ತತ್ತರಿಸಿದ ಅಹಮದಾಬಾದ್; ಬೀದಿಬದಿ ವ್ಯಾಪಾರಿಗಳಿಂದಲೇ ಸೋಂಕು...

Corona 1
Published on

| ರಾಘವ ಶರ್ಮ ನಿಡ್ಲೆ, ನವದೆಹಲಿ

ಕರೊನಾ ವೈರಸ್ ಪ್ರಸರಣದಿಂದ ಗುಜರಾತ್​ನ ಅಹಮದಾಬಾದ್ ತತ್ತರಿಸಿದೆ. ನಿತ್ಯವೂ ನೂರಾರು ಕೇಸುಗಳು ಪತ್ತೆಯಾಗುತ್ತಿರುವುದು ನಗರ ನಿವಾಸಿಗರನ್ನು ಹೈರಾಣಾಗಿಸಿದೆ. ಹಳೇ ಅಹಮದಾಬಾದ್ ಪ್ರದೇಶಗಳಲ್ಲಿ ಸಾವಿರಾರು ಮಂದಿಗೆ ವೈರಾಣು ತಗುಲಿ ಹತ್ತಾರು ಮಂದಿ ಮೃತಪಟ್ಟಿದ್ದಾರೆ. ಲಾಕ್ ಡೌನ್ ಸಡಿಲಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದ್ದರೂ, ಮನೆಯಿಂದ ಹೊರ ಬರಲು ಧೈರ್ಯ ಮಾಡುತ್ತಿಲ್ಲ.

ಗುಜರಾತ್ ನಲ್ಲಿ ಕರೊನಾ ಕೇಸು 12,000ದ ಗಡಿಯಲ್ಲಿದೆ. ವೈರಾಣುಗೆ ಬಲಿಯಾಗಿರುವ ರಾಜ್ಯದ 694 ಮಂದಿಯಲ್ಲಿ 555 ಮಂದಿ ಅಹಮದಾಬಾದ್​ನವರು. ಹಾಗೆ ನೋಡಿದರೆ ಅಹಮದಾಬಾದ್​ನಲ್ಲಿ ಮೊದಲ ಕರೊನಾ ಕೇಸು ಬೆಳಕಿಗೆ ಬಂದಿದ್ದು ಮಾರ್ಚ್ 17ರಂದು. ಮಾರ್ಚ್ ಅಂತ್ಯಕ್ಕೂ 25 ಕೇಸುಗಳಷ್ಟೇ ದಾಖಲಾಗಿದ್ದವು. ಮಾರ್ಚ್ 15ಕ್ಕೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ತಡೆ ನೀಡಿದ್ದರಿಂದ ಈ ಪರಿಯಲ್ಲಿ ಕೇಸುಗಳು ಹೆಚ್ಚಾಗಲು ಅಂತರಾಷ್ಟ್ರೀಯ ಪ್ರಯಾಣಿಕರೇ ಮುಖ್ಯ ಕಾರಣ ಎನ್ನಲಾಗದು. ಸ್ಥಳೀಯವಾಗಿ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿರುವುದು, ತಬ್ಲಿಘಿ ಜಮಾತ್ ಸದಸ್ಯರ ಹಾವಳಿ ಹಾಗೂ ಹಳೆ ಅಹಮದಾಬಾದ್ ಪ್ರದೇಶಗಳ ಸೋಂಕಿತರಿಗೆ ಸಕಾಲದಲ್ಲಿ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡದಿರುವುದೇ ಪ್ರಮುಖ ಕಾರಣ ಎಂದು ವಿಶ್ಲೇಷಿಸ ಲಾಗುತ್ತಿದೆ ಮೇಲಾಗಿ, ಬೀದಿ ಬದಿ ವ್ಯಾಪಾರಿಗಳಿಂದಲೂ ವಿಪರೀತವಾಗಿ ಸೋಂಕು ಹಬ್ಬಿತು ಎಂದು ಸ್ಥಳೀಯರೇ ಹೇಳುತ್ತಾರೆ. ಏಪ್ರಿಲ್ 13ರ ವೇಳೆಗೆ ನಗರದಲ್ಲಿ 282 ಕೇಸುಗಳಿದ್ದವು ಮತ್ತು ಅವುಗಳಲ್ಲಿ 42 ಪ್ರಕರಣಗಳಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಯಾಣದ ಹಿನ್ನೆಲೆಗಳಿದ್ದವು. ಉಳಿದೆಲ್ಲಾ ವ್ಯಕ್ತಿಗಳಿಗೆ ದೆಹಲಿಯ ನಿಜಾಮುದ್ದಿನ್ ಮರ್ಕಜ್ ನಲ್ಲಿ ನಡೆದಿದ್ದ ಜಮಾತ್ ಸಭೆಯಲ್ಲಿ ಪಾಲ್ಗೊಂಡ ಕಾರಣದಿಂದಲೇ ವೈರಾಣು ತಗುಲಿಕೊಂಡಿತ್ತು ಎಂದು ದಾಖಲೆಗಳೇ ಹೇಳುತ್ತವೆ.

ಆಡಳಿತ ವೈಫಲ್ಯ

ನಗರದಲ್ಲಿ ವೈರಾಣು ಹರಡುವಿಕೆಗೆ ಕಾರಣವಾಗಿದ್ದ ಸೂಪರ್ ಸ್ಪ್ರೆಡರ್​ಗಳನ್ನು ತಕ್ಷಣಕ್ಕೆ ಗುರುತಿಸುವಲ್ಲೂ ಸ್ಥಳೀಯಾಡಳಿತ ವಿಫಲವಾಗಿತ್ತು. ವೈರಸ್ ಸೋಂಕಿತರ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾದ ಬಳಿಕ ಎಚ್ಚೆತ್ತುಕೊಂಡಿದ್ದ ಪಾಲಿಕೆ, ಏಪ್ರಿಲ್ 30ರಂದು ತರಕಾರಿ ವ್ಯಾಪಾರಸ್ಥರು ಹಾಗೂ ದಿನಸಿ ಅಂಗಡಿಗಳಲ್ಲಿನ ಸಿಬ್ಬಂದಿ ಪರೀಕ್ಷೆಗೆ ಮುಂದಾಗಿದ್ದರು. ಅದಾದ ಬಳಿಕ ಸೂಪರ್ ಸ್ಪ್ರೆಡರ್ ಗಳೆಂದು ಗುರುತಿಸಲಾಗಿದ್ದ ಸುಮಾರು 500 ವ್ಯಾಪಾರಸ್ಥರಿಗೆ ಪಾಲಿಕೆ ವತಿಯಿಂದ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳನ್ನು ವಿತರಿಸಲಾಯಿತು. ಹಾಗಿದ್ದರೂ, ವೈರಾಣು ಹರಡುವಿಕೆ ಕಡಿಮೆಯಾಗದ್ದರಿಂದ ನಗರದಲ್ಲಿ ಬೆಳಗ್ಗಿನ ಸಮಯದಲ್ಲಿ ಮೇ 7ರಿಂದ 15ರ ತನಕ ಹಾಲು ಮತ್ತು ಔಷಧ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಮೇ 10ರ ಮಾಹಿತಿ ಪ್ರಕಾರ ನಗರದ 330 ಸೂಪರ್ ಸ್ಪ್ರೆಡರ್ ಗಳಲ್ಲಿ ಕರೊನಾ ವೈರಸ್ ಇರುವುದು ದೃಢವಾಗಿದೆ. ಈ ವ್ಯಕ್ತಿಗಳ ಸಂಪರ್ಕಕ್ಕೆ ಎಷ್ಟು ಮಂದಿ ಬಂದಿದ್ದರೋ? ಅವರಿಗೆ ಕರೊನಾ ಹಬ್ಬಿದೆಯೋ? ಮುಂದಿನ ದಿನಗಳಲ್ಲೇ ಗೊತ್ತಾಗಲಿದೆ. ಸೂಪರ್ ಸ್ಪ್ರೆಡರ್​ಗಳನ್ನು ಸ್ಥಳೀಯಾಡಳಿತ ಮೊದಲೇ ಗುರುತಿಸಿ ಪೂರ್ಣ ಎಚ್ಚರಿಕಾ ಕ್ರಮಗಳನ್ನು ಜಾರಿ ಮಾಡುತ್ತಿದ್ದರೆ ನಗರದಲ್ಲಿ ಸ್ವಲ್ಪ ಮಟ್ಟಿಗೆ ವೈರಾಣು ಹರಡುವಿಕೆ ತಡೆಯಬಹುದಿತ್ತು. ಲಾಕ್ ಡೌನ್ ಹೊರತಾಗಿಯೂ ಸಂಖ್ಯೆ ಹೆಚ್ಚಾಗಿರುವುದು ಹೇಗೆ ಎಂಬುದಕ್ಕೆ ಸ್ಥಳೀಯಾಡಳಿತ ಉತ್ತರ ನೀಡಬೇಕು ಎಂದು ಹವ್ಯಾಸಿ ಪತ್ರಕರ್ತ ಸಾಗರ್ ಪಟೇಲ್ ಹೇಳುತ್ತಾರೆ.

ಕರೊನಾ ಕೇಸುಗಳು ಹೆಚ್ಚಾಗಿರುವುದರಿಂದ ಪೇಟೆಯಲ್ಲಿ ಸಾಮಗ್ರಿ ಖರೀದಿ ಕಡಿಮೆ ಮಾಡಿ ಆನ್​ಲೈನ್​ನಲ್ಲಿ ಅಗತ್ಯ ಸಾಮಗ್ರಿಗಳನ್ನು ಖರೀದಿ ಮಾಡುತ್ತಿದ್ದೇನೆ. ಕರೊನಾ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬರುವ ತನಕ ನಾಗರಿಕರೆಲ್ಲರೂ ಆನ್​ಲೈನ್ ಖರೀದಿಗೆ ಆದ್ಯತೆ ನೀಡಬೇಕು ಮತ್ತು ಇಂತಹ ಅನಿವಾರ್ಯ ಸ್ಥಿತಿಯಲ್ಲಿ ಮನೆಯಲ್ಲೇ ಇರುವುದು ಅಗತ್ಯ ಎನ್ನವುದನ್ನು ಅರ್ಥಮಾಡಿಕೊಳ್ಳಬೇಕು. | ರಾಘವೇಂದ್ರ ವಡೋದರ ಕನ್ನಡ ಸಂಘದ ಕಾರ್ಯದರ್ಶಿ ಇಲ್ಲಿ ಕರೊನಾ ಹಬ್ಬಲು ದೆಹಲಿ ಜಮಾತ್ ಸಭೆಯಲ್ಲಿ ಪಾಲ್ಗೊಂಡು ಅಹಮದಾಬಾದ್ ಗೆ ವಾಪಸಾದವರು ಮುಖ್ಯ ಕಾರಣ. ಸಭೆ ಮುಗಿಸಿ ಬಂದ ಅನೇಕ ಮಂದಿ ಜಮಾಲ್ಪುರ ಸೇರಿದಂತೆ ಆ ಸಮುದಾಯದ ಜನಸಂಖ್ಯೆ ಹೆಚ್ಚಿರುವ ಪ್ರದೇಶದಲ್ಲಿ ಉಳಿದುಕೊಂಡಿದ್ದರು. ಸೋಂಕಿನ ಲಕ್ಷಣಗಳಿದ್ದರೂ ಅನೇಕ ಮಂದಿ ಪರೀಕ್ಷೆ ಮಾಡಿಕೊಳ್ಳಲು ಮುಂದಾಗಿರಲಿಲ್ಲ. ಅವರ ಸಂಪರ್ಕಕ್ಕೆ ಬಂದ ನೂರಾರು ಮಂದಿಗೂ ವೈರಾಣು ದೊಡ್ಡ ಪ್ರಮಾಣದಲ್ಲಿ ಹರಡಿಕೊಂಡಿತು. ನಗರದ ಜಮಾಲ್ಪುರ, ದರಿಯಾಪುರ, ದಾನಿ ಲಿಂಬ್ಡಾ, ಗುಪ್ತಾ ನಗರಗಳಲ್ಲಿ ವೈರಾಣು ಭಾರೀ ಸಂಖ್ಯೆಯ ಜನರನ್ನು ಬಾಧಿಸಿದೆ. ಈ ವೈರಾಣನ್ನು ಕೊಲ್ಲಲು ಔಷಧ ಇನ್ನೂ ಕಂಡು ಹಿಡಿಯಲಾಗಿಲ್ಲ. ಹೀಗಾಗಿ, ನಿಯಂತ್ರಣವೊಂದೇ ಪರಿಹಾರ. ಇದನ್ನು ಜನ ಅರ್ಥಮಾಡಿಕೊಳ್ಳಬೇಕು. ಆದರೆ, ಅದು ಸಾಧ್ಯವಾಗದ್ದರಿಂದಲೇ ನಾವು (ಅಹಮದಾಬಾದ್ ನಿವಾಸಿಗರು) ಆತಂಕದ ನೆರಳಲ್ಲಿ ದಿನ ಕಳೆಯುವಂತಾಗಿದೆ. ಸುದ್ದಿ ವಾಹಿನಿಗಳಲ್ಲಿ ಸೋಂಕು, ಸಾವಿನ ಸುದ್ದಿಗಳನ್ನು ಕೇಳಿ ಕೇಳಿ ರಾತ್ರಿಯೂ ನಿದ್ದೆ ಬರದಂತಾಗಿದೆ. | ಎಂ.ಎಸ್. ರಾವ್ ಲೇಖಕರು  ಅಹಮದಾಬಾದ್

ಜವಾಬ್ದಾರಿ ಕೊರತೆ

ಕರೊನಾ ಹರಡುವಿಕೆ ತಡೆಗೆ ಮನೆಯಲ್ಲಿರುವುದು ಸೂಕ್ತ ಎಂದು ಎಷ್ಟೇ ಹೇಳಿದರೂ ಜನ ವೈರಾಣುವಿನ ಗಂಭೀರತೆ ಅರ್ಥ ಮಾಡಿಕೊಂಡಿಲ್ಲ ಎಂಬ ಆಪಾದನೆಯೂ ಕೇಳಿಬಂದಿದೆ. ಮನೆಯಿಂದ ಹೊರ ಬರುವವರನ್ನು ವಾಪಸ್ ಮನೆಗಟ್ಟುವುದು ಪೊಲೀಸರಿಗೆ ನಿತ್ಯ ಕಾಯಕವಾಗಿ ಬಿಟ್ಟಿದೆ. ಹಳೆ ಅಹಮದಾಬಾದ್ ಶೇ.80ರಷ್ಟು ಪ್ರಕರಣಗಳಲ್ಲಿ ಕರೊನಾ ಲಕ್ಷಣಗಳೇ ಕಂಡುಬಂದಿಲ್ಲ ಅಥವಾ ಸಣ್ಣಪುಟ್ಟ ಲಕ್ಷಣಗಳಷ್ಟೇ ಕಂಡಿವೆ. ಹೆಚ್ಚು ಪ್ರಕರಣಗಳಿರುವ ಪ್ರದೇಶಗಳು ಅತಿ ಹೆಚ್ಚು ಜನಸಂಖ್ಯೆ ಇರುವ ಮತ್ತು ಗಲ್ಲಿ, ಓಣಿಗಳಿಂದ ಕೂಡಿವೆ. ಹೀಗಾಗಿ, ಅಲ್ಲಿರುವ ಸೋಂಕಿತರಿಗೆ ಹೋಮ್ ಕ್ವಾರಂಟೈನ್ ಮಾಡಿ ಎಂದು ಆದೇಶಿಸುವುದೂ ಅಪಾಯಕಾರಿ. ಮೇಲಾಗಿ, ಈ ಪ್ರದೇಶಗಳ ಜನರಿಗೆ ಕರೊನಾ ನಿಯಂತ್ರಣದ ಬಗ್ಗೆ ಜವಾಬ್ದಾರಿಯಾಗಲೀ, ಅರಿವಾಗಲೀ ಎರಡೂ ಇಲ್ಲ ಎಂದು ಮತ್ತೊಬ್ಬ ಕನ್ನಡಿಗರು ಆಕ್ರೋಶ ಹೊರಹಾಕುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net