

ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯು ಈಗಾಗಲೇ ‘ಬದಲಾವಣೆಯ ಬೆಳಕು’ ಚೆಲ್ಲುವ ದಿಟ್ಟ ಹುಡುಗಿಯರ ಕಥೆಗಳನ್ನು ಹೇಳುತ್ತಾ ಕನ್ನಡಿಗರ ಮನಗೆದ್ದಿದೆ. ‘ಇಂತಿ ನಿಮ್ಮ ಆಶಾ’, ‘ಮುದ್ದುಲಕ್ಷ್ಮೀ’, ‘ಸರಸು’, ‘ಮನಸ್ಸೆಲ್ಲಾ ನೀನೇ’ ಮುಂತಾದ ಧಾರಾವಾಹಿಗಳು ಮನೆಮಾತಾಗಿರುವ ಸಮಯದಲ್ಲೇ, ಇಂದಿನಿಂದ ಇನ್ನೊಂದು ವಿಭಿನ್ನ ಧಾರಾವಾಹಿ ಪ್ರಾರಂಭ ವಾಗುತ್ತಿದೆ. ಅದೇ ‘ಆಕಾಶ ದೀಪ’.
ಆಕಾಶ್ ಮತ್ತು ದೀಪ ಎಂಬ ಯುವಕ-ಯುವತಿಯ ಜೀವನದಲ್ಲಿ ನಡೆಯುವ ಘಟನೆಗಳೇ, ಈ ಹೊಸ ಧಾರಾವಾಹಿಯ ಕಥಾವಸ್ತು. ಅಪ್ಪನ ಮುದ್ದಿನ ಮಗಳಾದರೂ, ಚಿಕ್ಕಮ್ಮ ಮತ್ತು ಮಲಸೋದರಿಯ ಮುಷ್ಠಿಗೆ ಸಿಲುಕಿ ನರಳುವ ದೀಪ ಒಂದು ಕಡೆಯಾದರೆ, ದೃಷ್ಟಿಹೀನ ಫೋಟೋಗ್ರಾಫರ್ ಆಕಾಶ್ ಇನ್ನೊಂದು ಕಡೆ. ಮನೆಯ ಜವಾಬ್ದಾರಿಯನ್ನು ಹೊತ್ತಿರುವ ಕಾರಣದಿಂದ ದೀಪ ಮದುವೆಯಿಂದ ದೂರವಿದ್ದರೆ, ಆಕಾಶ್ ತನಗಿರುವ ಸಮಸ್ಯೆಯಿಂದ ಮದುವೆ ಬೇಡ ಎಂದು ತೀರ್ವನಿಸಿರುತ್ತಾನೆ. ಆಕಾಶ-ಭೂಮಿಯಷ್ಟು ಅಂತರವಿರುವ ಇವರಿಬ್ಬರು ಮದುವೆಯಾಗುತ್ತಾರಾ? ಎಂದು ಗೊತ್ತಾಗಬೇಕಿದ್ದರೆ, ‘ಆಕಾಶ ದೀಪಾ’ ನೋಡಬೇಕು.
‘ಎಳೆ ಚಂದ್ರನಾ ಕಿರು ಪಾದಕೆ ಆಕಾಶವೇ ಭೂಮಿಕೆ ...’ ಎಂದು ಆರಂಭವಾಗುವ ‘ಆಕಾಶದೀಪ’ದ ಶೀರ್ಷಿಕೆಗೀತೆ ಈಗಾಗಲೇ ಕೇಳುಗರಿಗೆ ಇಷ್ಟವಾಗಿದ್ದು, ಇಂದಿನಿಂದ ಪ್ರತಿರಾತ್ರಿ ಎಂಟಕ್ಕೆ ಧಾರಾವಾಹಿ ಪ್ರಸಾರವಾಗಲಿದೆ.