

Asaduddin Owaisi: ಮುಂಬರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷದ ಅಭ್ಯರ್ಥಿ ನ್ಯಾಯಮೂರ್ತಿ ಬಿ ಸುದರ್ಶನ್ ರೆಡ್ಡಿ ಅವರಿಗೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಬೆಂಬಲ ನೀಡಲಿದೆ ಎಂದು ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ನನ್ನೊಂದಿಗೆ ಮಾತನಾಡಿದ್ದು, ಈ ಚುನಾವಣೆಯಲ್ಲಿ ನ್ಯಾಯಮೂರ್ತಿ ರೆಡ್ಡಿ ಅವರನ್ನು ಬೆಂಬಲಿಸುವಂತೆ ವಿನಂತಿಸಿಕೊಂಡಿದ್ದಾರೆ, ಆದ್ದರಿಂದ ಎಐಎಂಐಎಂ ಪಕ್ಷ ಹೈದರಾಬಾದಿ ಮತ್ತು ಗೌರವಾನ್ವಿತ ನ್ಯಾಯಮೂರ್ತಿ ರೆಡ್ಡಿ ಅವರಿಗೆ ತನ್ನ ಬೆಂಬಲವನ್ನು ನೀಡುತ್ತದೆ. ನಾನು ಈಗಾಗಲೇ ರೆಡ್ಡಿ ಅವರೊಂದಿಗೂ ಮಾತನಾಡಿದ್ದು, ಅವರಿಗೆ ಶುಭಾಶಯಗಳನ್ನು ತಿಳಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಆರ್ಜೆಡಿ ಬೆಂಬಲ
ಬಿ ಸುದರ್ಶನ್ ರೆಡ್ಡಿ ಅವರು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ಅವರಿಗೆ ನಮ್ಮ ಎಲ್ಲಾ ಸಂಸದರ ಬೆಂಬಲ ನೀಡುತ್ತೇವೆ, ರೆಡ್ಡಿಯವರು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುತ್ತಾರೆ ಮತ್ತು ಸದನವನ್ನು ಪರಿಣಾಮಕಾರಿಯಾಗಿ ನಡೆಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ತೇಜಸ್ವಿ ಯಾದವ್, ಸಂವಿಧಾನವನ್ನು ರಕ್ಷಿಸಬಲ್ಲ ಮತ್ತು ಎಲ್ಲರೊಂದಿಗೆ ಕೆಲಸ ಮಾಡಬಲ್ಲ ವ್ಯಕ್ತಿಯ ಅವಶ್ಯಕತೆ ಇದೆ ಎಂದಿದ್ದರು.
ಸುದರ್ಶನ್ ರೆಡ್ಡಿ ಹಿನ್ನಲೆ
2007 ರಲ್ಲಿ ಸುಪ್ರೀಂ ಕೋರ್ಟ್ಗೆ ಬಡ್ತಿ ಪಡೆಯುವ ಮೊದಲು ಗುವಾಹಟಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ ನ್ಯಾಯಮೂರ್ತಿ ಬಿ ಸುದರ್ಶನ್ ರೆಡ್ಡಿ ಜುಲೈ 2011 ರಲ್ಲಿ ನಿವೃತ್ತರಾದರು. ಅಷ್ಟೆ ಅಲ್ಲದೇ 1990ರಲ್ಲಿ ಆರು ತಿಂಗಳ ಕಾಲ ಕೇಂದ್ರ ಸರ್ಕಾರದ ಹೆಚ್ಚುವರಿ ಸ್ಥಾಯಿ ಕೌನ್ಸಿಲ್ ಆಗಿಯೂ ಕೆಲಸ ಮಾಡಿದರು. ಅವರು ಉಸ್ಮಾನಿಯಾ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರ ಮತ್ತು ಸ್ಥಾಯಿ ಕೌನ್ಸಿಲ್ ಆಗಿ ಕೆಲಸ ಮಾಡಿದರು. ಅವರನ್ನು ಮೇ 2 1995 ರಂದು ಆಂಧ್ರಪ್ರದೇಶ ಹೈಕೋರ್ಟ್ನ ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು.
ಸೆಪ್ಟೆಂಬರ್ 9 ರಂದು ನಡೆಯಲಿರುವ ಭಾರತದ ಉಪರಾಷ್ಟ್ರಪತಿ ಚುನಾವಣೆಗೆ ಎನ್ಡಿಎಯ ಸಿಪಿ ರಾಧಾಕೃಷ್ಣನ್ ವಿರುದ್ಧ ವಿರೋಧ ಪಕ್ಷದ ಅಭ್ಯರ್ಥಿಯಾಗಿ ನ್ಯಾಯಮೂರ್ತಿ ಬಿ ಸುದರ್ಶನ್ ರೆಡ್ಡಿ ಅವರನ್ನು ಘೋಷಿಸಲಾಯಿತು, ಚುನಾವಣೆಯ ದಿನವೇ ಮತ ಎಣಿಕೆ ನಡೆಯಲಿದೆ.(ಏಜೆನ್ಸೀಸ್)