16 ವರ್ಷ, 11 ಕೋಟಿ ರೂ.ಗೂ ಅಧಿಕ ಹಣ! ಕೆಲಸಕ್ಕೆ ಹಾಜರಾಗದಿದ್ರೂ ಸಂಬಳ ಮಾತ್ರ ಪಕ್ಕಾ | School Teacher

ವಿಜಯವಾಣಿ (36)
Published on

School Teacher: ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು, ಕಳೆದ 16 ವರ್ಷಗಳಿಂದ ಶಾಲೆಗೆ ಹೋಗದೆ, ಮಕ್ಕಳಿಗೆ ಪಾಠ ಮಾಡದೆಯೇ ಬರೋಬ್ಬರಿ 11 ಕೋಟಿ ರೂ.ಗೂ ಅಧಿಕ ಮೊತ್ತದ ಹಣವನ್ನು ಗಳಿಸಿರುವುದು ಸದ್ಯ ಹಲವರ ಹುಬ್ಬೇರಿಸಿದೆ.

ಅಷ್ಟಕ್ಕೂ ಈ ಘಟನೆ ಜರ್ಮನಿಯಲ್ಲಿ ನಡೆದಿದ್ದು, ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜರ್ಮನಿಯ ನಾರ್ತ್ ರೈನ್-ವೆಸ್ಟ್‌ಫಾಲಿಯಾ ರಾಜ್ಯದ ಮಹಿಳಾ ಶಿಕ್ಷಕಿ, ಕಳೆದ 16 ವರ್ಷಗಳಿಂದ ಅಂದರೆ 2009ರಿಂದ ರಜೆಯಲ್ಲಿದ್ದಾರೆ. ಇಷ್ಟು ವರ್ಷಗಳಲ್ಲಿ, ಆಕೆ ಒಂದೇ ಒಂದು ದಿನವೂ ಶಾಲೆಗೆ ಹಾಜರಾಗಿಲ್ಲ, ಮಕಳಿಗೆ ಪಾಠ ಹೇಳಿಕೊಟ್ಟಿಲ್ಲ. ಆದರೂ ಸಹ ಸಂಸ್ಥೆ, ಮನೆಯಲ್ಲೇ ಕುಳಿತ ಶಿಕ್ಷಕಿಗೆ ತಿಂಗಳಾಂತ್ಯದ ಸಂಬಳವನ್ನು ತಪ್ಪದೇ ಕೊಟ್ಟಿದೆ.

ಜರ್ಮನ್ ಪತ್ರಿಕೆ 'ಡೈ ವೆಲ್ಟ್‌'ನ ವರದಿ ಪ್ರಕಾರ, ಶಾಲೆಯಲ್ಲಿ ಕೆಲಸ ಮಾಡುವ ಶಿಕ್ಷಕರ ಪ್ರತಿ ತಿಂಗಳು ಸಂಬಳ ಸುಮಾರು 6,174 ಯುರೋಗಳು (ಅಂದರೆ ಸುಮಾರು 6.3 ಲಕ್ಷ ರೂ.). ಅಲ್ಲಿಗೆ ಅವರ ವಾರ್ಷಿಕ ಆದಾಯ ಸುಮಾರು 72,000 ಯುರೋ (ಅಂದರೆ, 74 ಲಕ್ಷ ರೂ.). ಇದನ್ನು ಗಮನಿಸಿ ನೋಡುವುದಾದರೆ, ಕಳೆದ 16 ವರ್ಷಗಳಲ್ಲಿ, ಆಕೆ ಒಟ್ಟು 1 ಮಿಲಿಯನ್ ಯುರೋಗಳನ್ನು (ಸುಮಾರು 11.6 ಕೋಟಿ ರೂ.) ಸಂಬಳವಾಗಿ ಪಡೆದಿದ್ದಾರೆ.

ಇತ್ತೀಚೆಗೆ, ಹೊಸ ಅಧಿಕಾರಿಗಳು ಶಾಲೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಈ ವಿಷಯ ಬಟಾಬಯಲಾಗಿದೆ. ಶಾಲೆಗೆ ಬಾರದ ಶಿಕ್ಷಕಿಗೆ ಹೇಗೆ ಸಂಬಳ ನೀಡಲಾಗುತ್ತಿದೆ? ಎಂಬುದನ್ನು ತನಿಖೆ ಮಾಡಿದ ಅಧಿಕಾರಿಗಳು, ಮಹಿಳೆ ಪ್ರತಿ ತಿಂಗಳು ವೈದ್ಯಕೀಯ ಪ್ರಮಾಣಪತ್ರಗಳನ್ನು ಸಲ್ಲಿಸುತ್ತಿರುವುದನ್ನು ಪರಿಶೀಲಿಸಿದ್ದಾರೆ. ಆದರೆ, ಅದ್ಯಾವುದು ಅಧಿಕೃತ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿಲ್ಲ ಅನ್ನೋದನ್ನು ಖಚಿತಪಡಿಸಿಕೊಂಡಿದ್ದಾರೆ. ಈ ವೇಳೆ ಆಕೆಯನ್ನು ವಿಚಾರಣೆ ನಡೆಸಿದ ಅವರು, ನೀವು ವೈದ್ಯಕೀಯ ಪರೀಕ್ಷೆಗೆ ಹಾಜರಾಗಿ ಎಂದರು. ಇದರಿಂದ ಆತಂಕಕ್ಕೊಳಗಾದ ಮಹಿಳೆ, ಪರೀಕ್ಷೆಗೆ ಒಳಪಡಲು ನಿರಾಕರಿಸಿದರು.

ತನ್ನ ವಂಚನೆಯನ್ನು ಬಯಲಿಗೆಳೆದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ ಶಿಕ್ಷಕಿ, ಕೋರ್ಟ್​ ಮೆಟ್ಟಿಲೇರಿದರು. ಈ ವೇಳೆ, ಜರ್ಮನ್ ನ್ಯಾಯಾಲಯವು ಮಹಿಳೆಯ ಮೇಲ್ಮನವಿಯನ್ನು ವಜಾಗೊಳಿಸಿತು. ಅನಾರೋಗ್ಯಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕೇಳುವ ಹಕ್ಕು ಅಧಿಕಾರಿಗಳಿಗೆ ಇದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಶಿಕ್ಷಕಿಯ ಅರ್ಜಿ ವಜಾಗೊಳಿಸಿದ ಕೋರ್ಟ್​, ಮಹಿಳೆಗೆ 2,500 ಯುರೋಗಳಷ್ಟು (ಸುಮಾರು 2.9 ಲಕ್ಷ ರೂ.) ಕಾನೂನು ವೆಚ್ಚವನ್ನು ಪಾವತಿಸಲು ಆದೇಶಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net