

ಲಖನೌ: ಮಧ್ಯಪ್ರದೇಶ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರಚಾಗಿ ಕಾಂಗ್ರೆಸ್ನೊಂದಿಗೆ ಮುನಿಸಿಕೊಂಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈಗ ಮತ್ತೊಮ್ಮೆ ಹೊಸದಾಗಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಅಖಿಲೇಶ್ ಪಿಡಿಎ ಎಂಬ ಪದವನ್ನು ಬಳಸಿ ಕಾಂಗ್ರೆಸ್ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ಈ ಮೂಲಕ ಚುನಾವಣೆಗೂ ಮುನ್ನವೇ ವಿಪಕ್ಷಗಳ ಒಕ್ಕೂಟ ಇಂಡಿಯಾದಲ್ಲಿ ಅಸಮಾಧಾನದ ಕಟ್ಟೆ ಹೊಡೆದುಕೊಂಡಿದೆ.
2024ರಲ್ಲಿ ಸಮಾಜವಾದಿ ಪಕ್ಷದ ಗೆಲವುವನ್ನು ಪಿಡಿಎ ಖಚಿತಪಡಿಸುತ್ತದೆ. ಅಖಿಲೇಶ್ ಐಆದವ್ ಬಡವರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳುತ್ತಾರೆ ಎಂದು ಪಕ್ಷದ ಕಾರ್ಯಕರ್ತನೋರ್ವ ತನ್ನ ಬೆನ್ನಿನ ಮೇಲೆ ಬರೆಸಿಕೊಂಡಿರುವ ಪೋಟೋವನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಪಿಡಿಎ ಎಂದರೆ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಎಂದರ್ಥ. ಅಖಿಲೇಶ್ ಯಾದವ್ ತಮ್ಮ ಪಕ್ಷವು ಪಿಡಿಎ ಮೇಲೆ ಹೆಚ್ಚಿನ ಕಾರ್ಯತಂತ್ರವನ್ನು ಕೇಂದ್ರಿಕರಿಸುವುದಾಗಿ ಪುನರುಚ್ಚರಿಸಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಪಿಡಿಎ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವನ್ನು ಸೋಲಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರಚಾಗಿ ಕಾಂಗ್ರೆಸ್ನೊಂದಿಗೆ ಮುನಿಸಿಕೊಂಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡು ಆಡಳಿತರೂಢ ಬಿಜೆಪಿ ಸರ್ಕಾರವನ್ನು ಕೆಳಗಿಳಿಸುವ ಬಗ್ಗೆ ಚಿಂತನೆ ನಡೆಸಿದ್ದರು. ಆದರೆ, ಅಖಿಲೇಶ್ ಲೆಕ್ಕಾಚಾರ ಹಾಕಿಕೊಂಡಂತೆ ಏನು ನಡೆಯಲಿಲ್ಲ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ತಮಗೆ ಮೋಸ ಮಾಡಿದೆ ಎಂದು ಅಖಿಲೇಶ್ ಯಾದವ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.