

ಮುಂಬೈ: ಕಳೆದ ಎರಡು ವರ್ಷಗಳು ಬಾಲಿವುಡ್ನ ಹಿರಿಯ ನಟ ಅಕ್ಷಯ್ ಕುಮಾರ್ (Akshay Kumar) ಪಾಲಿಗೆ ಮರೆಯುವಂತಿಲ್ಲ. ತಾವು ನಟಿಸಿದ 'ಸೂರ್ಯವಂಶಿ' ಮತ್ತು 'ಓ ಮೈ ಗಾಡ್ 2' ಚಿತ್ರಗಳನ್ನು ಹೊರತುಪಡಿಸಿದರೆ ಉಳಿದ ಯಾವ ಸಿನಿಮಾಗಳು ಕೂಡ ಚಿತ್ರಮಂದಿರಗಳಲ್ಲಿ ಅಬ್ಬರಿಸಲಿಲ್ಲ. ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಲಿಲ್ಲ (Flop Cinema). ಕೋವಿಡ್ ಸಮಯದಿಂದ ಎರಡು ಬ್ಲಾಕ್ಬಸ್ಟರ್ ನೋಡಿದ್ದು ಬಿಟ್ಟರೆ ಇನ್ಯಾವ ಬಿಗ್ ಬಜೆಟ್ ಚಿತ್ರಗಳು ಸಹ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ಸು ಕಾಣಲಿಲ್ಲ ಎಂಬುದು ಗಮನಾರ್ಹ.
ಇದೆಲ್ಲದರ ನಡುವೆ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ಬಿಡುಗಡೆಯಾದ ಅಕ್ಷಯ್ ಕುಮಾರ್ ಅಭಿನಯದ 'ಖೇಲ್ ಖೇಲ್ ಮೇನ್' ಚಿತ್ರವು ನಟಿ ಶ್ರದ್ಧಾ ಕಪೂರ್ ನಟಿಸಿದ 'ಸ್ತ್ರೀ 2' ಜತೆ ಪೈಪೋಟಿಗೆ ಇಳಿಯಿತು. ರೊಮ್ಯಾಂಟಿಕ್ -ಕಾಮಿಡಿ ಜಾನರ್ನಡಿ ಮೂಡಿಬಂದ ಅಕ್ಷಯ್ ಸಿನಿಮಾ, ಈ ಬಾರಿಯೂ ಚಿತ್ರಮಂದಿರದಲ್ಲಿ ಕಮಾಲ್ ಮಾಡುವಲ್ಲಿ ಮುಗ್ಗರಿಸಿತು. ಆದ್ರೆ, 'ಸ್ತ್ರೀ 2' ಮಾತ್ರ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಕಾಣುವ ಮೂಲಕ ಚಿತ್ರರಂಗದವರ ಗಮನಸೆಳೆಯಿತು. ಅಂತಿಮವಾಗಿ ಮೂರನೇ ಬಾರಿಗೆ ಥಿಯೇಟರ್ನಲ್ಲಿ ಫ್ಲಾಪ್ ಆಗಿ ಹೊರಹೊಮ್ಮಿದ ಖೇಲ್ ಖೇಲ್ ಮೇನ್ ಚಿತ್ರ ಇದೀಗ ಓಟಿಟಿಯಲ್ಲಿ ತೆರೆಕಾಣಲು ಸಜ್ಜಾಗಿದೆ.
ಭಾರತೀಯ ಬಾಕ್ಸ್ ಆಫೀಸ್ನಲ್ಲಿ 40 ಕೋಟಿ ರೂ. ಗಳಿಸಿದ ಅಕ್ಷಯ್ ಕುಮಾರ್ ಸಿನಿಮಾ ಇದೀಗ ನೆಟ್ಫ್ಲಿಕ್ಸ್ ಒಟಿಟಿ ಫ್ಲಾಟ್ಫಾರ್ಮ್ಗೆ ಲಗ್ಗೆಯಿಟ್ಟಿದೆ. ಇದೇ ಅಕ್ಟೋಬರ್ 09ಕ್ಕೆ ರಿಲೀಸ್ ಆಗಲಿದೆ. ಚಿತ್ರದ ಡಿಜಿಟಲ್ ಹಕ್ಕುಗಳನ್ನು ಖರೀದಿಸಿದ ನೆಟ್ಫ್ಲಿಕ್ಸ್, ಬಿಡುಗಡೆ ದಿನಾಂಕವನ್ನು ಈಗಾಗಲೇ ಅಧಿಕೃತವಾಗಿ ಘೋಷಿಸಿದೆ. ಪ್ರಸ್ತುತ ಹಿಂದಿ ಭಾಷೆಯಲ್ಲಿರುವ ಚಿತ್ರ, ಯಾವ ಪ್ರಮುಖ ಭಾಷೆಗಳಲ್ಲಿ ತೆರೆಕಾಣಲಿದೆ ಎಂಬುದರ ಬಗ್ಗೆ ಸದ್ಯದ ಮಟ್ಟಿಗೆ ಮಾಹಿತಿ ಲಭ್ಯವಿಲ್ಲ,(ಏಜೆನ್ಸೀಸ್).