

ಪ್ಯಾರಿಸ್: ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಹಾಗೂ ಪತಿ ಅಭೀಷೇಕ್ ಬಚ್ಚನ್ ನಡುವೆ ಇತ್ತೀಚಿನ ದಿನಗಳಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಇವರಿಬ್ಬರು ಒಟ್ಟಾಗಿ ಕಾಣಿಸಿಕೊಳ್ಳದಿರುವುದು ಇವರಿಬ್ಬರ ನಡುವಿನ ಬಿರುಕಿಗೆ ಪ್ರಮುಖ ನಿದರ್ಶನ ಎಂದು ಹೇಳಲಾಗಿದ್ದು, ಇದೀಗ ಹೊಸ ಬೆಳವಣಿಗೆಯಲ್ಲಿ ಐಶ್ವರ್ಯಾ ರೈ ತಮ್ಮ ಡಿವೋರ್ಸ್ ವದಂತಿ ಕುರಿತು ಉತ್ತರಿಸಿದ್ದು, ವಿಚ್ಛೇದನ ವದಂತಿಗೆ ಬ್ರೇಕ್ ಹಾಕಿದ್ದಾರೆ.
ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಪ್ಯಾರಿಸ್ ಫ್ಯಾಷನ್ ವೀಕ್ನಲ್ಲಿ ಭಾಗಿಯಾಗಲು ಪ್ರೇಮನಗರಿಗೆ ತೆರಳಿದ್ದು, ಅವರ ಜೊತೆ ಮಗಳು ಆರಾಧ್ಯ ಕೂಡ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಜತೆಯಾಗಿ ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದೇ ವೇಳೆ ಐಶ್ವರ್ಯಾ ರೈ ತಮ್ಮ ವಿಚ್ಛೇದನ ವದಂತಿ ಕುರಿತು ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಐಶ್ವರ್ಯಾ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಈ ಮೊದಲಿನಿಂದಲೂ ಇದೆ. ಈ ಬಗ್ಗೆ ಅನೇಕ ವದಂತಿಗಳು ಹುಟ್ಟಿಕೊಂಡಿವೆ. ಆದರೆ, ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿಲ್ಲ. ಈ ಬಗ್ಗೆ ಅವರು ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ. ಹೀಗಿರುವಾಗಲೇ ಕೆಲ ದಿನಗಳ ಹಿಂದೆ ಐಶ್ವರ್ಯಾ ವೆಡ್ಡಿಂಗ್ ರಿಂಗ್ಅನ್ನು ತೆಗೆದಿಟ್ಟು ಓಡಾಡಿದ್ದ ವಿಡಿಯೋ ವೈರಲ್ ಆಗಿತ್ತು. ಆದರೆ, ಈಗ ಅವರು ಮತ್ತೆ ಉಂಗುರ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.
ಈ ಹಿಂದೆ ಐಶ್ವರ್ಯಾ ಹಾಗೂ ಅಭಿ ಡಿವೋರ್ಸ ಪಡೆದಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಇಬ್ಬರು ಇದರ ಬಗ್ಗೆ ಮಾತನಾಡಿರಲಿಲ್ಲ. ಡಿವೋರ್ಸ್ ಸುದ್ದಿ ಬೆನ್ನಲ್ಲೇ ಮಗಳು ಆರಾಧ್ಯಳ ಶಾಲಾ ಕಾರ್ಯಕ್ರಮದಲ್ಲಿ ಐಶ್ವರ್ಯಾ ಹಾಗೂ ಅಭಿಷೇಕ್ ಬಚ್ಚನ್ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ವದಂತಿಗೆ ತೆರೆ ಎಳೆದಿದ್ದರು. ಇದಾದ ಬಳಿಕ ಅಂಬಾನಿ ಮಗನ ಮದುವೆಯಲ್ಲಿ ಬೇರೆ ಬೇರೆ ಕಾಣಿಸಿಕೊಳ್ಳುವ ಮೂಲಕ ವಿಚ್ಛೇದನ ವದಂತಿಗೆ ಮತ್ತೊಮ್ಮೆ ಪುಷ್ಠಿ ನೀಡಿದ್ದರು. ಇದೀಗ ಉಂಗುರದ ವಿಚಾರವಾಗಿ ಇವರಿಬ್ಬರು ಮತ್ತೊಮ್ಮೆ ಸುದ್ದಿಯಲ್ಲಿದ್ದು ವಿಚ್ಛೇದನ ವದಂತಿ ಸುಳ್ಳಾಗಲಿ ಎಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.