ವರನಿಗೆ ನೀಲಿ ಡ್ರಮ್​ ಗಿಫ್ಟ್​ ಕೊಟ್ಟ ಸ್ನೇಹಿತರು: ವಧುವಿನ ರಿಯಾಕ್ಷನ್​ ನೋಡಿದ್ರೆ ನಿಮ್ಮ ಹುಬ್ಬೇರೋದು ಖಚಿತ! Blue Drum

Blue Drum
Published on

Blue Drum : ಇತ್ತೀಚೆಗೆ ಉತ್ತರ ಪ್ರದೇಶದ ಮೀರತ್‌ನಲ್ಲಿ ಸೌರಭ್ ರಜಪೂತ್ ಎಂಬ ವ್ಯಕ್ತಿಯನ್ನು ಆತನ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಭೀಕರವಾಗಿ ಕೊಲೆ ಮಾಡಿದ್ದು ದೇಶಾದ್ಯಂತ ಸಂಚಲನ ಮೂಡಿಸಿತು. ಪತಿಯನ್ನು ಕೊಂದು, ಮೃತ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ, ನೀಲಿ ಬಣ್ಣದ ಡ್ರಮ್‌ನಲ್ಲಿ ಹಾಕಿ ಸಿಮೆಂಟ್‌ನಿಂದ ಮುಚ್ಚಲಾಗಿತ್ತು. ಕೊನೆಗೆ, ಸೌರಭ್ ಅವರ ಕುಟುಂಬ ದೂರು ನೀಡಿದ ನಂತರ ಕೊಲೆ ಪ್ರಕರಣ ಬೆಳಕಿಗೆ ಬಂದಿತು.

ಈ ಕೊಲೆ ಪ್ರಕರಣ ಭಾರಿ ಸುದ್ದಿಯಾದಾಗಿನಿಂದ ನೀಲಿ ಡ್ರಮ್ ದೇಶಾದ್ಯಂತ ಭಯದ ಸಂಕೇತವಾಗಿದೆ. ನೀಲಿ ಬಣ್ಣದ ಡ್ರಮ್ ಖರೀದಿಸುವ ಯಾರಾದರೂ ಅನುಮಾನ ಎದುರಿಸುವಂತಾಗಿದೆ. ಕೆಲವು ಪ್ರದೇಶಗಳಲ್ಲಿ, ಈ ಕೊಲೆಯಿಂದಾಗಿ ನೀಲಿ ಡ್ರಮ್‌ಗಳಿಗೆ ಬೇಡಿಕೆ ಕಡಿಮೆಯಾಗಿದೆ. ಕೆಲವು ಸ್ಥಳಗಳಲ್ಲಂತೂ ಹೆಂಡತಿಯರು ನೀಲಿ ಬಣ್ಣದ ಡ್ರಮ್‌ ಹೆಸರೇಳಿ ತಮ್ಮ ಗಂಡಂದಿರನ್ನು ಬೆದರಿಸುತ್ತಿರುವುದಾಗಿ ದೂರುಗಳು ದಾಖಲಾಗಿವೆ.

ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದ ಮದುವೆಯಲ್ಲಿ ವರನ ಸ್ನೇಹಿತರು ಆತನಿಗೆ "ನೀಲಿ ಬಣ್ಣದ ಡ್ರಮ್" ಅನ್ನು ಉಡುಗೊರೆಯಾಗಿ ನೀಡುವ ವಿಡಿಯೋ ಒಂದು ವೈರಲ್ ಆಗಿದೆ. ಈ ಘಟನೆಯಿಂದ ಮದುವೆಗೆ ಬಂದ ಅತಿಥಿಗಳು ಆಘಾತಕ್ಕೊಳಗಾಗಿದ್ದಾರೆ. ಅಲ್ಲದೆ, ವರನ ಕುಟುಂಬದವರನ್ನು ಭಯಭೀತಗೊಳಿಸಿದೆ. ಉಡುಗೊರೆಯನ್ನು ನೋಡಿದ ನಂತರ ವರ ಆಘಾತಕ್ಕೆ ಒಳಗಾದರೆ, ವಧುವಿನ ನಗು ಮಾತ್ರ ತಡೆಯಲಾಗಲಿಲ್ಲ. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಹಮೀರ್‌ಪುರದ ರಥ್ ಕೊಟ್ವಾಲಿ ಪ್ರದೇಶದ ಮಂಗ್ರೌಲ್ ಗ್ರಾಮದ ನಿವಾಸಿ ಶೈಲೇಂದ್ರ ರಜಪೂತ್ ಅವರ ವಿವಾಹದ ಸಮಯದಲ್ಲಿ ಈ ಘಟನೆ ನಡೆದಿದೆ. ಶೈಲೇಂದ್ರ ಅವರು ರಿಹುಂಟಾ ಗ್ರಾಮದ ನಿವಾಸಿ ಸೀಮಾ ಅವರನ್ನು ಮದುವೆಯಾದರು.

ವಿಡಿಯೋ ನೋಡಿದ ನೆಟ್ಟಿಗರು ತಮಾಷೆಯ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ. ವರ ತನಗೆ ಸಿಕ್ಕ ಉಡುಗೊರೆಯನ್ನು ನೋಡಿ ತುಂಬಾ ಭಯಭೀತಗೊಂಡನು, ಆದರೆ ವಧುವಿಗೆ ನಗು ತಡೆಯಲಾಗಲಿಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು "ಈಗ ನಿಜವಾದ ಮದುವೆಯ ಮೋಜು ಪ್ರಾರಂಭವಾಗುತ್ತದೆ" ಎಂದು ಬರೆದಿದ್ದಾರೆ. ಮತ್ತೊಬ್ಬರು ಇಂತಹ ಉಡುಗೊರೆಯೊಂದಿಗೆ ನೀವು ಏನು ಹೇಳಲು ಪ್ರಯತ್ನಿಸುತ್ತಿದ್ದೀರಿ? ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net