

ನವದೆಹಲಿ: ಲಂಡನ್ನಲ್ಲಿ ಏರ್ಇಂಡಿಯಾ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ. ಲಂಡನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲಂಡನ್ನಲ್ಲಿನ ಹೆಸರಾಂತ ಹೊಟೇಲ್ನಲ್ಲಿ ಮಹಿಳಾ ಸಿಬ್ಬಂದಿ ವಿಶ್ರಾಂತಿ ಪಡೆಯುತ್ತಿದ್ದ ಕೊಠಡಿಗೆ ಅಪರಿಚಿತ ವ್ಯಕ್ತಿ ನುಗ್ಗಿ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿ, ಹಲ್ಲೆ ನಡೆಸಿದ್ದಾನೆ. ಮಹಿಳೆಯು ಸಹಾಯಕ್ಕಾಗಿ ಕಿರುಚಿದಾಗ ಅಕ್ಕಪಕ್ಕದ ರೂಮ್ನಲ್ಲಿದ್ದ ಆಕೆಯ ಸಹದ್ಯೋಗಿಗಳು ತಕ್ಷಣವೆ ನೆರವಿಗಾಗಿ ಬಂದಿದ್ದಾರೆ ಎನ್ನಲಾಗಿದೆ.
ತನ್ನ ಸಿಬ್ಬಂದಿಯ ಸುರಕ್ಷತೆ, ಭದ್ರತೆ ಹಾಗೂ ಯೋಗಕ್ಷೇಮವೆ ಮೊದಲ ಆದ್ಯತೆ. ಪ್ರಮುಖ ಅಂತಾರಾಷ್ಟ್ರೀಯ ಹೋಟೆಲ್ ರೂಮ್ಗೆ ಅಕ್ರಮವಾಗಿ ವ್ಯಕ್ತಿಯೊಬ್ಬ ನುಗ್ಗಿ ತನ್ನ ಮಹಿಳಾ ಸಿಬ್ಬಂದಿ ಹಲ್ಲೆ ನಡೆಸಿರುವುದು ದುಃಖವಾಗಿದೆ. ಈ ವಿಷಯವನ್ನು ಕಾನೂನುಬದ್ಧವಾಗಿ ಮುಂದುವರಿಸಲು ಪ್ರಯತ್ನಿಸುತ್ತಿದ್ದೇವೆ. ಸಿಬ್ಬಂದಿಯ ಖಾಸಗಿತನವನ್ನು ಗೌರವಿಸಬೇಕು ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಸದ್ಯ ಈ ವಿಷಯವನ್ನು ಲಂಡನ್ ಪೊಲೀಸರು ತನಿಖೆ ನಡೆಸುತ್ತಿದೆ. ತನಿಖೆಯಲ್ಲಿ ಭಾಗಿಯಾಗಿರುವ ಸಿಬ್ಬಂದಿಯ ಗೌಪ್ಯತೆಯನ್ನು ಗೌರವಿಸಬೇಕು. ಘಟನೆಯ ಸಂಪೂರ್ಣ ತನಿಖೆ ಹಾಗೂ ಸಂತ್ರಸ್ತೆಗೆ ನ್ಯಾಯ ಒದಗಿಸಲು ಸ್ಥಳೀಯ ಅಧಿಕಾರಿಗೆ ಸಹಕರಿಸುವುದಾಗಿ ಏರ್ಲೈನ್ಸ್ ದೃಢಪಡಿಸಿದೆ. ಅಪರಿಚಿತ ವ್ಯಕ್ತಿಯು ಮಹಿಳೆಯ ಮೇಲೆ ಬಟ್ಟೆಯ ಹ್ಯಾಂಗರ್ನಿಂದ ಹಲ್ಲೆ ಮಾಡಿದ್ದಾನೆ. ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಕೆಯನ್ನು ನೆಲದ ಮೇಲೆ ತಳ್ಳಿದ್ದಾನೆ. ಆಕೆಯು ತೀವ್ರವಾಗಿ ಗಾಯಗೊಂಡಿದ್ದು, ಭಾರತಕ್ಕೆ ಹಿಂದಿರುಗಿದ್ದಾರೆ ಎನ್ನಲಾಗಿದೆ.
ಘಟನೆ ಬಳಿಕ ಆತನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಹೇಳಲಾಗುತ್ತಿದೆ.ಲಂಡನ್ನ ಹೀಥ್ರೂನಲ್ಲಿರುವ ಹೋಟೆಲ್ನಲ್ಲಿ ಈ ಘಟನೆ ನಡೆದಿದೆ. ಆರೋಪಿಯು ನೈಜೀರಿಯಾ ಪ್ರಜೆಯಾಗಿದ್ದು ಆತನನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. (ಏಜೆನ್ಸೀಸ್)