

ಆಂಧ್ರಪ್ರದೇಶ: ಇಂದು ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗೇಶ್ವರ ರಾವ್ (ANR) ಅವರ 100ನೇ ಜನ್ಮದಿನವನ್ನು ಆಚರಿಸಲಾಗಿದ್ದು, ಶತಮಾನೋತ್ಸವ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ, ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಟನ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಕಾರ್ಯಕ್ರಮಕ್ಕೆ ತೆಲುಗು ಚಿತ್ರರಂಗದ ಸ್ಟಾರ್ ನಟರು ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು.
ಎಎನ್ಆರ್ ಪ್ರತಿಮೆಯನ್ನು ಭಾರತದ ಮಾಜಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಉದ್ಘಾಟನೆ ಮಾಡಿದರು. ಪ್ರತಿಮೆ ಅನಾವರಣ ಸಮಾರಂಭದಲ್ಲಿ ನಾಗಾರ್ಜುನ, ನಾಗ ಚೈತನ್ಯ, ಮತ್ತು ಅಕ್ಕಿನೇನಿ ಅಖಿಲ್ ಸೇರಿದಂತೆ ಅಕ್ಕಿನೇನಿ ಕುಟುಂಬದ ಪ್ರಮುಖ ಸದಸ್ಯರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ತೆಲುಗು ಚಿತ್ರರಂಗದ ಸ್ಟಾರ್ ನಟರಾದ ಎಸ್.ಎಸ್. ರಾಜಮೌಳಿ, ಮಹೇಶ್ ಬಾಬು, ರಾಮ್ ಚರಣ್, ನಾನಿ, ವಿಷ್ಣು ಮಂಚು, ಬ್ರಹ್ಮಾಂಡಂ, ರಾಜೇಂದ್ರ ಪ್ರಸಾದ್ ಮುಂತಾದವರು ಭಾಗಿಯಾಗಿದ್ದರು.
100ನೇ ಜನ್ಮ ವಾರ್ಷಿಕೋತ್ಸವದ ಆಚರಣೆಯು ಟಾಲಿವುಡ್ನ ಸ್ಟಾರ್ ನಟರು ಮತ್ತು ಹಿರಿಯ ಕಲಾವಿದರ ಸಂಗಮಕ್ಕೆ ಕಾರಣವಾಯಿತು. ಗಮನಾರ್ಹವಾಗಿ ಪ್ರಿನ್ಸ್ ಮಹೇಶ್ ಬಾಬು, ಚಿರಂಜೀವಿ ಪುತ್ರ ರಾಮ್ ಚರಣ್ ಪರಸ್ಪರ ಕೆಲ ಸಮಯ ಮಾತನಾಡಿದ ದೃಶ್ಯ ಅನೇಕರ ಗಮನ ಸೆಳೆದಿದೆ,(ಏಜೆನ್ಸೀಸ್).