ಪಾರ್ಶ್ವವಾಯು ಪೀಡಿತ ರೋಗಿಗೆ ನೆರವಾದ ಎಐ! 18 ವರ್ಷಗಳ ಬಳಿಕ ಮಾತನಾಡಿದ ಮಹಿಳೆ

Stroke Woman
Published on

ನವದೆಹಲಿ: ಜಗತ್ತು ತಾಂತ್ರಿಕವಾಗಿ ತುಂಬಾ ಮುಂದೆ ಸಾಗುತ್ತಿದ್ದು, ಹಲವು ಅಚ್ಚರಿಗಳಿಗೆ ಕಾರಣವಾಗುತ್ತಿದೆ. ಸುಧಾರಿತ ತಂತ್ರಜ್ಞಾನವು ಇದೀಗ ಪಾರ್ಶ್ವವಾಯು ಪೀಡಿತ ಮಹಿಳೆಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿರುವುದು ನಿಜಕ್ಕೂ ಸೋಜಿಗದ ಸಂಗತಿಯೇ.

ಹೌದು, ತೀವ್ರವಾಗಿ ಪಾರ್ಶ್ವವಾಯುವಿಗೆ ಒಳಗಾಗಿರುವ ಮಹಿಳೆ ತನ್ನ ಮೆದುಳಿನ ಸಂಕೇತಗಳನ್ನು ಮಾತು ಮತ್ತು ಮುಖಭಾವಗಳಾಗಿ ಪರಿವರ್ತಿಸುವುದರೊಂದಿಗೆ ಕೃತಕ ಬುದ್ಧಿಮತ್ತೆ ಮೂಲಕ ಸಂವಹನ ನಡೆಸಿದ್ದಾಳೆ. ಈ ಒಂದು ಸಾಧನೆ ಪಾರ್ಶ್ವವಾಯು ಮತ್ತು ಎಎಲ್​ಎಸ್​ ನಂತಹ ಪರಿಸ್ಥಿತಿಗಳಿಂದಾಗಿ ಸಂವಹನ ಸಾಮರ್ಥ್ಯವನ್ನು ಕಳೆದುಕೊಂಡಿರುವ ವ್ಯಕ್ತಿಗಳಿಗೆ ಹೊಸ ಭರವಸೆವನ್ನು ನೀಡಲಿದೆ.

ಈ ಹಿಂದೆ ರೋಗಿಗಳು ಸ್ಲೋ ಸ್ಪೀಚ್ ಸಿಂಥಸೈಜರ್ ಅನ್ನು ಅವಲಂಬಿಸಬೇಕಾಗಿತ್ತು. ಪದಗಳನ್ನು ರಚಿಸಲು ಆಗಾಗ ಕಣ್ಣಿನ ಟ್ರ್ಯಾಕಿಂಗ್ ಅಥವಾ ಸೂಕ್ಷ್ಮವಾದ ಮುಖದ ಚಲನೆಯನ್ನು ಅವಲಂಬಿಸಬೇಕಿತ್ತು. ಆದರೆ, ಸ್ಲೋ ಸ್ಪೀಚ್ ಸಿಂಥಸೈಜರ್ ಮೂಲಕ ನೈಸರ್ಗಿಕ ಸಂಭಾಷಣೆಗಳನ್ನು ನಡೆಸುವುದು ತುಂಬಾ ಕಷ್ಟಕರವಾಗಿತ್ತು. ಆದರೆ, ಇದೀಗ ಯುಸಿ ಸ್ಯಾನ್​ ಫ್ರಾನ್ಸಿಸ್ಕೋ (ಯುಸಿಎಸ್​ಎಫ್​), ತನ್ನ ಯುಟ್ಯೂಬ್​ನಲ್ಲಿ ಪ್ರಕಟಿಸಿರುವ ವಿಡಿಯೋ ಪ್ರಕಾರ ಹೊಸ ತಂತ್ರಜ್ಞಾನ ಹೊಸ ಅವಕಾಶವನ್ನು ತೆರೆದಿಟ್ಟಿದೆ.

ಈ ಹೊಸ ತಂತ್ರಜ್ಞಾನವು ಮೆದುಳಿನ ಮೇಲ್ಮೈಯಲ್ಲಿರುವ ಮೈನಸ್ಕ್ಯೂಲ್ ವಿದ್ಯುದ್ವಾರಗಳನ್ನು ಬಳಸಿಕೊಂಡು ಮಾತು ಮತ್ತು ಮುಖದ ಅಭಿವ್ಯಕ್ತಿಗಳನ್ನು ನಿಯಂತ್ರಿಸುವ ಮೆದುಳಿನ ಭಾಗದಲ್ಲಿರುವ ಎಲೆಕ್ಟ್ರಿಕಲ್​ ಆ್ಯಕ್ಟಿವಿಟಿಯನ್ನು ಪತ್ತೆಹಚ್ಚಲಿದೆ. ಈ ಸಿಗ್ನಲ್​ಗಳು ತಕ್ಷಣ ಕೃತಕ ಬುದ್ಧಿಮತ್ತೆ ಮೂಲಕ ಮಾತು ಮತ್ತು ಮುಖದ ಭಾವನೆಗಳಿಗೆ ಅನುವಾದಿಸಲಾಗುತ್ತದೆ. ಇದರ ಮೂಲಕ ನಗು, ಬೇಸರ ಮತ್ತು ಅಚ್ಚರಿಯಂತಹ ಭಾವನೆಗಳನ್ನು ವ್ಯಕ್ತಪಡಿಸಬಹುದು.

Stroke Woman 1

ಆ್ಯನ್​ ಹೆಸರಿನ 47 ವರ್ಷದ ರೋಗಿಯೊಬ್ಬಳು ಕಳೆದ 18 ವರ್ಷಗಳಿಂದ ಗಂಭೀರತರವಾದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಆಕೆಗೆ ಮಾತನಾಡವುದಕ್ಕಾಗಲಿ ಅಥವಾ ಟೈಪ್​ ಮಾಡುವುದಕ್ಕಾಗಲಿ ಸಾಧ್ಯವಾಗುತ್ತಿಲ್ಲ. ಆದರೆ, ಮೋಷನ್​ ಟ್ರ್ಯಾಕಿಂಗ್​ ಟೆಕ್ನಾಲಜಿ ಬಳಸಿಕೊಂಡು ನಿಧಾನವಾಗಿ ಅಂದರೆ ನಿಮಿಷಕ್ಕೆ 14 ಪದಗಳನ್ನು ಹೇಳುವ ಮೂಲಕ ಸಂವಹನ ನಡೆಸುತ್ತಿದ್ದಳು. ಆದರೆ, ಆ್ಯನ್​ ಇದೀಗ ಎಐ ಟೆಕ್ನಾಲಜಿ ಮೂಲಕ ಸಮಾಲೋಚಕಿಯಾಗಿ ಕೆಲಸ ಮಾಡುವ ಆಸೆಯನ್ನು ಹೊಂದಿದ್ದಾರೆ.

ಸಂಶೋಧನಾ ತಂಡವು ಆ್ಯನ್​ ಅವರ ಮೆದುಳಿನ ಮೇಲ್ಮೈನಲ್ಲಿ ಅದರಲ್ಲೂ ಮಾತಿಗೆ ಸಂಬಂಧಿಸಿದ ಭಾಗದಲ್ಲಿ ಕಾಗದದಷ್ಟು ತೆಳುವಾದ 253 ಎಲೆಕ್ಟ್ರೋಡ್ಸ್​ ಅಳವಡಿಸಿದ್ದಾರೆ. ಈ ಎಲೆಕ್ಟ್ರೋಡ್ಸ್ ನಾಲಿಗೆ, ದವಡೆ, ಗಂಟಲಕುಳಿ ಮತ್ತು ಮುಖದ ಸ್ನಾಯುಗಳು ನಿಯಂತ್ರಣ ಹೊಂದಿರುವ ಮೆದುಳಿನ ಸಿಗ್ನಲ್​ಗಳನ್ನು ಪ್ರತಿಬಂಧಿಸುತ್ತದೆ. ಎಲೆಕ್ಟ್ರೋಡ್ಸ್​ ಅಳವಡಿಕೆಯ ನಂತರ ತನ್ನ ವಿಶಿಷ್ಟ ಮೆದುಳಿನ ಸಂಕೇತಗಳನ್ನು ಗುರುತಿಸಲು AI ಅಲ್ಗಾರಿದಮ್ ತರಬೇತಿಗಾಗಿ ಆ್ಯನ್ ಸಂಶೋಧನಾ ತಂಡದೊಂದಿಗೆ ಸಹಕರಿಸಿದರು. ಕಂಪ್ಯೂಟರ್​ 39 ವಿಭಿನ್ನ ಶಬ್ದಗಳನ್ನು ಕಲಿಯುವಲ್ಲಿ ಯಶಸ್ವಿಯಾಗಿದ್ದು, ಈ ಸಿಗ್ನಲ್​ಗಳನ್ನು ಚಾಟ್​ ಜಿಪಿಟಿ ಸ್ಟೈಲ್​ ಲಾಗ್ವೇಜ್​ ಮಾಡೆಲ್​, ಸುಸಂಬದ್ಧ ವಾಕ್ಯಗಳನ್ನಾಗಿ ಬದಲಾಯಿಸಿದೆ. ಈ ಸಾಲುಗಳನ್ನು ಆ್ಯನ್​ ಅವರ ಪಾರ್ಶ್ವವಾಯು ಸಮಸ್ಯೆಗಿಂತ ಮೊದಲು ಇದ್ದ ಧ್ವನಿಗೆ ಹೋಲಿಸಿ ಎಐ ಟೆಕ್ನಾಲಜಿ ಮೂಲಕ ಮಾತು ಹಾಗೂ ಭಾವನೆಗಳು ಮೂಲಕ ವ್ಯಕ್ತಪಡಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ, ಸ್ಯಾನ್ ಫ್ರಾನ್ಸಿಸ್ಕೊ (UCSF) ಪ್ರೊಫೆಸರ್ ಹಾಗೂ ಈ ಸಂಶೋಧನೆಯನ್ನು ಮುನ್ನಡೆಸುತ್ತಿರುವ ಎಡ್ವರ್ಡ್ ಚಾಂಗ್, ನಮ್ಮ ಗುರಿಯು ಸಂಪೂರ್ಣ ಸಾಕಾರಗೊಂಡ ಸಂವಹನ ಮಾರ್ಗವನ್ನು ಪುನಃಸ್ಥಾಪಿಸುವುದಾಗಿದೆ. ಇದು ನಿಜವಾಗಿಯೂ ಇತರರೊಂದಿಗೆ ಮಾತನಾಡಲು ನಮಗೆ ಅತ್ಯಂತ ನೈಸರ್ಗಿಕ ಮಾರ್ಗವಾಗಿದೆ. ಈ ಸುಧಾರಿತ ಕ್ರಮ ರೋಗಿಗಳಿಗೆ ನಿಜವಾದ ಪರಿಹಾರವನ್ನು ಹುಡುಕಲು ನಮ್ಮನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತವೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net