

ವಿಜಯಪುರ: ಪಂಚಮಸಾಲಿ 2ಎ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಬಜೆಟ್ ಅಧಿವೇಶನದ ನಂತರ ಸಭೆ ಕರೆಯುವುದಾಗಿ ಭರವಸೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಈವರೆಗೂ ಆ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಹೀಗಾಗಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಮತ್ತೊಮ್ಮೆ ಹೋರಾಟ ರೂಪಿಸಲಾಗುತ್ತಿದೆ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಈಗಾಗಲೇ ಬಿಜೆಪಿ ಸರ್ಕಾರದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಡಿ ಮೀಸಲಾತಿ ಜಾರಿಗೊಳಿಸಲಾಗಿದೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಅದು ಅನುಷ್ಟಾನಗೊಂಡಿರಲಿಲ್ಲ. ಸದ್ಯ ಆ 2 ಡಿ ಮೀಸಲಾತಿಯಾದರೂ ಅನುಷ್ಟಾನಗೊಳಿಸಲಿ. ಇಲ್ಲವಾದರೆ 2ಎ ಮೀಸಲಾತಿಗಾದರೂ ಸೇರ್ಪಡೆಗೊಳಿಸಲಿ. ಒಟ್ಟಿನಲ್ಲಿ ನಮ್ಮ ಬೇಡಿಕೆ ಈಡೇರಬೇಕು. ಹೀಗಾಗಿ ಹೋರಾಟ ಮತ್ತೆ ಮುಂದುವರಿಸುತ್ತಿರುವುದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ನೂತನ ಸರ್ಕಾರ ರಚನೆಯಲ್ಲಿ ಪಂಚಮಸಾಲಿ ಸಮಾಜದ ಪಾತ್ರ ಅನನ್ಯ, ಸಮಾಜದ ಋಣ ತೀರಿಸಲು ನೂತನ ಸರ್ಕಾರ ಒಂದು ಹೆಜ್ಜೆ ಮುಂದೆ ಇರಿಸಬೇಕು, ಈಗ ನಮಗೆ ಹಸಿವಾಗಿದೆ, ಮೀಸಲಾತಿ ಎಂಬ ಪ್ರಸಾದವನ್ನು ನಮಗೆ ಕೊಡಿ ಎಂದು ಕೇಳಿದ್ದೇವೆ, ಅದನ್ನು ಯಾವ ರೀತಿ ಕೊಡುತ್ತದೆಯೋ ಅದನ್ನು ಸರ್ಕಾರಕ್ಕೆ ಬಿಟ್ಟ ಕೊಟ್ಟ ವಿಷಯ, ಹಾಲುಮತ ಸಮಾಜ ಬಾಂಧವರಿಗೆ ಎಸ್‌ಟಿ ಶಿಫಾರಸ್ಸು ಮಾಡಿದ್ದು ಸ್ವಾಗತಾರ್ಹ, ಅದೇ ತೆರನಾಗಿ ನಮ್ಮ ಸಮಾಜವನ್ನು 2ಎ ಮೀಸಲಾತಿ ಕಲ್ಪಿಸಿ ಎಂದು ಕೇಳುತ್ತಿದ್ದೇವೆ, ಇನ್ನೊಬ್ಬರ ಮೀಸಲಾತಿ ತೆಗೆದು ಕೊಟ್ಟಿರುವುದು ಬಿಟ್ಟಿರುವುದು ನಮಗೆ ಸಂಬಂಧಿಸಿದ ವಿಷಯವಲ್ಲ, ಅದು ಸರ್ಕಾರಕ್ಕೆ ಬಿಟ್ಟ ವಿಷಯ ಎಂದು ಸ್ಪಷ್ಟಪಡಿಸಿದರು.
ಪಂಚಮಸಾಲಿ 2ಎ ಮೀಸಲಾತಿ ಹೋರಾಟದಲ್ಲಿ ಈ ಹಿಂದೆ ಮುಂಚೂಣಿಯಲ್ಲಿದ್ದ ಎಲ್ಲ ನಾಯಕರು ಮತ್ತೆ ಭಾಗವಹಿಸಲಿದ್ದಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೂಡ ಭಾಗವಹಿಸಲಿದ್ದಾರೆ. ಸಮಾಜಕ್ಕಾಗಿ ಸಚಿವ ಸ್ಥಾನವನ್ನೇ ತ್ಯಾಗ ಮಾಡಿದವರು ಯತ್ನಾಳ. ಹೀಗಾಗಿ ದೈಹಿಕವಾಗಿ ಹೋರಾಟದಲ್ಲಿ ಇಲ್ಲದೇ ಇದ್ದರೂ ಮಾನಸಿಕವಾಗಿಯಾದರೂ ಇರಲಿದ್ದಾರೆ. ವಿಜಯಾನಂದ ಕಾಶಪ್ಪನವರ, ಸಚಿವ ಶಿವಾನಂದ ಪಾಟೀಲ ಸೇರಿದಂತೆ ಎಲ್ಲರ ಬೆಂಬಲವೂ ಇರಲಿದೆ. ಇದು ಸಮಾಜ ಪರವಾದ ಹೋರಾಟ. ರಾಜ್ಯಮಟ್ಟದಲ್ಲಿ ನಡೆಯುವ ಧರಣಿಯಲ್ಲಿ ಎಲ್ಲರೂ ಭಾಗವಹಿಸಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದರು.
ಹೋರಾಟದ ಭಾಗವಾಗಿ ಸೆ.24 ರಂದು ಚಡಚಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಮೂಲಕ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಸುಮಾರು 15 ಸಾವಿರಕ್ಕೂ ಹೆಚ್ಚು ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದಾರೆ ಎಂದರು.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ. ಪಾಟೀಲ ಮಾತನಾಡಿ, ಪಂಚಮಸಾಲಿ ಸಮಾಜವನ್ನು 2 ಎ ಪ್ರವರ್ಗಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಹೋರಾಟ ಸಂಘಟಿತವಾಗಿ ಮುನ್ನಡೆಯುತ್ತಿದ್ದು, ಅದರ ಭಾಗವಾಗಿ ನಿಡಗುಂದಿ, ತಾಳಿಕೋಟೆ ಸೇರಿದಂತೆ ಹಲವಾರು ತಾಲೂಕು ಕೇಂದ್ರಗಳಲ್ಲಿ ಸಭೆ, ಆಂದೋಲನ ನಡೆಸಲು ನಿರ್ಧರಿಸಲಾಗಿದೆ. ಚಡಚಣದಲ್ಲಿ ಜಿಲ್ಲಾ ಮಟ್ಟದ ಬೃಹತ್ ಧರಣಿ ನಡೆಸಲು ಸಹ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಮುಖಂಡರಾದ ದಾನೇಶ ಅವಟಿ, ನಿಂಗನಗೌಡ ಸೊಲ್ಲಾಪೂರ ಮತ್ತಿತರರಿದ್ದರು.