ಪ್ರಿಯಕರ ಏರ್ಪಡಿಸಿದ್ದ ಪಾರ್ಟಿಗೆ ಖುಷಿಯಿಂದಲೇ ಹೋಗಿ, ಅಲ್ಲೇ ಆತ್ಮಹತ್ಯೆ ಮಾಡಿಕೊಂಡ ಗಗನಸಖಿ...

SUICIDE
Published on

ಗುರ್​ಗಾಂವ್​: ಅಂತಾರಾಷ್ಟ್ರೀಯ ವಿಮಾನವೊಂದರಲ್ಲಿ ಗಗನಸಖಿಯಾಗಿ (ಏರ್​ಹೋಸ್ಟೆಸ್​) ಕೆಲಸ ಮಾಡುತ್ತಿದ್ದ ಯುವತಿ ಅಪಾರ್ಟ್​ಮೆಂಟ್​ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರ್​ಗಾಂವ್​ನಲ್ಲಿ ನಡೆದಿದೆ.

ಪಗಿಲಾ (25) ಮೃತ ಏರ್​ಹೋಸ್ಟೆಸ್​. ಇವರು ಗುರ್​​ಗಾಂವ್​ನ ಡಿಎಲ್​ಎಫ್​ 3ನೇ ಫೇಸ್​​ನಲ್ಲಿ ಕಾಂಡೋಮಿನಿಯಮ್​ ಸಂಕೀರ್ಣದ ಮನೆಯೊಂದರಲ್ಲಿ ವಾಸವಾಗಿದ್ದರು. ಇಂದು ತನ್ನ ಪ್ರಿಯಕರ ಆಯೋಜಿಸಿದ್ದ ಪಾರ್ಟಿಗೆಂದು ಅವರ ಮನೆಗೆ ಹೋಗಿದ್ದರು. ಆಕೆಯ ಬಾಯ್​ಫ್ರೆಂಡ್​ ಡಿಸಿಯಲ್​ ಶರ್ಮಾ ಪೈಲಟ್​ ಆಗಿದ್ದು, ಇಬ್ಬರೂ ಒಂದೇ ಸಂಸ್ಥೆಯ ವಿಮಾನದಲ್ಲಿ ಕೆಲಸ ಮಾಡುತ್ತಿದ್ದರು. ಏರ್​ಹೋಸ್ಟೆಸ್​ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆ ಎಂಬ ಆರೋಪದಡಿ ಆಕೆಯ ಸ್ನೇಹಿತ, ಪೈಲಟ್​ ವಿರುದ್ಧ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ‘ಮುಸ್ಲಿಮರಿಗೆ ಮಸೀದಿಗಳಲ್ಲಿ ನಮಾಜ್​ ಮಾಡಲು ಅವಕಾಶ ಕೊಟ್ಟರೆ ಕರೊನಾ ನಿಯಂತ್ರಣಕ್ಕೆ ಬರುತ್ತದೆ…’

ಗಗನಸಖಿಯ ಸೋದರಿಯ ಹೇಳಿಕೆಯನ್ನು ಪೊಲೀಸರು ಪಡೆದಿದ್ದಾರೆ. ನನ್ನ ಸಹೋದರಿ ಪಾರ್ಟಿಗೆ ಹೋಗಲು ತುಂಬ ಉತ್ಸುಕಳಾಗಿದ್ದಳು. ಯಾವುದೇ ನೋವಿನಲ್ಲೂ ಇರಲಿಲ್ಲ. ಖಂಡಿತ ಪಾರ್ಟಿಯಲ್ಲೇ ಏನೋ ನಡೆದಿದೆ ಎಂದು ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಯುವತಿ ಪಾರ್ಟಿ ನಡೆಯುತ್ತಿದ್ದ ಫ್ಲ್ಯಾಟ್​​ನ 5ನೇ ಫ್ಲೋರ್​ನಿಂದ ರಾತ್ರಿ 11 ಗಂಟೆ ಹೊತ್ತಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಾರ್ಟಿಗೆ ಬಂದಿದ್ದ ಅತಿಥಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಹಾಗೇ, ಅಲ್ಲಿದ್ದ ಸಿಸಿಟಿವಿ ಕ್ಯಾಮರಾವನ್ನೂ ಪರಿಶೀಲನೆ ಮಾಡಲಾಗುತ್ತಿದೆ. ಕೆಲವು ಸಾಕ್ಷಿಗಳೂ ದೊರಕಿದ್ದು, ಶೀಘ್ರದಲ್ಲೇ ಕಾರಣ ಕಂಡುಹಿಡಿಯುತ್ತೇವೆ ಎಂದಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net