

ನವದೆಹಲಿ: ಮುಂಬರುವ ಚುನಾವಣೆಯಲ್ಲಿ 543 ಲೋಕಸಭಾ ಸ್ಥಾನಗಳ ಪೈಕಿ 400 ಸ್ಥಾನಗಳನ್ನು ಗೆಲ್ಲುವ ಬೃಹತ್ ಗುರಿಯನ್ನು ಬಿಜೆಪಿ ಹಾಕಿಕೊಂಡಿದೆ. ಇದನ್ನು ಸಾಧಿಸುವ ನಿಟ್ಟಿನಲ್ಲಿ ಬಿಜೆಪಿಯು ಇತರ ಪಕ್ಷಗಳ ನಾಯಕರನ್ನು ಸೆಳೆಯುವುದು ಸೇರಿದಂತೆ ಎಲ್ಲಾ ಮಾರ್ಗಗಳನ್ನು ಹುಡುಕುತ್ತಿದೆ.
ಮಂಗಳವಾರ ನಡೆದ ಮಹತ್ವದ ಕಾರ್ಯತಂತ್ರ ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಪಕ್ಷದ ವಿವಿಧ ಪ್ರಧಾನ ಕಾರ್ಯದರ್ಶಿಗಳಿಗೆ ವಿವಿಧ ಜವಾಬ್ದಾರಿಗಳನ್ನು ವಹಿಸಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರಿಗೆ ಸೇರ್ಪಡೆ ಸಮಿತಿಯ ಉಸ್ತುವಾರಿ ನೀಡಲಾಗಿದೆ.
"ಈ ಸಮಿತಿಯು ಇತರ ಪಕ್ಷಗಳ ಪ್ರಭಾವಿ ನಾಯಕರು ಮತ್ತು ಹಾಲಿ ಸಂಸದರನ್ನು ಬಿಜೆಪಿಗೆ ಕರೆತರುವ ಸಾಧ್ಯತೆಯನ್ನು ಅನ್ವೇಷಿಸುತ್ತದೆ. ಕ್ಷೇತ್ರದಲ್ಲಿ ವ್ಯಕ್ತಿಯ ಪ್ರಭಾವ ಮತ್ತು ಚುನಾವಣೆಯಲ್ಲಿ ಗೆಲ್ಲುವ ಅವರ ಸಾಮರ್ಥ್ಯದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ" ಎಂದು ಮೂಲಗಳು ತಿಳಿಸಿವೆ. ತಮ್ಮ ಪಕ್ಷ ಗೆಲ್ಲುವುದು ಕಷ್ಟ ಎಂದು ಭಾವಿಸುವ ಸ್ಥಾನಗಳಲ್ಲಿ ಇಂತಹ ಅನ್ವೇಷಣೆಯನ್ನು ಪಕ್ಷ ಮಾಡಲಿದೆ.
ಕಳೆದ ಚುನಾವಣೆಯಲ್ಲಿ ಸೋತ 160 ಸ್ಥಾನಗಳ ಮೇಲೆ ಪಕ್ಷದ ಗಮನ ನೀಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಒಮ್ಮೆ ಮಾತ್ರ 400ಕ್ಕೂ ಅಧಿಕ ಸ್ಥಾನಗಳಲ್ಲಿ ಪಕ್ಷವೊಂದು ಗೆಲುವು ಸಾಧಿಸಿದೆ. 1984 ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ಲೋಕಸಭೆಯಲ್ಲಿ 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಜಯ ಗಳಿಸಿದ ದಾಖಲೆ ಹೊಂದಿದೆ. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಯಾವುದೇ ಪಕ್ಷವು ಬಹುಮತ ಗಳಿಸಿದ್ದು ಕೂಡ 1984ರ ಚುನಾವಣೆಯೇ ಕೊನೆಯ ಬಾರಿಯಾಗಿತ್ತು.
ಪಕ್ಷದ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರಿಗೆ 2024 ರ ಲೋಕಸಭೆ ಚುನಾವಣೆಗೆ ಮುನ್ನೋಟದ ಯೋಜನೆ ರೂಪಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ.
ಚುನಾವಣಾ ಪ್ರಚಾರ ಮತ್ತು ಇತರ ಸಂಬಂಧಿತ ಕೆಲಸಗಳನ್ನು ಸುನಿಲ್ ಬನ್ಸಾಲ್ ಮತ್ತು ಇತರ ಪ್ರಧಾನ ಕಾರ್ಯದರ್ಶಿಗಳು ನೋಡಿಕೊಳ್ಳುತ್ತಾರೆ, ದುಶ್ಯಂತ್ ಗೌತಮ್ ಅವರು ದೇಶಾದ್ಯಂತ ಬೌದ್ಧರ ಸಮಾವೇಶಗಳನ್ನು ಆಯೋಜಿಸಿ, ನರೇಂದ್ರ ಮೋದಿ ಸರ್ಕಾರ ನಡೆಸಿದ ಕಾರ್ಯಗಳ ಬಗ್ಗೆ ತಿಳಿಸಲಿದ್ದಾರೆ.
ಬಿಜೆಪಿ ಮುಖ್ಯಸ್ಥ ನಡ್ಡಾ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮತ್ತು ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಭೂಪೇಂದ್ರ ಯಾದವ್, ಅಶ್ವಿನಿ ವೈಷ್ಣವ್ ಮತ್ತು ಮನ್ಸುಖ್ ಮಾಂಡವಿಯಾ ಅವರೊಂದಿಗೆ ಸಭೆ ನಡೆಸಿದರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸೇರಿಕೊಂಡರು.