ಖರ್ಗೆಗೆ ಕಾಂಗ್ರೆಸ್ ಅಧ್ಯಕ್ಷ ಕಿರೀಟ: ಕೊನೆಯ ದಿನ ನಾಮಪತ್ರ ಸಲ್ಲಿಕೆ, ಗಾಂಧಿಯೇತರ ನಾಯಕನ ನೇತೃತ್ವ

Front
Published on

ಬೆಂಗಳೂರು: ಇತ್ತ, ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಪ್ರವೇಶಿಸಿ ಕಾಂಗ್ರೆಸ್​ನ ಉತ್ಸಾಹ ಇಮ್ಮಡಿಸುತ್ತಿದ್ದಂತೆ, ಅತ್ತ ದೆಹಲಿಯಲ್ಲಿ ಮಹತ್ವದ ಬೆಳವಣಿಗೆ ನಡೆದು ಪಕ್ಷದ ಚುಕ್ಕಾಣಿಯೂ ರಾಜ್ಯಕ್ಕೆ ದಕ್ಕುವ ಸನ್ನಿವೇಶ ನಿರ್ವಣವಾಗಿದೆ. ಹಿರಿಯ ಕಾಂಗ್ರೆಸ್ಸಿಗ, ಗಾಂಧಿ ಕುಟುಂಬಕ್ಕೆ ನಿಷ್ಠ ಹಾಗೂ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಎಐಸಿಸಿ ಅಧ್ಯಕ್ಷ ಸ್ಥಾನ ದೊರೆಯುವುದು ಬಹುತೇಕ ಖಚಿತವಾಗಿದೆ.

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಶುಕ್ರವಾರ ಖರ್ಗೆ ಉಮೇದುವಾರಿಕೆ ಸಲ್ಲಿಸಿದರು. ಹತ್ತು ರಾಜ್ಯಗಳ ಕಾಂಗ್ರೆಸ್ ಪ್ರತಿನಿಧಿಗಳು ಖರ್ಗೆ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಿದ್ದಾರೆ. ಗಾಂಧಿ ಕುಟುಂಬ ಮಾತ್ರವಲ್ಲದೆ, ಜಿ-23 ಬಣದವರೂ ಖರ್ಗೆಗೆ ಬೆಂಬಲ ಸೂಚಿಸಿರುವುದರಿಂದ ಅವರ ಆಯ್ಕೆ ನಿಶ್ಚಿತವಾಗಿದೆ. ಸಂಸದ ಶಶಿ ತರೂರ್ ಹಾಗೂ ಕೆ.ಎನ್. ತ್ರಿಪಾಠಿ ಹೆಸರಿಗಷ್ಟೇ ಕಣದಲ್ಲಿ ಇರುವಂತಾಗಿದೆ.

ಖರ್ಗೆಯೇ ಯಾಕೆ?

  • ಗಾಂಧಿ ಪರಿವಾರದ ನಿಷ್ಠ, ಪಕ್ಷದ ಶಿಸ್ತಿನ ಸಿಪಾಯಿ
  • ಸಂಸತ್ ವಿಪಕ್ಷ ನಾಯಕನಾಗಿ ಉತ್ತಮ ನಿರ್ವಹಣೆ
  • ಯುಪಿಎ ಮಿತ್ರಪಕ್ಷಗಳನ್ನು ನಿಭಾಯಿಸುವ ಜಾಣ್ಮೆ
  • ಸಿಎಂ ಸ್ಥಾನ ಬಿಡಲೊಪ್ಪದ ಗೆಹ್ಲೋಟ್ ಹಠಮಾರಿತನ
  • ವಿವಿಧ ಪಕ್ಷಗಳ ಮುಖಂಡರೊಂದಿಗೆ ಉತ್ತಮ ಬಾಂಧವ್ಯ
  • ಪಕ್ಷ ಸಂಘಟನೆಗೆ ಶಕ್ತಿ ತುಂಬಬಲ್ಲ ವಿಶ್ವಾಸ

ಚುನಾವಣಾ ವೇಳಾಪಟ್ಟಿ

  • ನಾಮಪತ್ರ ಹಿಂಪಡೆಯಲು ಕೊನೆಯ ದಿನ: ಅ.8
  • ಅಗತ್ಯವಿದ್ದಲ್ಲಿ ಚುನಾವಣೆ: ಅ.17, ಫಲಿತಾಂಶ: 19

ರಾಜ್ಯಕ್ಕೆ ರಾಹುಲ್ ಯಾತ್ರೆ

ಗುಂಡ್ಲುಪೇಟೆ (ಚಾಮರಾಜನಗರ): ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯನ್ನು ರಾಜ್ಯದಲ್ಲಿ ಶುಕ್ರವಾರ ಅತ್ಯುತ್ಸಾಹದಿಂದ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಮುಂಬರುವ ವಿವಿಧ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಕಾಂಗ್ರೆಸ್ ಹಮ್ಮಿಕೊಂಡಿರುವ ಯಾತ್ರೆ ತನ್ನ ಉದ್ದೇಶವನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತಾ, ಶಕ್ತಿ- ಉತ್ಸಾಹ ಕುಂದಿಲ್ಲ ಎಂದು ಸಂದೇಶ ನೀಡುತ್ತ ರಾಜ್ಯದಲ್ಲಿ ಮೊದಲ ದಿನ ಪೂರ್ಣಗೊಳಿಸಿದೆ. ಊಟಿ- ಕ್ಯಾಲಿಕಟ್ ಹೆದ್ದಾರಿ ಪಕ್ಕದಲ್ಲಿ ಕೆಪಿಸಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಹುಲ್​ರನ್ನು ರಾಜ್ಯಕ್ಕೆ ಬರಮಾಡಿಕೊಳ್ಳಲಾಯಿತು. ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕೈ ಹಿಡಿದು ರಾಹುಲ್ ನಗಾರಿ ಬಾರಿಸಿದ್ದು ವಿಶೇಷವಾಗಿತ್ತು. ರಾಹುಲ್ ಅಕ್ಕಪಕ್ಕದಲ್ಲೇ ಇಬ್ಬರೂ ಹೆಜ್ಜೆ ಹಾಕಿದರು.

ಯಾತ್ರೆಯುದ್ದಕ್ಕೂ ದೇಶದ ಜನರ ದನಿಯನ್ನು ಕೇಳಲಾಗುವುದು. ಇದನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ | ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net