

ಬಾಗಲಕೋಟೆ: ವಿವಾದಿತ ಎಪಿಎಂಸಿ ತಿದ್ದುಪಡಿ ಕಾಯ್ದೆ-2020 ಸುಗ್ರೀವಾಜ್ಞೆಗೆ ಬಾಗಲಕೋಟೆ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ವಿರೋಧ ವ್ಯಕ್ತಪಡಿಸಿದ್ದಾರೆ.
ಕಾಯ್ದೆ ಜಾರಿ ವೇಳೆ ಮತ ಹಾಕುವಾಗ ವಿಪ್ ಜಾರಿ ಮಾಡಲಾಗುತ್ತದೆ. ಆಗ ಸರ್ಕಾರದ ಪರ ನಾನು ವೋಟು ಹಾಕಬೇಕು. ಅದು ಬೇರೆ ವಿಷಯ. ಪಕ್ಷದಲ್ಲಿ ಇದ್ದೇವೆ ಎಂದ ಮಾತ್ರಕ್ಕೆ ಎಲ್ಲವನ್ನೂ ಒಪ್ಪಬೇಕೆಂದಿಲ್ಲ. ನಾವು ನಮ್ಮ ಅಭಿಪ್ರಾಯ ಹೇಳುವ ಸ್ವಾತಂತ್ರೃ ಇದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದನ್ನೂ ಓದಿ: ರೈತರು, ಎಪಿಎಂಸಿ ಹಿತಕ್ಕಾಗಿ ಹಳೇ ಕಾಯ್ದೆ ಇರಲಿ
ಈಗಾಗಲೇ ಫೋನ್ ಮಾಡಿ ಸಚಿವ ಗೋವಿಂದ ಕಾರಜೋಳ, ಜಗದೀಶ ಶೆಟ್ಟರ್, ಈಶ್ವರಪ್ಪ ಜತೆ ಮಾತನಾಡಿದ್ದೇನೆ. ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕಾಯ್ದೆ ತಿದ್ದುಪಡಿಯಿಂದ ರೈತರಿಗಾಗುವ ಅನನುಕೂಲಗಳ ಬಗ್ಗೆ ತಿಳಿಹೇಳುತ್ತೇನೆ. ಸುಗ್ರೀವಾಜ್ಞೆ ಆಗಿದ್ದರೂ ಮಸೂದೆ ಬಗ್ಗೆ ಚರ್ಚೆ ನಡೆದಾಗ ನನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳುತ್ತೇನೆ ಎಂದರು.
ಹೊಸ ಕಾಯ್ದೆಯಿಂದ ಏನಾಗುತ್ತದೆ ಅಂದರೆ, ಈಗಾಗಲೇ ಅನೇಕರು ಹಳ್ಳಿಗಳಿಗೆ ಹೋಗಿ ದಾಸ್ತಾನು ಖರೀದಿ ಮಾಡುತ್ತಾರೆ. ರೈತರು ಮುಗ್ಧರು, ಹೆಚ್ಚಿನ ಬೆಲೆ ಕೊಡುತ್ತೇವೆ ಎಂದಾಗ ದಾಸ್ತಾನು ಕೊಡುತ್ತಾರೆ. ಒಂದು ಎರಡು ಸಲ ಬೆಲೆ ಕೊಟ್ಟು ಮೂರನೇ ಸಲ ದುಡ್ಡು ಕೊಡದೆ ಪರಾರಿ ಆಗಿರುವ ಅನೇಕ ಉದಾಹರಣೆಗಳು ಇವೆ. ಆದರೆ, ಎಪಿಎಂಸಿಯಲ್ಲಿ ಈ ರೀತಿ ಮೋಸ ಮಾಡಲು ಆಗಲ್ಲ. ರೈತರಿಗೆ ಪಟ್ಟಿ ಕೊಡುತ್ತಾರೆ. ಸರ್ಕಾರಕ್ಕೆ ಭರಿಸಬೇಕಾದ ಜಿಎಸ್ಟಿ ವಂಚಿಸಲು ಬರಲ್ಲ. ರೈತರು ಮತ್ತು ಎಪಿಎಂಸಿಯ ಹಿತದೃಷ್ಟಿಯಿಂದ ಹಾಲಿ ಇರುವ ಪದ್ಧತಿಯನ್ನು ಮುಂದುವರಿಸಬೇಕು ಎಂದರು.