ಬ್ರಿಟನ್ ತೆರಿಗೆ ವಿವಾದದ ಸುಳಿಯಲ್ಲಿ ಅಕ್ಷತಾ ಮೂರ್ತಿ!

Murthy
Published on

ಲಂಡನ್: ಬ್ರಿಟನ್​ನ ಹಣಕಾಸು ಸಚಿವ ರಿಷಿ ಸುನಕ್​ರ ಪತ್ನಿ ಮತ್ತು ಇನ್ಪೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ನಾರಾಯಣ ಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿ (42) ತೆರಿಗೆ ವಿವಾದದಲ್ಲಿ ಸಿಲುಕಿದ್ದಾರೆ. ಅಂತಿಮವಾಗಿ ಮೊತ್ತ ಪಾವತಿಸುವುದಾಗಿ ಹೇಳುವ ಮೂಲಕ ಟ್ಯಾಕ್ಸ್ ವಿವಾದಕ್ಕೆ ಮಂಗಳ ಹಾಡಿದ್ದಾರೆ. ಪತಿ ಸುನಕ್​ಗೆ ಮುಜುಗರವಾಗುವುದನ್ನು ತಪ್ಪಿಸಲು ತೆರಿಗೆ ಕಟ್ಟುವುದಾಗಿ ಅಕ್ಷತಾ ತಿಳಿಸಿದ್ದಾರೆ. ಬಿಬಿಸಿ ಮಾಧ್ಯಮ ಅಂದಾಜಿಸಿರುವಂತೆ ವಿವಿಧ ಮೂಲಗಳ ಸಾಗರೋತ್ತರ ಆದಾಯಕ್ಕೆ ಕಾನೂನಿನ ಲಾಭ ಪಡೆದು ಅಕ್ಷತಾ 20 ಮಿಲಿಯನ್ ಪೌಂಡ್ (197 ಕೋಟಿ ರೂ.) ತೆರಿಗೆ ತಪ್ಪಿಸಿದ್ದಾರೆ. ಅಕ್ಷತಾ ಪ್ರತಿವರ್ಷ ಬ್ರಿಟನ್​ನಲ್ಲಿ ತಮ್ಮ ನಿವಾಸತ್ವವನ್ನು ದೃಢಪಡಿಸಿಕೊಳ್ಳಲು 30 ಸಾವಿರ ಪೌಂಡ್ (296 ಕೋಟಿ ರೂ.) ಶುಲ್ಕ ಪಾವತಿಸುತ್ತಾರೆ ಎಂದು ಬಿಬಿಸಿ ವರದಿ ಮಾಡಿದೆ.

ಸುನಕ್ ರಾಜಕೀಯ ಭವಿಷ್ಯ: ಬ್ರಿಟನ್​ನ ಆರ್ಥಿಕ ಹಿನ್ನಡೆ ಮತ್ತು ಕರೊನಾ ಪರಿಸ್ಥಿತಿಯ ನಿರ್ವಹಣೆಯಲ್ಲಿ ವಿಫಲವಾದ ಆರೋಪಕ್ಕೆ ಗುರಿಯಾಗಿರುವ ಪ್ರಧಾನಿ ಬೋರಿಸ್ ಜಾನ್ಸನ್ ಅಧಿಕಾರ ಕಳೆದುಕೊಳ್ಳತ್ತಾರೆಂದು ಕೆಲವು ತಿಂಗಳ ಹಿಂದೆ ಹೇಳಲಾಗಿತ್ತು. ಜಾನ್ಸನ್​ರ ನಂತರ ಪ್ರಧಾನಿ ಹುದ್ದೆಗೆ ರಿಷ್ ಸುನಕ್ ಅರ್ಹರು ಎಂದು ಕನ್ಸರ್ವೆಟಿವ್ ಪಕ್ಷ ಭಾವಿಸಿದೆ. ಹೀಗಾಗಿ ಸುನಕ್ ಭವಿಷ್ಯದಲ್ಲಿ ಬ್ರಿಟನ್ ಪ್ರಧಾನಿಯಾಗುವ ಎಲ್ಲ ಸಾಧ್ಯತೆ ಇದೆ. ಇದಕ್ಕೆ ಅಡ್ಡಿಮಾಡುವ ಉದ್ದೇಶದಿಂದ ವಿವಾದ ಸೃಷ್ಟಿಸಲಾಗಿದೆ ಎಂಬ ವಾದವೂ ಇದೆ. ತೆರಿಗೆ ವಿವಾದದಲ್ಲಿ ಕನ್ಸರ್ವೆಟಿವ್ ಪಕ್ಷ ಸುನಕ್ ಕುಟುಂಬದ ಪರವಾಗಿ ನಿಂತಿದೆ. ಕಾನೂನಾತ್ಮಕವಲ್ಲದ ತೆರಿಗೆಯನ್ನು ಯಾರ ತಲೆಗೂ ಕಟ್ಟಬಾರದು ಎಂದು ಹೇಳಿದೆ.

ಇನ್ಪೋಸಿಸ್ ಷೇರು: ಅಕ್ಷತಾ ಇನ್ಪೋಸಿಸ್​ನಲ್ಲಿ 700 ಮಿಲಿಯನ್ ಪೌಂಡ್ (6,918 ಕೋಟಿ ರೂ.) ಮೌಲ್ಯದ (ಶೇ. 0.93) ಷೇರುಗಳನ್ನು ಹೊಂದಿದ್ದಾರೆ. ಇದರಿಂದ ಬರುವ ಆದಾಯಕ್ಕೆ ಇಂಗ್ಲೆಂಡ್​ನಲ್ಲಿ ತೆರಿಗೆ ಪಾವತಿಸ ಬೇಕು ಎಂಬುದು ಅವರ ವಿರೋಧಿಗಳ ಒತ್ತಾಯ. ಕಳೆದ ವರ್ಷ ಅಕ್ಷತಾ 11.50 ಮಿಲಿಯನ್ ಪೌಂಡ್ (11.56 ಕೋಟಿ ರೂ.) ಡಿವಿಡೆಂಡ್ ಪಡೆದಿದ್ದಾರೆ.

ತೆರಿಗೆ ಎನ್ನುವುದು ಸಂಪೂರ್ಣ ವಾಗಿ ಕಾನೂನಾತ್ಮಕ ಪ್ರಕ್ರಿಯೆ. ಇದನ್ನು ನಾಗರಿಕ ಸಮಾಜ ಪಾಲಿಸಬೇಕು. ಆದರೆ, ಕೆಲವರು ಕಾನೂನಾತ್ಮಕವಾಗಿ ಇಲ್ಲದ ತೆರಿಗೆ ಹೇರಲು ಹೊರಟ್ಟಿದ್ದಾರೆ. ನನ್ನ ಪತಿ ಸಚಿವರಾಗಿರುವ ಕಾರಣ ವಿವಾದ ತಳುಕು ಹಾಕಿದ್ದಾರೆ. ಈ ವಿವಾದವು ಸುನಕ್​ರ ಕೆಲಸಕಾರ್ಯಕ್ಕೆ ಅಡ್ಡಿಯಾಗಬಾರದು ಅಥವಾ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಬಾರದೆಂದು ತೆರಿಗೆ ಪಾವತಿಸುವೆ. | ಅಕ್ಷತಾ ಮೂರ್ತಿ ಸಚಿವ ರಿಷಿ ಸುನಕ್​ರ ಪತ್ನಿ ವಿರೋಧ ಪಕ್ಷಗಳ ಸಲ್ಲದ ಕಾರಣ ಇಟ್ಟುಕೊಂಡು ನನ್ನ ಪತ್ನಿ ವಿರುದ್ಧ ವಿವಾದ ಎಬ್ಬಿಸುತ್ತಿವೆ. ಆಕೆ ಭಾರತದ ಪ್ರಜೆ, ಬ್ರಿಟನ್​ನ ಪೌರತ್ವದ ಕಾನೂನಿಗೆ ಒಳಪಡುವುದಿಲ್ಲ. ಭವಿಷ್ಯದಲ್ಲಿ ಆಕೆ ಭಾರತಕ್ಕೆ ಹಿಂದಿರುಗುವ ಬಯಕೆ ಹೊಂದಿದ್ದಾಳೆ. | ರಿಷಿ ಸುನಕ್ ಬ್ರಿಟನ್ ಹಣಕಾಸು ಸಚಿವ

ಬ್ರಿಟನ್ ರಾಣಿಗಿಂತ ಶ್ರೀಮಂತೆ!: ಅಕ್ಷತಾ ಮೂರ್ತಿ ಬ್ರಿಟನ್​ನ ರಾಣಿ ಎರಡನೇ ಎಲಿಜಬೆತ್​ಗಿಂತ ಶ್ರೀಮಂತೆ. ಅಕ್ಷತಾ ಇಂಜಿನಿಯರ್ ಆಗಿದ್ದು, ಸ್ವಯಂ ಉದ್ಯೋಗಿಯಾಗಿದ್ದಾರೆ. ಇನ್ಪೋಸಿಸ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. ರಿಷಿ ಮತ್ತು ಅಕ್ಷತಾ ಜಂಟಿ ಒಡೆತನದಲ್ಲಿ ನಾಲ್ಕು ದೊಡ್ಡ ಆಸ್ತಿಗಳು ಇವೆ. ರಿಷಿ ಸ್ಥಾಪಿಸಿರುವ ಕ್ಯಾಟ್​ವಾರನ್ ವೆಂಚರ್ಸ್ ಕಂಪನಿಯಲ್ಲಿ ಅಕ್ಷತಾ ನಿರ್ದೇಶಕಿಯೂ ಆಗಿದ್ದಾರೆ. 2021ರಲ್ಲಿ ಆಕೆಯ ಒಟ್ಟು ಆದಾಯ 460 ಮಿಲಿಯನ್ ಪೌಂಡ್ (3,571 ಕೋಟಿ ರೂ) ಎಂದು ’ಸಂಡೇ ಟೈಮ್್ಸ’ ಶ್ರೀಮಂತರ ಪಟ್ಟಿಯಲ್ಲಿ ಉಲ್ಲೇಖವಾಗಿತ್ತು.

ವಿವಾದದ ಹಿನ್ನೆಲೆ: ಸಚಿವ ರಿಷಿ ಸುನಕ್ ಪತ್ನಿಯಾದರೂ ಅಕ್ಷತಾ ಈಗಲೂ ಭಾರತದ ಪೌರತ್ವ ಹೊಂದಿದ್ದಾರೆ. ಹೀಗಾಗಿ ಅವರು ಬ್ರಿಟನ್​ಗೆ ವಿದೇಶಿ ಆಗಿರುವ ಕಾರಣ ಸಾಗರೋತ್ತರ ಆದಾಯಕ್ಕೆ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಆದರೆ, ಕೋವಿಡ್ ಸಮಯದಲ್ಲಿ ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರೂ ಪ್ರಭಾವಿಗಳು ತೆರಿಗೆ ತಪ್ಪಿಸುತ್ತಿದ್ದಾರೆ ಎಂದು ಬ್ರಿಟನ್ ಮಾಧ್ಯಮದಲ್ಲಿ ವರದಿಯಾಗಿದೆ. ಇದರಲ್ಲಿ ಮುಖ್ಯವಾಗಿ ಹಣಕಾಸು ಸಚಿವ ರಿಷಿ ಸುನಕ್​ರ ಪತ್ನಿ ತೆರಿಗೆ ವಂಚಿಸಿದ್ದಾರೆ ಎಂದು ಆಪಾದಿಸಲಾಗಿದೆ. ಇದನ್ನು ಮುಂದುಮಾಡಿಕೊಂಡು ವಿರೋಧ ಪಕ್ಷಗಳು ಸುನಕ್ ವಿರುದ್ಧ ಹರಿಹಾಯ್ದಿವೆ. ಹಣದುಬ್ಬರ ಪ್ರಮಾಣ ಐತಿಹಾಸಿಕ ಮಟ್ಟಕ್ಕೆ ಏರಿಕೆಯಾಗಿ ಜನರು ಬಸವಳಿದಿದ್ದರೂ ಸುನಕ್ ಕುಟುಂಬ ಕಾನೂನಿನ ಲಾಭ ಪಡೆಯುತ್ತಿದೆ ಎಂದು ಜರಿದಿವೆ. ತೆರಿಗೆ ತಪ್ಪಿಸುವುದಕ್ಕಾಗಿಯೇ ಸುನಕ್ ಪತ್ನಿ ಬ್ರಿಟನ್ ಪೌರತ್ವ ಪಡೆದುಕೊಂಡಿಲ್ಲ ಎಂದೂ ಆಪಾದಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net