

| ಮೃತ್ಯುಂಜಯ ಕಪಗಲ್ ಬೆಂಗಳೂರು
ಕೃಷಿಯತ್ತ ಯುವಜನರ ಆಕರ್ಷಣೆ, ಉದ್ಯಮ ವಲಯವನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಬಗರ್ಹುಕುಂ ಸಾಗುವಳಿದಾರರಿಗೆ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತಾದರೂ ಈ ಅವಧಿಯಲ್ಲಿ ಸಲ್ಲಿಕೆಯಾಗಿದ್ದ ಲಕ್ಷಾಂತರ ಅರ್ಜಿಗಳು ತಿರಸ್ಕೃತವಾಗಿವೆ. ಅಷ್ಟೇ ಪ್ರಮಾಣದ ಅರ್ಜಿಗಳು ಇತ್ಯರ್ಥಕ್ಕೆ ಕಾದಿರುವುದು ರೈತರ ಕನಸಿಗೆ ತಣ್ಣೀರೆರಚಿದೆ. ಅನಧಿಕೃತ ಸಾಗುವಳಿದಾರರು ಸಕ್ರಮೀಕರಣಕ್ಕೆ ಸಲ್ಲಿಸಿದ ಅರ್ಜಿಗಳನ್ನು ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರು ಪರಿಶೀಲಿಸಿ ತಹಸೀಲ್ದಾರ್ಗೆ ಸಲ್ಲಿಸುತ್ತಾರೆ. ನಂತರ ತಹಸೀಲ್ದಾರ್ ಶಿಫಾರಸುಗಳನ್ನು ಅಕ್ರಮ ಸಕ್ರಮ ಸಮಿತಿ ಪರಾಮಶಿಸಿ ಮಂಜೂರಾತಿ ನೀಡುತ್ತದೆ. ಆದರೂ ನಿಯಮಬದ್ಧವಾಗಿದೆ ಎಂದು ತಹಸೀಲ್ದಾರ್ಗೆ ಖಾತರಿಯಾದರಷ್ಟೇ ಸಮಿತಿ ಅಂಕಿತ ಬೀಳುತ್ತದೆ. ಮೂರು ನಮೂನೆಗಳಲ್ಲಿ ಸಲ್ಲಿಸಿದ ಅರ್ಜಿಗಳ ಪೈಕಿ 10 ಲಕ್ಷ ಅರ್ಜಿಗಳು ಬಾಕಿ ಉಳಿಯುವುದಕ್ಕೆ ಸಮೀಕ್ಷೆ ವಿಳಂಬ, ಕರೊನಾ ಸೋಂಕು ಅಡ್ಡಿ, ಕೆಲವೆಡೆ ಶಾಸಕರ ಅಧ್ಯಕ್ಷತೆಯ ಸಮಿತಿಗೆ ಸದಸ್ಯರ ನೇಮಕಕ್ಕೆ ಪಕ್ಷ ರಾಜಕಾರಣವೂ ತೊಡಕಾಗಿರುವುದು ಬೆಳಕಿಗೆ ಬಂದಿದೆ.
ಹೆಚ್ಚಿದ ಒತ್ತಡ: ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದು ಗ್ರಾಮೀಣ ಪ್ರದೇಶದ ಬಡವರು, ಅನಕ್ಷರಸ್ಥರು, ಪರಿಶಿಷ್ಟ ಜಾತಿ-ಪಂಗಡ ಸಮುದಾಯಗಳಿಗೆ ಗೊತ್ತಾಗಿಲ್ಲ. ಮತ್ತೊಂದು ಸುತ್ತಿನ ಅನುಮತಿ ನೀಡಬೇಕೆಂಬ ಒತ್ತಡವೂ ಸರ್ಕಾರದ ಮೇಲೆ ಹೆಚ್ಚಿದೆ. ತಲೆತಲಾಂತರದಿಂದ ಉತ್ತಿಬಿತ್ತಿ ಬೆಳೆದ ಭೂಮಿಯನ್ನು ಅರಣ್ಯ ಇಲಾಖೆಗೆ ಸೇರಿಸಲಾಗಿದೆ. ಪೂರ್ವಾಪರ ಗೊತ್ತಿಲ್ಲದೆ ಸಕ್ರಮಕ್ಕೆ ಸಲ್ಲಿಸಿದ ಅರ್ಜಿಗಳು ತಿರಸ್ಕೃತವಾಗಿವೆ. ಬದುಕು ಕಟ್ಟಿಕೊಳ್ಳುವುದು ಹೇಗೆ? ಎಂದು ಅನೇಕ ಸಾಗುವಳಿದಾರರು ಚಿಂತೆಯ ಮಡುವಿಗೆ ಬಿದ್ದಿದ್ದಾರೆ. ಬಗರ್ಹುಕುಂ ಸಾಗುವಳಿದಾರರ ಆಸರೆಯಲ್ಲಿ ಬಲಿಷ್ಠ ಒತ್ತುವರಿದಾರರು ಸಕ್ರಮಕ್ಕೆ ಪ್ರಯತ್ನ ಮಾಡುತ್ತಿರುವ ಅನುಮಾನಗಳಿವೆ. ನೂರಾರು ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡವರು ಸಣ್ಣ ರೈತರ ಪಾಲಿಗೆ ಸಮಸ್ಯೆಯಾಗಿದ್ದು, ಸಮಿತಿಗಳಿಗೂ ಸವಾಲಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಏನಾಗಿತ್ತು: 1964ರ ಪರಿಚ್ಛೇದ 94 ಎ (4)ಗೆ ತಿದ್ದುಪಡಿ ತಂದು, 2018ರ ಮಾರ್ಚ್ 17 ರಿಂದ 2019ರ ಮಾರ್ಚ್ 16ರವರೆಗೆ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಅವಕಾಶ ನೀಡಿತ್ತು. ಇದಕ್ಕೂ ಮುನ್ನ 1991ರಲ್ಲಿ ತಿದ್ದುಪಡಿ ಮಾಡಿ ನಮೂನೆ 50ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅಲ್ಲದೆ, 1998ರ ನವೆಂಬರ್ 1ರಿಂದ 1999ರ ಏ.30ರವರೆಗೆ ನಮೂನೆ 53ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಮೂರು ಅವಧಿಯಲ್ಲಿ ಮೂರು ನಮೂನೆ ಅರ್ಜಿಗಳನ್ನು ಪರಿಶೀಲಿಸಿ ಬಗರ್ಹುಕುಂ ಸಾಗುವಳಿ ಸಕ್ರಮಕ್ಕೆ ಅನುಮತಿ ನೀಡಲಾಗಿತ್ತು.
ಸವಾಲುಗಳೇನು?: ಬಗರ್ಹುಕುಂ ಸಾಗುವಳಿ ಅರ್ಜಿಗಳ ವಿಲೇವಾರಿಗೆ ಶಾಸಕರ ಅಧ್ಯಕ್ಷತೆಯಲ್ಲಿ ಅಕ್ರಮ ಸಕ್ರಮ ಸಮಿತಿ ರಚಿಸಲಾಗಿದೆ. ಊರುಗಳಿಗೆ ಹತ್ತಿರದ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುವವರು ಸಲ್ಲಿಸಿದ ಅರ್ಜಿಗಳು ಅನೇಕ ಸಮಿತಿಗಳನ್ನು ಸಂಕಟಕ್ಕೆ ಸಿಲುಕಿಸಿವೆ. ಅಕ್ರಮ ಸಕ್ರಮಗೊಳಿಸಿದರೆ ಶಿಕ್ಷಣ, ಆರೋಗ್ಯ, ವಿದ್ಯುತ್, ಸ್ಮಶಾನ ಮುಂತಾದ ಅಗತ್ಯ ಕೆಲಸಗಳಿಗೆ ಊರು ಸಮೀಪದ ಸರ್ಕಾರಿ ಜಮೀನು ಕೊರತೆಯಾಗುತ್ತದೆ. ಖಾಸಗಿ ಜಮೀನು ದುಬಾರಿ ಜತೆಗೆ ಅದರಲ್ಲೂ ನೀರಾವರಿಯಾಗಿದ್ದರೆ ಸಿಗುವುದು ದುರ್ಲಭ. ಈ ಕಾರಣಕ್ಕೆ ಹತ್ತಾರು ಯೋಜನೆಗಳ ಕಾಮಗಾರಿ ನನೆಗುದಿ, ರುದ್ರಭೂಮಿಯಿಲ್ಲದೆ ಅಂತ್ಯಸಂಸ್ಕಾರಕ್ಕೆ ವೇದನೆಪಡುವ ಗ್ರಾಮಗಳಿವೆ. ಜನವಸತಿ ಪ್ರದೇಶದಿಂದ ದೂರವಿರುವ ಸರ್ಕಾರಿ ಜಮೀನಿದ್ದರೆ ಸಮಸ್ಯೆಯಾಗದು. ಆದರೆ ಇವೂ ಕೂಡ ಅರಣ್ಯ, ಗೋಮಾಳ ಅಥವಾ ಗ್ರಾಮಠಾಣ ಭೂಮಿಯಾಗಿದ್ದರೆ ಮಂಜೂರು ಮಾಡುವುದು ಅಸಾಧ್ಯವೆಂದು ಕಂದಾಯ ಇಲಾಖೆ ಮೂಲಗಳು ಸಂಕಟದ ಮೂಲ ಬಿಚ್ಚಿಟ್ಟಿವೆ.
ಅರ್ಜಿ ಬಾಕಿ ಏಕೆ?
ಅಕ್ರಮ ಸಕ್ರಮ ಸಮಿತಿಗೆ ಸದಸ್ಯರ ನೇಮಕಕ್ಕೆ ಅರ್ಹತೆಯ ಮಾನದಂಡದಂತೆ ನಾಲ್ಕು ಹೆಸರುಗಳನ್ನು ಶಿಫಾರಸು ಮಾಡಿ ಮೂರು ಬಾರಿ ಪತ್ರ ಬರೆದರೂ ಸರ್ಕಾರ ಸ್ಪಂದಿಸಿಲ್ಲ. ಕಾಂಗ್ರೆಸ್ ಶಾಸಕರಿರುವ ಕಾರಣಕ್ಕೆ ಕುಷ್ಟಗಿ, ಕೊಪ್ಪಳ ಅಕ್ರಮ ಸಕ್ರಮ ಸಮಿತಿ ರಚನೆಯಾಗಿಲ್ಲವೆ ಎನ್ನುವುದು ಗೊತ್ತಿಲ್ಲ. | ಅಮರೇಗೌಡ ಬಯ್ಯಾಪುರ ಕಾಂಗ್ರೆಸ್ ಶಾಸಕ ಕುಷ್ಟಗಿ ಅನಧಿಕೃತ ಸಾಗುವಳಿ ಜಮೀನು ಸಕ್ರಮಕ್ಕೆ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಲು ಒಂದು ವರ್ಷದ ಕಾಲಾವಕಾಶ ನೀಡಲಾಗಿತ್ತು. ಮತ್ತೆ ಅವಕಾಶ ನೀಡುವ ಯೋಚನೆ ಸದ್ಯಕ್ಕಿಲ್ಲ. ಡೀಮ್್ಡ ಫಾರೆಸ್ಟ್ಗೆ ಸೇರಿದ ಒಂಬತ್ತು ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಆರು ಲಕ್ಷ ಹೆಕ್ಟೇರ್ ಕಂದಾಯ ಇಲಾಖೆಗೆ ಬಿಟ್ಟು ಕೊಡುವ ಮಾಹಿತಿಯಿಲ್ಲ. | ತುಷಾರ್ ಗಿರಿನಾಥ್ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ.
ಪರಿಹಾರದ ದಾರಿ: ಗೋಮಾಳ, ಗ್ರಾಮಠಾಣ ಜಮೀನು ಹೊರತುಪಡಿಸಿ, ಅರಣ್ಯ ಭೂಮಿಯ ಬಗರ್ಹುಕುಂ ಸಾಗುವಳಿದಾರರ ಸಮಸ್ಯೆಗೆ ಸರ್ಕಾರ ಪರಿಹಾರದ ದಾರಿ ಕಂಡುಕೊಂಡಿದೆ. ಅರಣ್ಯ ಮತ್ತು ಕಂದಾಯ ಇಲಾಖೆಗಳ ನಡುವಿನ ನಿರಂತರ ಮಾತುಕತೆ ಫಲಪ್ರದವಾಗಿದೆ. ಪರಿಗಣಿತ ಅರಣ್ಯ (ಡೀಮ್್ಡ ಫಾರೆಸ್ಟ್) ಭೂಮಿ ಒಟ್ಟು ಒಂಬತ್ತು ಲಕ್ಷ ಹೆಕ್ಟೇರ್ನಲ್ಲಿ ಆರು ಲಕ್ಷ ಹೆಕ್ಟೇರ್ ಜಮೀನನ್ನು ಕಂದಾಯ ಇಲಾಖೆಗೆ ಬಿಟ್ಟುಕೊಡಲು ಅರಣ್ಯ ಇಲಾಖೆ ಒಪ್ಪಿದ್ದು, ಮುಂದಿನ ಹಂತವಾಗಿ ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಬೇಕಾಗಿದೆ. ಸುಪ್ರೀಂಕೋರ್ಟ್ ಅಸ್ತು ಎಂದರೆ, ಲಕ್ಷಾಂತರ ರೈತರು, ಅನಧಿಕೃತವಾಗಿ ಮನೆಕಟ್ಟಿಕೊಂಡವರು ಆತಂಕದಿಂದ ಪಾರಾಗುವರು.
ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಸಣ್ಣ, ಅತಿಸಣ್ಣ ರೈತರ ಭವಿಷ್ಯ ಅತಂತ್ರವಾಗಿದ್ದು, ಕೃಷಿ ಭೂಮಿ ಕಡಿತವಾಗುವ ಅಪಾಯವಿದೆ. ಅರಣ್ಯ ಭೂಮಿಯಲ್ಲಿ ತಲೆತಲಾಂತರದಿಂದ ಅನಧಿಕೃತ ಸಾಗುವಳಿ ಮಾಡುತ್ತಿರುವ ರೈತರಿಗೆ ದೊಡ್ಡ ಪ್ರಮಾಣದ ಒತ್ತುವರಿದಾರರು ಕಂಟಕವಾಗಿದ್ದಾರೆ.
| ಡಾ.ಸಿದ್ಧನಗೌಡ ಪಾಟೀಲ್ ಸಿಪಿಐ ರಾಜ್ಯ ಸಮಿತಿ ಸದಸ್ಯ.