್ರಹ ಜೀವಿಗಳ ಅವಶೇಷಗಳಿವೆಯೇ ಎಂಬ ಬಗ್ಗೆ ಅನುಮಾನಗಳು ಮೂಡಿವೆ. ಏಕೆಂದರೆ, ನಾಸಾದ ಪರ್ಸೆವೆರೆನ್ಸ್ ರೋವರ್ ಇತ್ತೀಚೆಗೆ ಮಂಗಳ ಗ್ರಹದಲ್ಲಿ ತಲೆಬುರುಡೆಯ ಆಕಾರದ ಬಂಡೆಯೊಂದನ್ನು ಕಂಡುಹಿಡಿದಿದೆ. ಹೀಗಾಗಿ ಏಲಿಯನ್ಸ್ ಉಪಸ್ಥಿತಿಯ ಬಗ್ಗೆ ಮತ್ತೆ ಚರ್ಚೆ ಹುಟ್ಟುಕೊಂಡಿದೆ.
ಅಂದಹಾಗೆ, ಜೆಜೆರೊ ಕ್ರೇಟರ್ ಅನ್ನು ಅನ್ವೇಷಿಸುವ ಉದ್ದೇಶದಿಂದ ತನ್ನ ಕಾರ್ಯಾಚರಣೆಯ ಭಾಗವಾಗಿ ನಾಸಾ, 2020ರಲ್ಲಿ ಪರ್ಸೆವೆರೆನ್ಸ್ ರೋವರ್ ಅನ್ನು ಮಂಗಳಕ್ಕೆ ಕಳುಹಿಸಿದೆ. ಈ ರೋವರ್ ಕಾರಿನ ಗಾತ್ರದಲ್ಲಿದ್ದು, ಇದು ಮಂಗಳ ಗ್ರಹದ ಸುತ್ತಲೂ ಪ್ರಯಾಣಿಸುತ್ತಿದೆ ಮತ್ತು ಸಂಶೋಧನೆ ನಡೆಸುತ್ತಿದೆ. ಏಪ್ರಿಲ್ 11 ರಂದು ತಲೆಬುರುಡೆಯ ಆಕಾರದ ಬಂಡೆಯನ್ನು ಪತ್ತೆಹಚ್ಚಿದ ನಂತರ ಅದು ಅನ್ಯಗ್ರಹ ಜೀವಿಯ ಅವಶೇಷ ಎಂದು ಹೇಳಲಾಗುತ್ತಿದೆ.
ಮಂಗಳ ಗ್ರಹದ ಜೆಜೆರೊ ಕ್ರೇಟರ್‌ನಲ್ಲಿರುವ ವಿಚ್ ಹ್ಯಾಝೆಲ್ ಬೆಟ್ಟದ ಸುತ್ತಲೂ ಅಲೆದಾಡುತ್ತಿರುವಾಗ ರೋವರ್ ಈ ಬಂಡೆಯನ್ನು ಕಂಡುಹಿಡಿದಿದೆ. ಈ ಬಂಡೆಯನ್ನು ಈಗ "ಸ್ಕಲ್ ಹಿಲ್" ಎಂದು ಕರೆಯಲಾಗುತ್ತದೆ. ಮಂಗಳ ಗ್ರಹದ ಜೆಜೆರೊ ಕ್ರೇಟರ್ 28 ಮೈಲುಗಳಷ್ಟು ಅಗಲವಿದೆ. ಲಕ್ಷಾಂತರ ವರ್ಷಗಳ ಹಿಂದೆ ಇದು ಸರೋವರವಾಗಿತ್ತು ಎಂದು ವಿಜ್ಞಾನಿಗಳು ನಂಬುತ್ತಾರೆ ಮತ್ತು ಹವಾಮಾನ ವೈಪರೀತ್ಯವು ಈಗ ಈ ಪ್ರದೇಶವನ್ನು ಒಣ ಮತ್ತು ಧೂಳಮಯವಾಗಿಸಿದೆ ಎನ್ನಲಾಗಿದೆ.
"ಸ್ಕಲ್ ಹಿಲ್" ಸಂಪೂರ್ಣವಾಗಿ ಕಲ್ಲಿನಿಂದ ಕೂಡಿಲ್ಲ. ಇದು ಸುತ್ತಮುತ್ತಲಿನ ಪ್ರದೇಶಕ್ಕಿಂತ ಭಿನ್ನವಾಗಿದೆ. "ಸ್ಕಲ್ ಹಿಲ್" ಗಾಢ ಬಣ್ಣವನ್ನು ಹೊಂದಿದೆ. ಅದರ ಮೇಲೆ ಸಣ್ಣ ರಂಧ್ರಗಳಿವೆ. ವಿಜ್ಞಾನಿಗಳು ಆರಂಭದಲ್ಲಿ ಈ "ಸ್ಕಲ್ ಹಿಲ್" ಒಂದು ಕ್ಷುದ್ರಗ್ರಹ ಎಂದು ಭಾವಿಸಿದ್ದರು. ಆದಾಗ್ಯೂ, ರೋವರ್‌ನ ಸೂಪರ್ ಕ್ಯಾಮೆರಾವನ್ನು ಬಳಸಿಕೊಂಡು ರಾಸಾಯನಿಕ ವಿಶ್ಲೇಷಣೆ ನಡೆಸಿದಾಗ ಅದು ಕ್ಷುದ್ರಗ್ರಹವಲ್ಲ ಎಂದು ಗೊತ್ತಾಯಿತು. ಈ "ಸ್ಕಲ್ ಹಿಲ್" ಅಲ್ಲಿಗೆ ಹೇಗೆ ಬಂತು ಎಂಬುದನ್ನು ಕಂಡುಹಿಡಿಯಲು ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ನಾಸಾ ತಿಳಿಸಿದೆ. (ಏಜೆನ್ಸೀಸ್)