

ಬೆಂಗಳೂರು: ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಶನಿವಾರವೂ ಧಾರಾಕಾರವಾಗಿ ಮಳೆಯಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಗಿಂತ ಶಿವಮೊಗ್ಗದ ಆಗುಂಬೆಯಲ್ಲಿ ಅತಿ ಹೆಚ್ಚು 170 ಮಿಮೀ, ಬಳ್ಳಾರಿಯ ಸಂಡೂರು 150 ಮಿಮೀಗಿಂತ ಅಧಿಕ ಮಳೆ ಸುರಿದಿದೆ.
ಚಿತ್ರದುರ್ಗದ ಹಿರಿಯೂರು,ಕಲಬುರಗಿಯ ಆಳಂದ, ಕೊಪ್ಪಳದ ಗಂಗಾವತಿ, ಚಾಮರಾಜನಗರದ ಹರದನಹಳ್ಳಿ, ಕೊಳ್ಳೆಗಾಲ, ದಣ ಕನ್ನಡದ ಧರ್ಮಸ್ಥಳ, ಬಳ್ಳಾರಿಯ ಕಂಪ್ಲಿ ಹಾಗೂ ಯಾದಗಿರಿ ಸೇರಿ ರಾಜ್ಯದ ಹಲವು ಭಾಗಗಳಲ್ಲಿ ವರ್ಷಧಾರೆಯಾಗಿದೆ. ಅಕಾಲಿಕ ಮಳೆಯಿಂದ ಕಟಾವುಗೆ ಬಂದಿದ್ದ ಜೋಳ ಸೇರಿ ವಿವಿಧ ಬೆಳೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ. ರೈತರಿಗೆ ನಷ್ಟವಾಗಿದೆ.
ಬೆಂಗಳೂರು, ಬೆಂ.ಗ್ರಾಮಾಂತರ, ಕೋಲಾರ, ಮಂಡ್ಯ, ರಾಮನಗರ, ಕೊಡಗು,ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾಸನ,ವಿಜಯನಗರ, ಶಿವಮೊಗ್ಗ ಮತ್ತು ತುಮಕೂರಿನಲ್ಲಿ ಮುಂದಿನ ಐದು ದಿನ ಗುಡುಗು ಮಿಂಚು ಸಹಿತ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್ ಕೊಟ್ಟಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಅ.7ರಿಂದ ಮುಂದಿನ 3 ದಿನ ಯೆಲ್ಲೋ ಅರ್ಲಟ್ ಇರಲಿದೆ. ಕೆಲವಡೆ ಬಿರುಗಾಳಿ ಸಹಿತ ಮಳೆಯಾಗಲಿದೆ.ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಮುಂದಿನ 3 ದಿನ ಸಾಧಾರಣ ವರ್ಷಧಾರೆಯಾಗಲಿದೆ. ಕರಾವಳಿಯ ವ್ಯಾಪ್ತಿಯ ಪ್ರದೇಶಗಳಲ್ಲಿ ಒಣಹವೆ ಮುಂದುವರಿದಿದೆ.
ದೇಶಾದ್ಯಂತ ಮುಂಗಾರು(ನೈಋತ್ಯ ಮಾನ್ಸೂನ್) ಹಿಂಪಡೆಯಲಾಗಿದೆ. ಅ.1ರಿಂದ ಹಿಂಗಾರು (ಈಶಾನ್ಯ ಮಾನ್ಸೂನ್) ಶುರುವಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ,ವಾಯುಭಾರ ಕುಸಿತದಿಂದ ಕರ್ನಾಟಕ ಸೇರಿ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಮುಂದಿನ ಐದಾರು ದಿನ ಬಿರುಸಾಗಿ ಮಳೆಯಾಗಲಿದೆ.
|ಡಾ.ಶ್ರೀನಿವಾಸರೆಡ್ಡಿ, ಹವಾಮಾನ ತಜ್ಞ.