

ನವದೆಹಲಿ: ಈಗ ಎಲ್ಲೆಲ್ಲೂ ಮಾಸ್ಕ್, ಪಿಪಿಟಿ ಕಿಟ್ದ್ದೇ ಮಾತು. ಜನಸಾಮಾನ್ಯರಿಗೆ ಮಾಸ್ಕ್ ಅಗತ್ಯ ಇರುವಂತೆ ಕರೊನಾ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆರೋಗ್ಯ ಸಿಬ್ಬಂದಿಗೆ ಪಿಪಿಟಿ ಕಿಟ್ ರಕ್ಷಣಾ ಕವಚ ಅಗತ್ಯವಾಗಿ ಬೇಕೇ ಬೇಕು. ಇಲ್ಲದಿದ್ದರೆ ಅವರ ಜೀವಕ್ಕೇ ಅಪಾಯವಿದೆ.
ಇಂಥ ಸನ್ನಿವೇಶದಲ್ಲಿ ಎಲ್ಲಾ ರಕ್ಷಣಾ ಕವಚ ಸರಿಯಾಗಿದ್ದರೂ ವೈದ್ಯರ ಕುಟುಂಬದಲ್ಲಿ ಒಂದು ರೀತಿಯ ಆತಂಕ ಮನೆ ಮಾಡಿರುವ ದಿನಗಳಿವು. ಅವರ ಆತಂಕಕ್ಕೆ ಸಾಕ್ಷಿ ಎಂಬಂತೆ ಕೆಲವು ವೈದ್ಯರಿಗೆ ಸೋಂಕು ಕೂಡ ಬಾಧಿಸಿಬಿಟ್ಟಿವೆ.
ಇಂಥ ಆತಂಕದ ಕ್ಷಣಗಳು ಇರುವಾಗ "ನೀನು ಸತ್ತರೂ ಚಿಂತೆಯಿಲ್ಲ, ಅದರ ಬಗ್ಗೆ ನಾನು ಹೆಮ್ಮೆ ಪಡುವೆ, ಅಗತ್ಯ ಕಂಡುಬಂದರೆ ಮಾಸ್ಕ್, ಪಿಪಿಟಿ ಕಿಟ್ ಮಾತ್ರ ಧರಿಸಬೇಡ' ಎಂದು ಕುಟುಂಬಸ್ಥರು ಕರೊನಾ ಸೋಂಕಿತರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮಕ್ಕಳಿಗೆ ಹೇಳಲು ಸಾಧ್ಯವೆ?
ಎಲ್ಲಾದರೂ ಉಂಟೆ ಎಂದು ಕೇಳಬೇಡಿ. ಹೀಗೆ ಹೇಳಿದ್ದಾರೆ ದೆಹಲಿಯ ವೈದ್ಯರೊಬ್ಬರ ತಂದೆ. ಹೌದು! ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ (ಏಮ್ಸ್) ಕರೊನಾ ಸೋಂಕಿತರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾ.ಜಾಹಿದ್ ಅಬ್ದುಲ್ ಮಜೀದ್ ಅವರ ತಂದೆ ತಮ್ಮ ಮಗನಿಗೆ ಈ ಸಂದೇಶವನ್ನು ನೀಡಿರುವ ಹಿನ್ನೆಲೆಯಲ್ಲಿ, ಜಾಹಿದ್ ಯಾವುದೇ ರಕ್ಷಣಾ ಕವಚ ಇಲ್ಲದೆಯೇ ಸೋಂಕಿತನೊಬ್ಬನಿಗೆ ಚಿಕಿತ್ಸೆ ನೀಡಿದ್ದಾರೆ.
ಕಾಶ್ಮೀರದ ಅನಂತನಾಗ್ ಜಿಲ್ಲೆಯ ಡಾ.ಜಾವೇದ್ ಹೀಗೆ ಮಾಡಿರುವ ಹಿಂದೆ ಒಳ್ಳೆಯ ಉದ್ದೇಶವೂ ಇದೆ. ಅದೇನೆಂದರೆ ರೋಗಿಯೊಬ್ಬನ ಪ್ರಾಣವನ್ನು ಉಳಿಸಲು ಜಾವೇದ್ ಅವರಿಗೆ ಇದು ಅನಿವಾರ್ಯವಾಗಿತ್ತು.
ಸೋಂಕಿತನನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಯ ಆಘಾತ ಕೇಂದ್ರಕ್ಕೆ ಕರೆದುಕೊಂಡು ಹೋಗುವ ದಾರಿಯಲ್ಲಿ ಸೋಂಕಿತನಿಗೆ ನೀಡಲಾಗಿದ್ದ ಟ್ಯೂಬ್ನಲ್ಲಿ ವ್ಯತ್ಯಾಸವಾಗಿರುವುದು ಗಮನಕ್ಕೆ ಬಂತು. ಅದನ್ನು ಸರಿ ಮಾಡದೇ ಹೋದಲ್ಲಿ ರೋಗಿಯು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಇತ್ತು. ಆದರೆ ರೋಗಿಯ ಸಮೀಪ ಪಿಪಿಟಿ ಕಿಟ್, ಮಾಸ್ಕ್ ಎಲ್ಲಾ ಧರಿಸಿ ಹೋಗುವಷ್ಟು ಜಾಗ ಇರಲಿಲ್ಲ. ಅದನ್ನು ಧರಿಸಿ ಹೋಗುತ್ತಿದ್ದರೆ ಒಳಗಡೆ ಹೋಗಲು ಅವಕಾಶ ಇರಲಿಲ್ಲ. ಆದ್ದರಿಂದ ಡಾ.ಜಾಹಿದ್ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಎಲ್ಲವನ್ನೂ ಕಳಚಿ, ಸೋಂಕಿತನ ಸೇವೆಯಲ್ಲಿ ತೊಡಗಿಸಿಕೊಂಡರು.
ಇಂಥ ಸನ್ನಿವೇಶ ಎದುರಾಗುವ ಸಾಧ್ಯತೆಯ ಬಗ್ಗೆ ನಮ್ಮ ತಂದೆಯವರಿಗೆ ತಿಳಿದಿತ್ತು. ಆದ್ದರಿಂದ ಹಿಂದಿನ ದಿನವಷ್ಟೇ ನನ್ನನ್ನು ಕರೆದರು, 'ಚಿಕಿತ್ಸೆ ಸಂದರ್ಭದಲ್ಲಿ ನೀನು ಸತ್ತರೂ ನಾನು ಹೆಮ್ಮೆ ಪಡುತ್ತೇವೆ. ಮಾಸ್ಕ್, ಪಿಪಿಟಿ ಕಿಟ್ ಇಲ್ಲದೇ ನೀನು ಮೃತಪಟ್ಟರೂ ನಾನು ದುಃಖಿಸುವುದಿಲ್ಲ. ರೋಗಿಯ ಜೀವ ಉಳಿಸುವುದು ಮುಖ್ಯ. ಅದಕ್ಕಾಗಿ ಮಾಸ್ಕ್ ಹಾಕದೇ ಸೇವೆ ಮುಂದುವರೆಸು. ಅದರಲ್ಲಿಯೂ ಇದು ರಂಜಾನ್ ಮಾಸ. ಇಂಥ ಸಂದರ್ಭದಲ್ಲಿ ನಿನಗೆ ಎಂಥದ್ದೇ ಅನಾಹುತ ಆದರೂ ನನಗೆ ನೋವಿಲ್ಲ. ನೀನು ಹುತಾತ್ಮ ಆಗಿರುವಿ ಎಂದು ನಾನು ಹೆಮ್ಮೆ ಪಡುತ್ತೇನೆ ಎಂದಿದ್ದರು.
ಅದರಿಂದ ನನ್ನ ಹೃದಯದ ಭಾರ ಕಡಿಮೆಯಾಗಿ, ನಾನು ಸೇವೆಯಲ್ಲಿ ತೊಡಗಿಸಿಕೊಂಡೆ ಎಂದಿದ್ದಾರೆ ಜಾಹಿದ್.
ದಯವಿಟ್ಟು ಯಾವ ವೈದ್ಯರೂ ಪಿಪಿಟಿ ಕಿಟ್ ಇಲ್ಲದೇ ಸೇವೆ ಸಲ್ಲಿಸಬೇಡಿ ಎಂದೂ ಹೇಳಿರುವ ಅವರು, ಸೋಂಕಿತನ ಸಂಪರ್ಕಕ್ಕೆ ನೇರ ಬಂದಿರುವ ಹಿನ್ನೆಲೆಯಲ್ಲಿ ಸದ್ಯ ಕ್ವಾರಂಟೈನ್ನಲ್ಲಿ ಇದ್ದಾರೆ. (ಏಜೆನ್ಸೀಸ್)