ವಿಶ್ವ ದಾಖಲೆ ಬರೆದ ಆಲಿಯಾ ‘ಸಡಕ್​ 2’ ಟ್ರೈಲರ್; ಅತೀ ಹೆಚ್ಚು ಡಿಸ್​ಲೈಕ್​ ಪಡೆದ ಪಟ್ಟಿಯಲ್ಲಿ ಅಗ್ರಸ್ಥಾನ

Aliya
Published on

ಆಲಿಯಾ ಭಟ್ ಅಭಿನಯದ ‘ಸಡಕ್ 2’ ಹೊಸ ದಾಖಲೆ ಸೃಷ್ಟಿಸಿದೆ. ಬುಧವಾರವಷ್ಟೇ ಬಿಡುಗಡೆಯಾಗಿದ್ದ ಚಿತ್ರದ ಟ್ರೈಲರ್​ಗೆ ನಾಲ್ಕೇ ದಿನದಲ್ಲಿ ಲಕ್ಷ ಲಕ್ಷ ಜನರಿಂದ ಡಿಸ್​ಲೈಕ್​ಗಳ ಸುರಿಮಳೆ ಹರಿದುಬಂದಿದೆ. ಇದೀಗ ಭಾರತೀಯ ಸಿನಿಮಾ ಇತಿಹಾಸದಲ್ಲೇ ಸಡಕ್​ 2 ಚಿತ್ರ ಹೊಸ ದಾಖಲೆ ಬರೆದಿದೆ. ವಿಶ್ವದಲ್ಲಿ ಮೂರನೇ ಸಿನಿಮಾ ಎಂಬ ಖ್ಯಾತಿ ಪಡೆದರೆ, ಭಾರತದಲ್ಲಿ ಅತಿ ಹೆಚ್ಚು ಡಿಸ್​ಲೈಕ್​ ಪಡೆದ ಮೊದಲ ಚಿತ್ರವಾಗಿದೆ.

ಹೌದು, ವಿಶ್ವದಲ್ಲಿಯೇ ಅತೀ ಹೆಚ್ಚು ಡಿಸ್​ಲೈಕ್​ ಪಡೆದ ಸಿನಿಮಾಗಳ ಸಾಲಿನಲ್ಲಿ ಆಲಿಯಾ ಮೂರನೇ ಸ್ಥಾನದಲ್ಲಿದ್ದಾರೆ. ಟ್ರೇಲರ್​ ಬಿಡುಗಡೆಯಾಗಿ ನಾಲ್ಕು ದಿನದಲ್ಲಿ 51 ಮಿಲಿಯನ್​ (5.1 ಕೋಟಿ) ವೀಕ್ಷಣೆ ಕಂಡರೆ, ಬರೋಬ್ಬರಿ 10 ಮಿಲಿಯನ್​ (ಒಂದು ಕೋಟಿ) ಜನ ಟ್ರೇಲರ್​ಗೆ ಡಿಸ್​ಲೈಕ್​ ಒತ್ತಿದ್ದಾರೆ.

ಇನ್ನು ಪಾಪ್​ ಗಾಯಕ ಜಸ್ಟಿನ್​ ಬೇಬರ್ ಅವರ ಬೇಬಿ ಹಾಡಿಗೆ 11 ಮಿಲಿಯನ್​ ಡಿಸ್​ಲೈಕ್​ ಸಂದಾಯವಾಗಿದ್ದವು. ಮೊದಲ ಸ್ಥಾನದಲ್ಲಿ ಸ್ವತಃ ಯೂಟ್ಯೂಬ್​ ಸಂಸ್ಥೆಯೇ ಹಾಕಿದ್ದ ಎ ರಿವೈಂಡ್ ಆಫ್​ ದಿ ಇಯರ್​ 2018 ಹಾಡಿಗೆ ಒಟ್ಟು 18.2 ಮಿಲಿಯನ್​ ಡಿಸ್​ಲೈಕ್​ ಸಂದಾಯವಾಗಿದೆ. ಸದ್ಯ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಅತಿ ಹೆಚ್ಚು ಪ್ರೇಕ್ಷಕರ ಅವಕೃಪೆಗೆ ಪಾತ್ರವಾದ ಚಿತ್ರದ ಟ್ರೈಲರ್​ ಎಂಬ ಖ್ಯಾತಿಯನ್ನು ಸಡಕ್​ 2 ಚಿತ್ರ ಪಡೆದುಕೊಂಡಿದೆ.

ಸುಶಾಂತ್​ ಆತ್ಮಹತ್ಯೆ ಬಳಿಕ ಸ್ವಜನಪಕ್ಷಪಾತ ವಿಚಾರವಾಗಿ ಆಲಿಯಾ ಭಟ್​ ಸೇರಿ ಸಡಕ್​ ಚಿತ್ರಕ್ಕೆ ಟ್ರೋಲ್​ ಮಾಡಲಾಗುತ್ತಿದ್ದು, ಸಿನಿಮಾ ನಿಷೇಧಕ್ಕೂ ನೆಟ್ಟಿಗರು ದನಿ ಗೂಡಿಸಿದ್ದಾರೆ. ಅಂದಹಾಗೆ ಆಗಸ್ಟ್ 28ಕ್ಕೆ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net