ಮದ್ಯವ್ಯಸನದಿಂದ ವೈಯಕ್ತಿಕ ಗೌರವಕ್ಕೆ ಧಕ್ಕೆ

skp shibira
ಶಿಕಾರಿಪುರದಲ್ಲಿ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ವಿವೇಕ್, ಆನಂದ ಸುವರ್ಣ, ಮಹಾದೇವ ಪಾಟೀಲ್, ಸುಧೀರ್, ಹುಲ್ಮಾರ್ ಮಹೇಶ್, ರೂಪಕಲಾ ಇತರರಿದ್ದರು.
Published on

ಶಿಕಾರಿಪುರ: ಮದ್ಯಪಾನ ನಮ್ಮ ಆರೋಗ್ಯ, ನೆಮ್ಮದಿ, ಹಣದ ಜತೆಗೆ ಗೌರವವನ್ನೂ ಕಿತ್ತುಕೊಳ್ಳುತ್ತದೆ. ಯುವಜನತೆ ದುಶ್ಚಟಗಳಿಂದ ದೂರ ಇರಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಸಲಹೆ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಮತ್ತು ಜನಜಾಗತಿ ವೇದಿಕೆ, ಬೆಂಗಳೂರಿನ ಮದ್ಯಪಾನ ಸಂಯಮ ಮಂಡಳಿ ಆಯೋಜಿಸಿದ್ದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮದ್ಯಪಾನ ಸಮಾಜಕ್ಕೆ ಅಂಟಿದ ವ್ಯಾಧಿ. ಧರ್ಮಸ್ಥಳ ಯೋಜನೆ ನಾಡಿನಾದ್ಯಂತ ಮದ್ಯವರ್ಜನ ಶಿಬಿರ ಆಯೋಜಿಸುವ ಮೂಲಕ ಸಮಾಜದಲ್ಲಿ ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುತ್ತಿದೆ ಎಂದರು.

ಯಾವುದೇ ಸಂಘ, ಸಂಸ್ಥೆಗಳಾಗಲಿ ಸಾಮಾಜಿಕ ಕಳಕಳಿಯಿಂದ ಇಂತಹ ಕಾರ್ಯಗಳನ್ನು ಮಾಡಿದರೆ ಅವುಗಳು ಯಾವತ್ತೂ ಜೀವಂತವಾಗಿರುತ್ತವೆ. ನಮ್ಮ ್ಜತೆಗೆ ಇನ್ನೊಬ್ಬರೂ ನೆಮ್ಮದಿಯಿಂದ ಬಾಳಬೇಕು ಎಂಬ ಆಶಯ ನಮ್ಮದಾಗಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕೃಷಿ, ಶಿಕ್ಷಣ, ಧಾರ್ಮಿಕ, ಆರ್ಥಿಕ, ಮಹಿಳಾ ಸಬಲೀಕರಣ ಮತ್ತಿತರ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಹೇಳಿದರು.

ಧರ್ಮಸ್ಥಳ ಸಂಸ್ಥೆ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಸಮಾಜ ಸೇವೆ ಅನನ್ಯ. ಇದನ್ನು ಸಹಿಸದ ಕೆಲವರು ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತರುವ ದೃಷ್ಟಿಯಿಂದ ಷಡ್ಯಂತ್ರ ನಡೆಸಿದ್ದು ಈಗ ಬಯಲಾಗಿದೆ. ನಾಗರಿಕರು ಮತ್ತು ಭಕ್ತರು ಎಲ್ಲಿಯವರೆಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯಲ್ಲಿ ಶ್ರದ್ಧೆ ಇಡುತ್ತಾರೋ ಅಲ್ಲಿಯವರೆಗೂ ಕ್ಷೇತ್ರದ ಪಾವಿತ್ರೃಕ್ಕೆ ಧಕ್ಕೆಯಾಗುವುದಿಲ್ಲ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಚೇರಿಗೆ ಉಂಟಾಗಿರುವ ರಸ್ತೆ ಸಮಸ್ಯೆ ಶೀಘ್ರ ನಿವಾರಣೆ ಆಗಲಿದೆ ಎಂದು ಭರವಸೆ ನೀಡಿದರು.

ಪ್ರಮುಖರಾದ ವಿವೇಕ್, ಆನಂದ ಸುವರ್ಣ, ಮಹಾದೇವ ಪಾಟೀಲ್, ಸುಧೀರ್, ಹುಲ್ಮಾರ್ ಮಹೇಶ್, ರೂಪಕಲಾ, ಬೆಣ್ಣೆ ಪ್ರವೀಣ್, ಶಿಬಿರಾರ್ಥಿಗಳು, ಯೋಜನೆಯ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net