ಬರ್ತ್​ಡೇಗೆ ಶುಭಕೋರಲು ನೀನೇ ಇಲ್ವಲ್ಲೋ ಮಗನೇ; ಚಿರಂಜೀವಿಯನ್ನು ನೆನೆದ ಅರ್ಜುನ್​ ಸರ್ಜಾ

collage (22)
Published on

ಬೆಂಗಳೂರು: ಚಿರಂಜೀವಿ ಸರ್ಜಾ ನಿಧನರಾಗಿ ಎರಡು ತಿಂಗಳ ಮೇಲಾಯಿತು. ಅವರಿಲ್ಲ ಎಂಬ ನೋವು ಅಭಿಮಾನಿಗಳ ಮನದಿಂದ ಇನ್ನೂ ಹೋಗಿಲ್ಲ. ಹೀಗಿರುವಾಗಲೇ ಮಾವ ಅರ್ಜುನ್​ ಸರ್ಜಾ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಕೇಕ್​ ಕಟ್​ ಮಾಡದೆ, ಯಾರಿಂದಲೂ ಶುಭಾಶಯ ಸ್ವೀಕರಿಸದೆ, ಗಾಢವಾದ ನೋವಲ್ಲಿ ಅಗಲಿದ ಚಿರಂಜೀವಿಯನ್ನು ನೆನಪು ಮಾಡಿಕೊಂಡಿದ್ದಾರೆ.

‘ಈ ವರ್ಷ ನಿನ್ನ ಶುಭಾಶಯವನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ ಮಗನೇ’ ಎಂದಿರುವ ಅರ್ಜುನ್​ ಸರ್ಜಾ, ಚಿರು ಜತೆಗಿನ ಫೋಟೋ ಶೇರ್​ ಮಾಡಿಕೊಂಡು ಭಾವುಕವಾಗಿ ಎರಡೇ ಸಾಲುಗಳನ್ನು ಬರೆದುಕೊಂಡಿದ್ದಾರೆ. ಅಂದಹಾಗೆ, ಆಗಸ್ಟ್ 15ಕ್ಕೆ ಅರ್ಜುನ್​ ಸರ್ಜಾ ಜನ್ಮ ದಿನ. ಪ್ರತಿ ವರ್ಷ ಇಡೀ ಕುಟುಂಬದೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಅರ್ಜುನ್​ ಸರ್ಜಾ, ಈ ವರ್ಷ ಚಿರು ನೋವಲ್ಲಿದ್ದಾರೆ.

ಚಿರಂಜೀವಿ ಜತೆಗಿರುವ ಮತ್ತು ಚಿರುಗೆ ಮೇಕಪ್​ ಮಾಡುತ್ತಿರುವ ಎರಡು ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿ, ಈ ಬಾರಿಯ ಜನ್ಮದಿನಕ್ಕೆ ನಿನ್ನನ್ನು ತುಂಬ ಮಿಸ್​ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಅರ್ಜುನ್​ ಹಂಚಿಕೊಂಡ ಫೋಟೋಕ್ಕೆ ಸಾವಿರಾರು ಮಂದಿ ಕಮೆಂಟ್​ ಮೂಲಕ ಮಿಸ್​ ಯೂ ಚಿರು  ಎಂದಿದ್ದು, ಅರ್ಜುನ್​ ಸರ್ಜಾ ಜನ್ಮದಿನಕ್ಕೂ ವಿಶ್​ ಮಾಡಿದ್ದಾರೆ.

ಜೂನ್​ 7ರಂದು ಹೃದಯ ಸ್ತಂಭನದಿಂದ ಚಿರಂಜೀವಿ ಬಾರದ ಲೋಕಕ್ಕೆ ಪ್ರಯಾಣಿಸಿದ್ದರು. ಇಡೀ ಕುಟುಂಬ ಸೇರಿ ಕರುನಾಡಿನ ಅಭಿಮಾನಿ ಬಳಗ ಶೋಕಸಾಗರದಲ್ಲಿ ಮುಳುಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net